ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಸುದ್ದಿ ವಾಹಿನಿಯೊಂದರ ನಿರೂಪಕಿಯೊಬ್ಬರನ್ನು (Anchor) ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಅವರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಬಿಯಾ ಅಹ್ಸಾನ್ (41) (Rabia Ahsan) ಕೊಲೆಯಾದ ದುರ್ದೈವಿ. ಮಧ್ಯಾಹ್ನ 3 ಗಂಟೆ ಸುಮಾರಿಗೆ ರಾವಲ್ಪಿಂಡಿಯಲ್ಲಿರುವ ಅವರ ಮನೆಯ ಬೆಡ್ ರೂಮ್ನಲ್ಲಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ನಡೆದಾಗ ಅವರ ತಾಯಿ ಹಾಗೂ ಸಹೋದರಿ ಮನೆಯ ಅಂಗಳದಲ್ಲಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿ ಕೊಲೆ – ಆಕಸ್ಮಿಕ ಸಾವು ಎಂದು ನಂಬಿಸಿದ್ದ ಖತರ್ನಾಕ್ ಪತ್ನಿ ಅರೆಸ್ಟ್
ಗುಂಡಿನ ಶಬ್ದ ಕೇಳಿ, ರಾಬಿಯಾ ಅವರ ಸಹೋದರಿ ಅಲ್ವಿನಾ ಮಲಗುವ ಕೋಣೆಯತ್ತ ಧಾವಿಸಿದಾಗ, ಅವರು ರಕ್ತದ ಮಡುವಿನಲ್ಲಿ ನೆಲದ ಮೇಲೆ ಬಿದ್ದಿದ್ದರು. ಈ ವೇಳೆ ಅವರ ಪತಿ ಕೈಯಲ್ಲಿ ಪಿಸ್ತೂಲ್ ಇತ್ತು ಎನ್ನಲಾಗಿದೆ. ಈ ಸಂಬಂಧ ರಾಬಿಯಾ ಅವರ ಪತಿ ಅಹ್ಸಾನ್ ತಾಹಿರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಬಿಯಾ ಅವರ ಕುತ್ತಿಗೆಯ ಕೆಳಭಾಗದಲ್ಲಿ ಮತ್ತು ಬೆನ್ನಿನ ಬಲ ಭಾಗದಲ್ಲಿ ಗುಂಡೇಟು ತಗಲಿದೆ. ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಂಜಾಬ್ ಫಾರೆನ್ಸಿಕ್ ಸೈನ್ಸ್ ಅಥಾರಿಟಿ (PFSA) ಘಟನಾ ಸ್ಥಳದಿಂದ ಕೊಲೆಗೆ ಬಳಸಲಾದ .30-ಬೋರ್ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಹ್ಸಾನ್ ಅವರ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡುತ್ತಾ, “ಗುಂಡು ಆಕಸ್ಮಿಕವಾಗಿ ಹಾರಿದೆ” ಎಂದು ತಾಹಿರ್ ಹೇಳಿದ್ದಾಗಿ ತಿಳಿಸಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ವಿಚಾರಣೆಯ ವೇಳೆ, ತಾಹಿರ್ ಅವರು ಪಿಸ್ತೂಲ್ಗೆ ಸಂಬಂಧಿಸಿದ ಯಾವುದೇ ಮಾನ್ಯ ಪರವಾನಗಿಯನ್ನು (ಲೈಸೆನ್ಸ್) ತೋರಿಸಲು ವಿಫಲರಾಗಿದ್ದಾರೆ. ಅವರ ವಿರುದ್ಧ ಪಾಕಿಸ್ತಾನ್ ಪೀನಲ್ ಕೋಡ್ (PPC) ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹೋಟೆಲ್ನ 7ನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಮಹಿಳೆ ಸಾವು
