– ಬೆಳಗ್ಗೆಯೆಲ್ಲಾ ಚಿನ್ನ, ರನ್ನ ಅಂದು, ರಾತ್ರಿ ಎಣ್ಣೆ ಏಟಲ್ಲಿ ಗಲಾಟೆ ಮಾಡ್ತಿದ್ದ ಪತಿರಾಯ
ಬೆಂಗಳೂರು: ಬೆಳಗ್ಗೆಯೆಲ್ಲಾ ಹೆಂಡ್ತಿಯನ್ನ ಚಿನ್ನ ರನ್ನ ಅಂತಾ ಮುದ್ದಾಡಿ, ರಾತ್ರಿಯಾದ್ರೆ ಸಾಕು ಕುಡಿದು ಬಂದು ಮಕ್ಕಳಾಗಿಲ್ಲವೆಂದು ಹೆಂಡ್ತಿಗೆ ಹೊಡೆದು ಬಡಿದು ಕಿರುಕುಳ ನೀಡ್ತಿದ್ದ. ರೋಸಿಹೋದ ಪತ್ನಿ ಪತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರೊ ಸ್ಟೋರಿ ಇದೆ ನೋಡಿ…
ಬೆಂಗಳೂರಿನ ಕೆಂಪೇಗೌಡ ನಗರದ ಲಕ್ಷೀಪುರದಲ್ಲಿ ದಂಪತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯೇ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ರಾಜಶೇಖರ್ (44) ಕೊಲೆಯಾದ ದುರ್ದೈವಿ. ಈತನ ಪತ್ನಿ ಮಾಲಾಶ್ರೀ (35) ಕೊಲೆಗೈದ ಆರೋಪಿಯಾಗಿದ್ದಾಳೆ. ಖಾಸಗಿ ಬ್ಯಾಂಕಿನ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಜಶೇಖರ್, ಪ್ರತಿದಿನ ರಾತ್ರಿ ಮದ್ಯದ ನಶೆಯಲ್ಲಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದನು. ದಂಪತಿಗೆ ಮಕ್ಕಳಾಗಿರಲಿಲ್ಲ ಎಂಬ ಕಾರಣಕ್ಕೆ ಈ ವಿಷಯ ಮುಂದಿಟ್ಟುಕೊಂಡು ಆಗಾಗ ಗಲಾಟೆ ನಡೆಯುತ್ತಿತ್ತು. ಬೆಳಗ್ಗೆ ತುಂಬಾ ಚೆನ್ನಾಗಿ ನೋಡಿಕೊಳ್ತಿದ್ದ ಪತಿ ರಾತ್ರಿಯಾದರೆ ಸಾಕು ಕುಡಿದು ಬಂದು ಪತ್ನಿಗೆ ನಿತ್ಯವೂ ಕಿರುಕುಳ ನೀಡುತ್ತಿದ್ದನಂತೆ.
ನಿನ್ನೆ ರಾತ್ರಿಯೂ ಎಂದಿನಂತೆ ಕುಡಿದು ಬಂದ ರಾಜಶೇಖರ್ ಮಕ್ಕಳ ವಿಚಾರವಾಗಿ ಜಗಳ ತೆಗೆದಿದ್ದಾನೆ. ಜಗಳ ಉಲ್ಬಣಗೊಂಡಾಗ ಆಕ್ರೋಶಗೊಂಡ ಮಾಲಾಶ್ರೀ, ಮನೆಯಲ್ಲಿದ್ದ ಅಡುಗೆ ಮನೆಯ ಚಾಕುವಿನಿಂದ ಪತಿಯ ಎದೆಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜಶೇಖರ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ಈ ಸಂಬಂಧ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕೋಪಕ್ಕೆ ಬುದ್ದಿಕೊಟ್ಟ ರಾಜಶೇಖರ ಮಸಣ ಸೇರಿದ್ರೆ, ಗಂಡನ ಕೊಂದ ಮಾಲಾಶ್ರೀ ಜೈಲು ಸೇರಿದ್ದಾಳೆ.

