ನವದೆಹಲಿ: ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಅವರು ಬುಧವಾರ ಬೆಳಗ್ಗೆ ವಾಕಿಂಗ್ ಮಾಡುವಾಗ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದು, ಅವರನ್ನು ದೆಹಲಿಯ (Delhi) ಏಮ್ಸ್ ಆಸ್ಪತ್ರೆಗೆ (AIIMS Hospital) ದಾಖಲಿಸಲಾಗಿದೆ.
ಸದ್ಯ ಅವರ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈವರೆಗೆ ಏಮ್ಸ್ ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. 75 ವರ್ಷದ ಮಾಜಿ ರಾಜ್ಯಸಭಾ ಸಭಾಪತಿ ಧನಕರ್ ಅವರನ್ನು ಆಸ್ಪತ್ರೆಯ ಕಾರ್ಡಿಯೋ-ನ್ಯೂರೋ ಕೇಂದ್ರಕ್ಕೆ ದಾಖಲಿಸಲಾಗಿದೆ. ಹೃದ್ರೋಗ ವಿಭಾಗದ ವೈದ್ಯರ ಮೇಲ್ವಿಚಾರಣೆಯಲ್ಲಿ ಅವರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಳಗಿನ ವಾಕಿಂಗ್ ವೇಳೆ ಧನಕರ್ ಕುಸಿದು ಬಿದ್ದಿದ್ದು, ಕೆಲವು ನಿಮಿಷಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರೊಂದಿಗೆ ಇದ್ದ ಭದ್ರತಾ ಸಿಬ್ಬಂದಿ ಪಿಸಿಆರ್ ವಾಹನದಲ್ಲಿ ಅವರನ್ನು ಮನೆಗೆ ಕರೆದೊಯ್ದಿದ್ದರು. ಬಳಿಕ ಐಎಲ್ಬಿಎಸ್ ವೈದ್ಯಕೀಯ ತಂಡ ಹಾಗೂ ಏಮ್ಸ್ ವೈದ್ಯ ಡಾ.ಸಂದೀಪ್ ಸೇಠ್ ಅವರು ಧನಕರ್ ಅವರಿಗೆ ಚಿಕಿತ್ಸೆ ನೀಡಿದ್ದರು. ಆದರೆ, ಅವರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಂಬುಲೆನ್ಸ್ ಮೂಲಕ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಗದೀಪ್ ಧನಕರ್ ಅವರು ಆಗಸ್ಟ್ 2022ರಿಂದ ಜುಲೈ 21, 2025ರವರೆಗೆ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. 2025ರ ಜುಲೈ 21ರಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕಳೆದ ಎರಡು ವರ್ಷಗಳಲ್ಲಿ ಧನಕರ್ ಅವರು ಹಲವು ಬಾರಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. 2025ರ ಮಾರ್ಚ್ನಲ್ಲಿ ಎದೆನೋವಿನ ಹಿನ್ನೆಲೆಯಲ್ಲಿ ಅವರನ್ನು ಏಮ್ಸ್ನ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿತ್ತು.
2025ರ ಜೂನ್ನಲ್ಲಿ ಅಧಿಕೃತ ಭೇಟಿಗಾಗಿ ನೈನಿತಾಲ್ಗೆ ತೆರಳಿದ್ದ ಸಂದರ್ಭದಲ್ಲಿ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಧನಕರ್ ಪ್ರಜ್ಞೆ ತಪ್ಪಿದ್ದರು. ತಮ್ಮ ಹಿಂದಿನ ಸಂಸದೀಯ ಸಹೋದ್ಯೋಗಿ ಮಹೇಂದ್ರ ಸಿಂಗ್ ಪಾಲ್ ಅವರನ್ನು ಆಲಿಂಗನ ಮಾಡಿಕೊಳ್ಳುವ ವೇಳೆ ಅವರು ಪ್ರಜ್ಞೆ ಕಳೆದುಕೊಂಡಿದ್ದರು ಎನ್ನಲಾಗಿದೆ. ಇನ್ನು ಜನವರಿಯಲ್ಲಿ ಮನೆಯಲ್ಲಿದ್ದಾಗ ಶೌಚಾಲಯಕ್ಕೆ ತೆರಳುವ ಸಂದರ್ಭದಲ್ಲಿ ಎರಡು ಬಾರಿ ಪ್ರಜ್ಞೆ ತಪ್ಪಿದ್ದರು.
