-ಅಕ್ಷತೆ ಕಾಳು ಹಾಕಬೇಕಿತ್ತು, ಅಕ್ಕಿಕಾಳು ಹಾಕುವ ಪರಿಸ್ಥಿತಿ ಬಂದಿದೆ
ಬೆಂಗಳೂರು: ಇವತ್ತು ಅರಿಶಿಣ ಶಾಸ್ತ್ರ (Haldi Ceremony) ಮಾಡಬೇಕಿತ್ತು. ಆದರೆ ತಿಥಿ ಮಾಡುವ ಹಾಗಾಯ್ತು ಎಂದು ಅಪಘಾತದಲ್ಲಿ ಮೃತಪಟ್ಟ ಸಿಂಧೂಶ್ರೀ ತಂದೆ ನಂಜುಂಡಪ್ಪ ಅವರು ಮಗಳ ನೆನೆದು ಕಣ್ಣೀರಿಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಾಸ್ಟ್ ಒಂದೇ ಒಂದು ಪತ್ರಿಕೆ ಕೊಡ್ತೀನಿ ಅಂತಾ ಹೋಗಿದ್ಲು. ಆದ್ರೆ ಈ ಥರ ಆಗೋಯ್ತು. ಇವತ್ತು ಅರಶಿಣ ಕಾರ್ಯಕ್ರಮ, ನಾಳೆ ಬಳೆ ಶಾಸ್ತ್ರ. ಚೌಟ್ರಿಗೆ ಹೋಗಬೇಕಿತ್ತು. ಆದರೆ ಎಲ್ಲಾ ಮುಗಿದೋಯ್ತು. ನನ್ನ ಮಗಳ ತಿಥಿ ಮಾಡೋ ಹಾಗಾಯ್ತು. ದೊಡ್ಡ ಟ್ರಕ್ ಅದು. ನನಗೆ ಒಬ್ಬಳೇ ಮಗಳು. ಇನ್ನೊಬ್ಲು ನನ್ನ ತಂಗಿ ಮಗಳು ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಮದುವೆಗೆ ಆಮಂತ್ರಣ ನೀಡಲು ತೆರಳುತ್ತಿದ್ದಾಗ ಸ್ಕೂಟಿಗೆ ಲಾರಿ ಡಿಕ್ಕಿ – ಇಬ್ಬರು ಯುವತಿಯರು ದುರ್ಮರಣ
ಟ್ರಕ್, ಗೂಡ್ಸ್ ವಾಹನಗಳಿಗೆ ರೂಲ್ಸ್ ತರಬೇಕು. ನವ ವಧು ಸಾವಿಗೆ ಟ್ರಕ್ ಕಾರಣ ಆಯ್ತು. ಟ್ರಕ್ಗಳು ಸಿಟಿಯಲ್ಲಿ ಹಗಲಿನ ಹೊತ್ತಿನಲ್ಲಿ ಎಂಟ್ರಿ ಇಲ್ಲ ಅಂತಾರೆ. ಕಾನೂನಿನ ಪ್ರಕಾರ ಪೊಲೀಸರು ಟ್ರಕ್ ಅನ್ನ ತಡೆದಿದ್ರೆ ಈ ರೀತಿ ಆಗ್ತಿರಲಿಲ್ಲ. ಇಬ್ಬರ ಜೀವ ಹೋಗಿದೆ. ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕಿತ್ತು ಎಂದು ಮೃತಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಂಬಂಧಿಕ ಶಂಕ್ರಪ್ಪ ಮಾತನಾಡಿ, ಅವರ ತಂದೆ ಆಟೋ ಡ್ರೈವರ್. 20 ವರ್ಷದಿಂದ ಅವ್ರು ಇಲ್ಲೇ ಇದ್ರು. ಮದುವೆ ಎಂತಾ ಎಲ್ರೂ ಊರಿನ ಕಡೆ ಬಂದಿದ್ರು. ಅವ್ರ ಅಮ್ಮ ಊರಿಗೆ ಬಂದಿದ್ರು. ಇವ್ರೂ ಊರಿಗೆ ಬರಬೇಕಿತ್ತು. ಫ್ರೆಂಡ್ ಒಬ್ರಿಗೆ ಕಾರ್ಡ್ ಕೊಡೋದು ಮಿಸ್ ಆಗಿದೆ ಅಂತಾ ಪಕ್ಕದ ಮನೆಯವ್ರ ಬೈಕ್ ತೆಗೆದುಕೊಂಡು ಕಾರ್ಡ್ ಕೊಡೋಕೆ ಹೋಗ್ತಿದ್ರು. ಟ್ರಕ್ ಅವ್ನು ಬ್ರೇಕ್ ಹಾಕಿದ್ರೆ ಬದುಕುತ್ತಿದ್ರು. ಒಬ್ರ ತಲೆ ಮೇಲೆ ಹರಿದಿದೆ, ಮತ್ತೊಬ್ರ ಮೈಮೇಲೆ ಹರಿದಿದೆ. ಮದುವೆ ಕಾರ್ಯಕ್ರಮ ಇತ್ತು. ಆದ್ರೆ ಈ ರೀತಿ ಆಗಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಎಲ್ಲರನ್ನೂ ಮುಗಿಸಿಬಿಟ್ರೆ 3 ಕೋಟಿ ಆಸ್ತಿ ನಮ್ಮದೇ – ಮಗಳ ಬ್ರೈನ್ವಾಷ್ ಮಾಡಿದ್ದ ಹಂತಕ; ತನಿಖೆಯಲ್ಲಿ ಸಾಬೀತು
ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ ವಧು ಸಿಂಧೂಶ್ರೀ ಮತ್ತು ವಿದ್ಯಾ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಮಾರ್ಚರಿ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳನ್ನ ನೆನೆದು ತಾಯಿ, ಅಕ್ಷತೆ ಕಾಳು ಹಾಕಬೇಕಿತ್ತು. ಮಗಳಿಗೆ ಅಕ್ಕಿಕಾಳು ಹಾಕುವ ಪರಿಸ್ಥಿತಿ ಬಂದಿದೆ ಎಂದು ಕಣ್ಣೀರು ಹಾಕಿದ್ದಾರೆ. ಮದುವೆ ಮಂಟಪಕ್ಕೆ ಬರಬೇಕಿದ್ದ ಸಂಬಂಧಿಕರನ್ನು ವಿಧಿ ಮಾರ್ಚರಿಗೆ ಕರೆತಂದಿದೆ. ಇತ್ತ ಮದುವೆ ಸಂಭ್ರಮದಲ್ಲಿ ಭಾಗಿಯಾಗಬೇಕಿದ್ದವರು ಸೂತಕದಲ್ಲಿ ಭಾಗಿಯಾಗಿದ್ದಾರೆ.
ಸದ್ಯ ಟ್ರಕ್ ಚಾಲಕನಿಗಾಗಿ ಬ್ಯಾಟರಾಯನಪುರ ಸಂಚಾರ ಪೊಲೀಸರು (Byatarayanapura Police) ಹುಡುಕಾಟ ನಡೆಸಿದ್ದು, ತನಿಖೆ ಮುಂದುವರಿದಿದೆ.ಇದನ್ನೂ ಓದಿ: ಖಾಸಗಿ ಫೋಟೋ ವೈರಲ್ ಮಾಡೋದಾಗಿ ಬೆದರಿಕೆ – ಜೂನಿಯರ್ ಆರ್ಟಿಸ್ಟ್ ಮೇಲೆ ಮಾಜಿ ಲವ್ವರ್ನಿಂದ ಹಲ್ಲೆ
