ಅಂದು ದೀಪಾವಳಿ ಎಂದರೆ ಹಬ್ಬವಷ್ಟೇ ಆಗಿರಲಿಲ್ಲ, ಅದು ಸಂಬಂಧಗಳ ಸಂಭ್ರಮವಾಗಿತ್ತು. ಇಂದು ದೀಪಗಳು ಬೆಳಗುತ್ತಿವೆ, ಪಟಾಕಿಗಳು ಸಿಡಿಯುತ್ತಿವೆ. ಆದರೆ ಮನಸ್ಸುಗಳನ್ನು ಬೆಸೆಯುತ್ತಿದ್ದ ಆ ಹಳೆಯ ಆತ್ಮೀಯತೆ ಮಾತ್ರ ಎಲ್ಲೋ ಕಳೆದುಹೋಗುತ್ತಿದೆ.
ದೀಪಾವಳಿ ಬಂತೆಂದರೆ ಸಾಕು, ಮನಸ್ಸು ಬಾಲ್ಯದ ದಿನಗಳತ್ತ ಓಡುತ್ತದೆ. ಅಜ್ಜಿ ಮನೆಯ ಅಂಗಳ, ಬಂಧು ಬಳಗದ ಗದ್ದಲ, ಮಕ್ಕಳ ತುಂಟಾಟ, ಅಮ್ಮನ ಅಡುಗೆಯ ಕೈರುಚಿ, ಅಪ್ಪಂದಿರ ಹರಟೆ, ಹಿರಿಯರ ನಗುಮುಖ… ಅಬ್ಬಾ! ಆ ದಿನಗಳೇ ಅದೆಷ್ಟು ಸುಂದರವಾಗಿದ್ದವು!
ನಮ್ಮಜ್ಜಿ ಕಾಲದ ದೀಪಾವಳಿ ಎಂದರೆ ಅದೊಂದು ಅದ್ಭುತ ಲೋಕವೇ ಆಗಿತ್ತು. ಹಬ್ಬಕ್ಕೆ 4-5 ದಿನಗಳಿರುವಾಗಲೇ ಮನೆಯಲ್ಲಿ ಸಿದ್ಧತೆಗಳು ಶುರುವಾಗುತ್ತಿದ್ದವು. ಮನೆ ಸ್ವಚ್ಛಗೊಳಿಸುವುದು, ದೀಪಗಳಿಗೆ ಎಣ್ಣೆ ತುಂಬಿಸುವುದು, ಸಿಹಿ ತಿಂಡಿಗಳನ್ನ ತಯಾರಿಸುವುದು ಹೀಗೆ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ.
ದೀಪಾವಳಿ ಹಬ್ಬಕ್ಕೆಂದೇ ಬಂಧು ಬಳಗದವರೆಲ್ಲ ನಮ್ಮ ಹಳ್ಳಿಗೆ ಬರುತ್ತಿದ್ದರು. ಯಾರೋ ಮಾವ, ಯಾರೋ ಚಿಕ್ಕಮ್ಮ, ದೊಡ್ಡಪ್ಪ, ಅತ್ತೆ, ಅವರ ಮಕ್ಕಳು… ಹೀಗೆ ಮನೆಯ ತುಂಬಾ ಜನವೋ ಜನ! ಮೂರು ದಿನಗಳ ಕಾಲ ಎಲ್ಲರೂ ಅಲ್ಲಿಯೇ ಠಿಕಾಣಿ ಹೂಡುತ್ತಿದ್ದರು. ಮನೆ ಚಿಕ್ಕದಾಗಿದ್ದರೂ ಮನಸ್ಸುಗಳು ವಿಶಾಲವಾಗಿದ್ದವು. ಮಲಗಲು ಜಾಗವಿಲ್ಲದಿದ್ದರೂ ಯಾರಿಗೂ ಬೇಸರವಿರಲಿಲ್ಲ. ಅಂಗಳದಲ್ಲಿ, ಜಗಲಿಯಲ್ಲಿ, ಮನೆಯ ಜಮಖಾನೆಯ ಮೇಲೆ ಎಲ್ಲರೂ ಒಟ್ಟಿಗೆ ಮಲಗುತ್ತಿದ್ದ ಆ ಕ್ಷಣಗಳೇ ನಿಜವಾದ ಸ್ವರ್ಗವಾಗಿದ್ದವು.
ಬೆಳಗ್ಗೆ ಎದ್ದ ತಕ್ಷಣ ಎಣ್ಣೆ ಸ್ನಾನ, ಪೂಜೆ, ಹೊಸ ಬಟ್ಟೆ, ಸಿಹಿ ತಿಂಡಿ, ಪಟಾಕಿಗಳ ಸದ್ದು… ಹಬ್ಬದ ಪ್ರತಿ ಕ್ಷಣವೂ ಸಂಭ್ರಮದಿಂದ ಕೂಡಿರುತ್ತಿತ್ತು. ಸಂಬಂಧಿಕರ ಮಕ್ಕಳೊಂದಿಗೆ ಸೇರಿ ಪಟಾಕಿ ಹೊಡೆಯುವುದು, ಓಡಾಡುವುದು, ಆಟವಾಡುವುದು, ಸಣ್ಣಪುಟ್ಟ ಜಗಳ ಮಾಡುವುದು, ಮತ್ತೆ ಒಂದಾಗುವುದು… ಆ ಬಾಲ್ಯದ ತುಂಟಾಟಗಳಿಗೆ ಬೆಲೆಯೇ ಕಟ್ಟಲಾಗದು.
ರಾತ್ರಿ ಊಟದ ನಂತರವೂ ಸಂಭ್ರಮ ಮುಗಿಯುತ್ತಿರಲಿಲ್ಲ. ಹಿರಿಯರು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಹರಟೆ ಹೊಡೆಯುತ್ತಿದ್ದರೆ, ಮಕ್ಕಳು ಪಟಾಕಿ ಸಿಡಿಸುತ್ತಾ ಖುಷಿಪಡುತ್ತಿದ್ದರು. ಕೆಲವೊಮ್ಮೆ ರಾತ್ರಿಯಿಡೀ ಜಾಗರಣೆ. ಹೀಗೆ ಮೂರು ದಿನಗಳ ಕಾಲ ಮನೆ ತುಂಬಾ ನಗು, ಮಾತು, ಪ್ರೀತಿ ಮತ್ತು ಆತ್ಮೀಯತೆ ತುಂಬಿರುತ್ತಿತ್ತು. ನಾಲ್ಕನೇ ದಿನ ಬೆಳಗಾಗುವಷ್ಟರಲ್ಲಿ ಬಂಧುಗಳು ತಮ್ಮ ತಮ್ಮ ಊರುಗಳಿಗೆ ಹೊರಡುತ್ತಿದ್ದರು. ಆಗ ಮನಸ್ಸಿನಲ್ಲಿ ಒಂದು ಸಣ್ಣ ಬೇಸರ. ಮತ್ತೆ ಮುಂದಿನ ಹಬ್ಬಕ್ಕೆ ಎಲ್ಲರೂ ಸೇರುವ ನಿರೀಕ್ಷೆ!
ಆದರಿಂದು ಕಾಲ ಬದಲಾಗಿದೆ. ಹಬ್ಬದ ಸಂಭ್ರಮವೂ ಬದಲಾಗಿದೆ. ಮನೆಗಳಲ್ಲಿ ದೀಪಗಳಿವೆ, ಕೈಯಲ್ಲಿ ಸ್ಮಾರ್ಟ್ಫೋನ್ಗಳಿವೆ, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿಯುತ್ತಿದೆ. ಆದರೆ ಆ ಹಳೆಯ ಆತ್ಮೀಯತೆ ಮಾತ್ರ ಕಾಣೆಯಾಗುತ್ತಿದೆ. ಈಗ ಬಂಧುಗಳು ಮನೆಗೆ ಬರುವುದಕ್ಕಿಂತ ವಾಟ್ಸಪ್ನಲ್ಲಿ ಶುಭಾಶಯ ಕಳುಹಿಸುವುದೇ ಹೆಚ್ಚಾಗಿದೆ. ಮುಖಾಮುಖಿಯಾಗಿ ಭೇಟಿಯಾಗುವುದಕ್ಕಿಂತ ವಿಡಿಯೋ ಕಾಲ್ನಲ್ಲಿ ಮುಖ ತೋರಿಸುವುದೇ ಸಾಕಾಗಿದೆ. ಪಟಾಕಿ ಸಿಡಿಸುವ ವಿಡಿಯೋಗಳನ್ನ ಸ್ಟೇಟಸ್ಗೆ ಹಾಕಿ ಸಂಭ್ರಮ ಹಂಚಿಕೊಳ್ಳುತ್ತಿದ್ದೇವೆ. ಆದರೆ ಅಕ್ಕಪಕ್ಕದಲ್ಲೇ ಇರುವ ಸಂಬಂಧಿಕರ ಮನೆಗೆ ಹೋಗಿ ಮಾತನಾಡಲು ಮಾತ್ರ ಸಮಯವಿಲ್ಲ!
ಹಬ್ಬದ ದಿನವೂ ಎಲ್ಲರೂ ತಮ್ಮ ತಮ್ಮ ಮೊಬೈಲ್ಗಳಲ್ಲಿ ಮುಳುಗಿರುತ್ತಾರೆ. ಮಕ್ಕಳಿಗೆ ಸಂಬಂಧಿಕರ ಮಕ್ಕಳೊಂದಿಗೆ ಬೆರೆಯುವ ಅವಕಾಶ ಕಡಿಮೆಯಾಗಿದೆ. ಹಿರಿಯರೊಂದಿಗೆ ಕುಳಿತು ನಾಲ್ಕು ಮಾತು ಆಡುವ ತಾಳ್ಮೆಯೂ ಕಡಿಮೆಯಾಗುತ್ತಿದೆ. ಹೀಗೆ ತಂತ್ರಜ್ಞಾನ ನಮ್ಮನ್ನು ಹತ್ತಿರ ಮಾಡಿದೆ ಎಂದುಕೊಳ್ಳುವ ಹೊತ್ತಿಗೆ, ಅದು ನಮ್ಮ ನಡುವಿನ ಅಂತರವನ್ನ ಹೆಚ್ಚಿಸುತ್ತಿದೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ.
ನಿಜಕ್ಕೂ ದೀಪಾವಳಿ ಎಂದರೆ ಕೇವಲ ಹಣತೆ ಹಚ್ಚುವುದಲ್ಲ, ಪಟಾಕಿ ಸಿಡಿಸುವುದಲ್ಲ, ಹೊಸ ಬಟ್ಟೆ ಧರಿಸುವುದಲ್ಲ. ಅದು ಸಂಬಂಧಗಳ ನಡುವೆ ಪ್ರೀತಿಯ ದೀಪ ಹಚ್ಚುವ ಹಬ್ಬ. ಮುನಿಸಿಕೊಂಡವರನ್ನು ಮಾತನಾಡಿಸುವ, ದೂರವಾದವರನ್ನು ಹತ್ತಿರಕ್ಕೆ ಕರೆತರುವ, ಹಿರಿಯರ ಆಶೀರ್ವಾದ ಪಡೆಯುವ, ಮಕ್ಕಳಿಗೆ ಕುಟುಂಬದ ಮಹತ್ವ ತಿಳಿಸುವ ಸುಂದರ ಅವಕಾಶ.
ನಮ್ಮ ಮುಂದಿನ ಪೀಳಿಗೆಗೆ ದೀಪಾವಳಿ ಎಂದರೆ ಕೇವಲ ಮೊಬೈಲ್ನಲ್ಲಿ ಬರುವ ಶುಭಾಶಯಗಳು ಮತ್ತು ಪಟಾಕಿಗಳ ವಿಡಿಯೋಗಳಷ್ಟೇ ಆಗಬಾರದು. ಅಜ್ಜಿ ಮನೆಯ ಅಂಗಳದಲ್ಲಿ ಬಂಧುಗಳೊಂದಿಗೆ ಕಳೆದ ಆ ಸುಂದರ ಕ್ಷಣಗಳನ್ನೂ ಅವರು ಅನುಭವಿಸಬೇಕು.
ಈ ದೀಪಾವಳಿಗೆ ಒಂದು ಸಂಕಲ್ಪ ಮಾಡೋಣ. ಸಾಧ್ಯವಾದರೆ ಬಂಧುಗಳ ಮನೆಗೆ ಹೋಗೋಣ. ಅವರನ್ನು ನಮ್ಮ ಮನೆಗೆ ಆಹ್ವಾನಿಸೋಣ. ಹಿರಿಯರೊಂದಿಗೆ ಸಮಯ ಕಳೆಯೋಣ. ಮಕ್ಕಳನ್ನು ಸಂಬಂಧಿಕರೊಂದಿಗೆ ಬೆರೆಯಲು ಬಿಡೋಣ. ಮೊಬೈಲ್ ಬದಿಗಿಟ್ಟು ಒಂದಷ್ಟು ಹೊತ್ತು ಮನಬಿಚ್ಚಿ ನಗೋಣ. ಏಕೆಂದರೆ, ವರ್ಷಕ್ಕೊಮ್ಮೆ ಬರುವ ದೀಪಾವಳಿ ಮತ್ತೆ ಬರುತ್ತದೆ. ಆದರೆ ಬಾಲ್ಯ, ಅಜ್ಜಿಯ ಕಾಲ, ಬಂಧುಗಳೊಂದಿಗಿನ ಆ ಸುಂದರ ಕ್ಷಣಗಳು ಮತ್ತೆ ಮರಳುವುದಿಲ್ಲ.
ಮನೆ ಬೆಳಗಲು ಹಣತೆ ಸಾಕು, ಆದರೆ ಮನಸ್ಸು ಬೆಳಗಲು ಸಂಬಂಧಗಳು ಬೇಕು. ಈ ದೀಪಾವಳಿಯಲ್ಲಿ ಹಣತೆಯ ಜೊತೆಗೆ ಸಂಬಂಧಗಳನ್ನೂ ಗಟ್ಟಿಗೊಳಿಸೋಣ. ದೀಪಗಳ ಬೆಳಕಿಗಿಂತ ಸಂಬಂಧಗಳ ಬೆಳಕು ಹೆಚ್ಚು ಕಾಲ ಉಳಿಯಲಿ. ಅದುವೇ ನಿಜವಾದ ದೀಪಾವಳಿ… ಏನಂತೀರಾ?



