– ಪುನೀತ್ಗೆ ಮತ್ತೆ ಕ್ರಾಸ್ ಎಕ್ಸಾಮಿನೇಷನ್
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ (Darshan) ಬೆನ್ನುನೋವಿನ ಸಮಸ್ಯೆ ಹಾಗೂ ಜೈಲಿನಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ವರದಿ ಇಂದು (ನವೆಂಬರ್ 12) ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ.
ಇದೇ ವೇಳೆ ಪ್ರಕರಣದ ಸಾಕ್ಷಿ ಪುನೀತ್ ಅವರ ಕ್ರಾಸ್ ಎಕ್ಸಾಮಿನೇಷನ್ (Cross Examination) ಪ್ರಕ್ರಿಯೆಯೂ ಇಂದಿನಿಂದ ಮತ್ತೆ ಮುಂದುವರಿಯಲಿದೆ. ದರ್ಶನ್ಗೆ ಬೆನ್ನುನೋವಿನ ಸಮಸ್ಯೆ ಇರುವ ಹಿನ್ನೆಲೆ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಪಿಸಿಯೋಥೆರಪಿ ಕುರಿತು ಸಂಪೂರ್ಣ ವೈದ್ಯಕೀಯ ವರದಿ ಸಲ್ಲಿಸುವಂತೆ 59ನೇ ಸಿಸಿಹೆಚ್ ನ್ಯಾಯಾಲಯ ಸೂಚನೆ ನೀಡಿತ್ತು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ವೈದ್ಯಾಧಿಕಾರಿಗಳು ದರ್ಶನ್ ಅವರ ಪ್ರಸ್ತುತ ಆರೋಗ್ಯ ಸ್ಥಿತಿ, ಬೆನ್ನುನೋವಿನ ತೀವ್ರತೆ, ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಪಿಸಿಯೋಥೆರಪಿ ಕುರಿತು ವಿವರವಾದ ವರದಿಯನ್ನ ಇಂದು ಕೋರ್ಟ್ಗೆ ಸಲ್ಲಿಸಬೇಕಿದೆ. ದರ್ಶನ್ಗೆ ಪ್ರತಿನಿತ್ಯ ಪಿಸಿಯೋಥೆರಪಿ ನೀಡಲಾಗುತ್ತಿದೆಯೇ? ಬೆನ್ನುನೋವಿನ ಸಮಸ್ಯೆ ಈಗ ಯಾವ ಹಂತದಲ್ಲಿದೆ? ಜೈಲಿನಲ್ಲಿಯೇ ಅಗತ್ಯ ಚಿಕಿತ್ಸೆ ಲಭ್ಯವಿದೆಯೇ? ಎಂಬ ಪ್ರಮುಖ ಅಂಶಗಳ ಕುರಿತು ವೈದ್ಯಕೀಯ ವರದಿಯಲ್ಲಿ ಮಾಹಿತಿ ಇರಲಿದೆ.
ಒಂದು ವೇಳೆ ಜೈಲಿನಲ್ಲಿ ಅಗತ್ಯ ವೈದ್ಯಕೀಯ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಸರ್ಕಾರಿ ಆಸ್ಪತ್ರೆ ಅಥವಾ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸಂಸ್ಥೆಗೆ ರೆಫರ್ ಮಾಡುವಂತೆಯೂ ನ್ಯಾಯಾಲಯ ಸೂಚಿಸಿತ್ತು. ಇಂದು ಸಲ್ಲಿಕೆಯಾಗುವ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ಬಳಿಕ ಅಗತ್ಯವಿದ್ದಲ್ಲಿ ಸ್ವತಂತ್ರ ವೈದ್ಯಕೀಯ ಮಂಡಳಿಯ ಅಭಿಪ್ರಾಯ ಪಡೆಯುವ ಬಗ್ಗೆಯೂ ನ್ಯಾಯಾಲಯ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಇಂದಿನಿಂದ ಮತ್ತೆ ಪುನೀತ್ ಕ್ರಾಸ್ ಎಕ್ಸಾಮಿನೇಷನ್
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆಯಲಿದೆ. ಪ್ರಕರಣದ ಸಾಕ್ಷಿಯಾಗಿರುವ ಪುನೀತ್ನ ಕ್ರಾಸ್ ಎಕ್ಸಾಮಿನೇಷನ್ ಇಂದಿನಿಂದ ಮತ್ತೆ ಆರಂಭವಾಗಲಿದೆ. ಪ್ರಮುಖ ಸಾಕ್ಷ್ಯ ನುಡಿಯುವ ಸಂದರ್ಭದಲ್ಲಿ ಪುನೀತ್ ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದ. ಈ ಹಿನ್ನೆಲೆಯಲ್ಲಿ ಪುನೀತ್ನನ್ನ ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಪುನೀತ್ ಉಲ್ಟಾ ಹೇಳಿಕೆಗಳ ಹಿನ್ನೆಲೆ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಪ್ರಸನ್ನ ಕುಮಾರ್ ಅವರು ಇಂದು ಮತ್ತೆ ಕ್ರಾಸ್ ಎಕ್ಸಾಮಿನೇಷನ್ ನಡೆಸಲಿದ್ದಾರೆ.
ವಿಶೇಷವಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಸಿಆರ್ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಪುನೀತ್ ನೀಡಿದ್ದ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಎಸ್ಪಿಪಿ ಪ್ರಶ್ನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

