– ಮರಣೋತ್ತರ ಪರಿಕ್ಷೆಯ ವರದಿಯಲ್ಲಿ ಬಯಲಾಯ್ತು ಸತ್ಯ
ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿ, ನಂತರ ಅದನ್ನು ಹೃದಯಾಘಾತ ಎಂದು ಬಿಂಬಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electronic City) ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಅನಿತಾ ಹಾಗೂ ಆಕೆಯ ಪ್ರಿಯಕರ ಮಧುಸೂದನ್ನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಅಕ್ಟೋಬರ್ 12ರಂದು ದೊಡ್ಡತೋಗೂರಿನ ಮನೆಯಲ್ಲಿ ಉಪೇಂದ್ರ (40) ಎಂಬುವವರು ಮಧ್ಯರಾತ್ರಿ ಸಾವನ್ನಪ್ಪಿದ್ದರು.
ಉಪೇಂದ್ರ ಸಾವನ್ನಪ್ಪಿದ ತಕ್ಷಣ ಪತ್ನಿ ಅನಿತಾ, ಆತ ಜಾರಿ ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಕುಟುಂಬದವರಿಗೆ ನಂಬಿಸಿದ್ದಳು. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಯುಡಿಆರ್ (UDR – ಅಸಹಜ ಸಾವು) ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಬಂದ ಉಪೇಂದ್ರ ಅವರ ಮರಣೋತ್ತರ ಪರೀಕ್ಷೆ ವರದಿ ಇಡೀ ಕೇಸ್ಗೆ ದೊಡ್ಡ ಟ್ವಿಸ್ಟ್ ನೀಡಿದೆ.
ಉಪೇಂದ್ರ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದ್ದರಿಂದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು. ಪೊಲೀಸರು ತನಿಖೆ ನಡೆಸಿದಾಗ ಘಟನೆ ನಡೆದ ದಿನ ಉಪೇಂದ್ರ ಮನೆಗೆ ಒಬ್ಬ ಅಪರಿಚಿತ ವ್ಯಕ್ತಿ ಬಂದು ಹೋಗಿದ್ದ ಸುಳಿವು ಸಿಕ್ಕಿದೆ. ಇದರ ಆಧಾರದ ಮೇಲೆ ಮಧುಸೂದನ್ ಎಂಬಾತನನ್ನು ವಶಕ್ಕೆ ಪಡೆದು, ಪತ್ನಿ ಅನಿತಾಳ ಜೊತೆ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.
ಅನಿತಾ ಹಾಗೂ ಮಧುಸೂದನ್ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ಉಪೇಂದ್ರನಿಗೆ ತಿಳಿದು ಮನೆಯಲ್ಲಿ ದಂಪತಿ ನಡುವೆ ಆಗಾಗ ದೊಡ್ಡ ಗಲಾಟೆಯಾಗುತ್ತಿದ್ದವು. ಅ. 11ರ ರಾತ್ರಿಯೂ ಗಂಡ-ಹೆಂಡತಿ ನಡುವೆ ತೀವ್ರ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಅನಿತಾ, ತಕ್ಷಣ ಪ್ರಿಯಕರ ಮಧುಸೂದನ್ಗೆ ಕರೆ ಮಾಡಿ, ಗಂಡ ಗಲಾಟೆ ಮಾಡುತ್ತಿದ್ದಾನೆ, ಬಂದು ಮುಗಿಸಿಬಿಡೋಣ ಬಾ ಎಂದು ಮನೆಗೆ ಕರೆಸಿಕೊಂಡಿದ್ದಾಳೆ.ಇದನ್ನೂ ಓದಿ: ಅಕ್ರಮವಾಗಿ ಪೆಟ್ರೋಲ್ ಮಾರಾಟ ಮಾಡ್ತಿದ್ದ ಅಂಗಡಿಗೆ ಬೆಂಕಿ – ಮಾಲೀಕ ಸಜೀವ ದಹನ
ಮನೆಗೆ ಬಂದ ಮಧುಸೂದನ್ ನೇರವಾಗಿ ಬೆಡ್ ರೂಮ್ಗೆ ಹೋಗಿ ಉಪೇಂದ್ರನ ಮೇಲೆ ಕುಳಿತು ಹಲ್ಲೆ ನಡೆಸಿದ್ದಾನೆ. ಈ ವೇಳೆ ಅನಿತಾ ತನ್ನ ಗಂಡನ ಬಾಯಿ ಮತ್ತು ಮೂಗು ಮುಚ್ಚಿ ಪ್ರಿಯಕರನಿಗೆ ಸಹಾಯ ಮಾಡಿದ್ದಾಳೆ. ಕೊನೆಗೆ ಮಧುಸೂದನ್ ಉಪೇಂದ್ರನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಹತ್ಯೆಯ ನಂತರ ಪ್ರಿಯಕರನನ್ನು ಮನೆಯಿಂದ ವಾಪಸ್ ಕಳುಹಿಸಿದ ಅನಿತಾ, ಗಂಡ ಜಾರಿ ಬಿದ್ದು ಹಾರ್ಟ್ ಅಟ್ಯಾಕ್ ಆಗಿದೆ ಎಂದು ಎಲ್ಲರನ್ನೂ ನಂಬಿಸಲು ಸ್ಕೆಚ್ ಹಾಕಿದ್ದಳು. ಆದರೆ, ಆರೋಪಿಗಳಿಬ್ಬರೂ ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಇದನ್ನೂ ಓದಿ: ಸ್ವಯಂ ಸೇವಕರೇ ಆರ್ಎಸ್ಎಸ್ನ ಗುರುತು: ಮೋಹನ್ ಭಾಗವತ್
