ಬೆಂಗಳೂರು: ಮದುವೆಗೆ ಆಮಂತ್ರಣ (Wedding Invitation) ಪತ್ರ ನೀಡಲು ತೆರಳುತ್ತಿದ್ದಾಗ ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು-ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ (Deepanjali Nagar Metro Station) ಬಳಿ ನಡೆದಿದೆ.
ಸ್ಕೂಟಿಯಲ್ಲಿ ತೆರಳುತ್ತಿದ್ದ ಸಿಂದುಶ್ರೀ (29) ಮತ್ತು ವಿದ್ಯಾ (19) ಮೃತಪಟ್ಟ ದುರ್ದೈವಿಗಳು. ಹಿಂಬದಿಯಿಂದ ಬಂದ ಲಾರಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದಿದ್ದು, ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಮೃತಪಟ್ಟ ಸಿಂದುಶ್ರೀಗೆ ಸೋಮವಾರ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಸಂಬಂಧಿಸಿದಂತೆ ಆಮಂತ್ರಣ ಪತ್ರಿಕೆ ನೀಡಲು ಅತ್ತೆ ಮಗಳು ವಿದ್ಯಾ ಜೊತೆ ಕತ್ರಿಗುಪ್ಪೆಗೆ ತೆರಳುತ್ತಿದ್ದ ವೇಳೆ ಈ ದುರಂತ ನಡೆದಿದೆ. ಇದನ್ನೂ ಓದಿ: ನ.13ರಂದು ರಾಜ್ಯಕ್ಕೆ ಮೋದಿ ಭೇಟಿ: ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಮದುವೆಗೆ ಇನ್ನು ಕೇವಲ ನಾಲ್ಕು ದಿನ ಬಾಕಿ ಇರುವಾಗಲೇ ಸಿಂದುಶ್ರೀ ಸಾವನ್ನಪ್ಪಿರುವುದು ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದೆ. ಅಪಘಾತದ ಬಳಿಕ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬ್ಯಾಟರಾಯನಪುರ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ ಲಾರಿ ವಶಕ್ಕೆ ಪಡೆದಿದ್ದಾರೆ. ಇಬ್ಬರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ಚಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ವಾಕಿಂಗ್ ಮಾಡುವಾಗ ಕುಸಿದು ಬಿದ್ದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ – ಆಸ್ಪತ್ರೆಗೆ ದಾಖಲು
