* 1930ರ ದಶಕದಲ್ಲಿ ಸಂಘದ ಮೇಲಿನ ನಿಷೇಧದ ಪ್ರಯತ್ನವನ್ನು ಮುಸ್ಲಿಂ ವ್ಯಕ್ತಿ ಇಬ್ರಾಹಿಂ ವಿರೋಧಿಸಿದ್ದರು
ನಾಗಪುರ: ಸ್ವಯಂಸೇವಕರೇ ಆರ್ಎಸ್ಎಸ್ನ (RSS) ಗುರುತಾಗಿದ್ದಾರೆ. ಸಂಘ ಸ್ಥಾಪನೆಯಾಗಿ 100 ವರ್ಷಗಳು ಕಳೆದರೂ ಸ್ವಯಂಸೇವಕರೇ ಸಂಘದ ಗುರುತಾಗಿ ಉಳಿದಿದ್ದಾರೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.
ಮಹಾರಾಷ್ಟ್ರದ ನಾಗಪುರದಲ್ಲಿ ನಾಗಪುರ ನಾಗರಿಕ ಸಹಕಾರಿ ಬ್ಯಾಂಕ್ ಲಿಮಿಟೆಡ್ನ ನವೀಕೃತ ಮುಖ್ಯ ಕಚೇರಿಯಲ್ಲಿ ನೂತನವಾಗಿ ನಿರ್ಮಿಸಲಾದ ಸಭಾಂಗಣವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಸಂಘದ ಆರಂಭಿಕ ದಿನಗಳ ಘಟನೆಯೊಂದನ್ನು ಸ್ಮರಿಸಿದರು.
1930ರ ದಶಕದಲ್ಲಿ ಸೆಂಟ್ರಲ್ ಪ್ರಾವಿನ್ಸ್ ವಿಧಾನಸಭೆಯಲ್ಲಿ ಆರ್ಎಸ್ಎಸ್ ಮೇಲೆ ಮೊದಲ ಬಾರಿಗೆ ನಿಷೇಧ ಹೇರಲು ಪ್ರಯತ್ನ ನಡೆದಿತ್ತು. ಆಗ ಸಂಘದ ಪರವಾಗಿ ಮಾತನಾಡಲು ಯಾವುದೇ ಸ್ವಯಂಸೇವಕರು ಅಥವಾ ಸಂಘದ ವಿಚಾರಧಾರೆಯನ್ನು ಬೆಂಬಲಿಸುವವರು ಮುಂದೆ ಬಂದಿರಲಿಲ್ಲ. ಆದರೆ, ಇಬ್ರಾಹಿಂ ಎಂಬ ಮುಸ್ಲಿಂ ವ್ಯಕ್ತಿಯೊಬ್ಬರು ಸಂಘದ ಪರವಾಗಿ ಧ್ವನಿ ಎತ್ತಿದ್ದರು ಎಂದು ಭಾಗವತ್ ತಿಳಿಸಿದರು. ಇದನ್ನೂ ಓದಿ: ಸಿಎಂ ಡಿಕೆಶಿ ದೀಪಾವಳಿ ಗಿಫ್ಟ್ – 2008ಕ್ಕೂ ಮುನ್ನ ಬಿಡಿಎ ಸೈಟ್ಗಳಲ್ಲಿ ನಿರ್ಮಿಸಿದ ಮನೆಗಳ ಸಕ್ರಮಕ್ಕೆ ಅವಕಾಶ
ಸಂಘವನ್ನು ನಿಷೇಧಿಸಬಾರದು, ಅದು ಕೋಮುವಾದಿ ಸಂಘಟನೆಯಲ್ಲ ಎಂದು ಇಬ್ರಾಹಿಂ ವಾದಿಸಿದ್ದರು. ಹಿಂದೂ ರಾಷ್ಟ್ರ ಎಂದು ಹೇಳುವವರನ್ನು ಮಾನಸಿಕ ಆಸ್ಪತ್ರೆಗೆ ಕಳುಹಿಸಬೇಕು ಎಂದು ನಾನು ಭಾವಿಸುತ್ತೇನೆ. ಆದರೆ, ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರನ್ನು ನಾನು ಬಲ್ಲೆ. ಅವರು ಮಾನಸಿಕ ಅಸ್ವಸ್ಥರಲ್ಲ, ಒಳ್ಳೆಯ ವ್ಯಕ್ತಿ. ಹೀಗಾಗಿ, ಸಂಘವನ್ನು ಕೋಮುವಾದಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಇಬ್ರಾಹಿಂ ಹೇಳಿದ್ದಾಗಿ ಭಾಗವತ್ ಸ್ಮರಿಸಿದರು.
ಆ ಸಮಯದಲ್ಲಿ ಸಂಘ ಸ್ಥಾಪನೆಯಾಗಿ ಕೆಲವೇ ವರ್ಷಗಳು ಕಳೆದಿದ್ದವು. ಸಂಘದ ಬಗ್ಗೆ ಹೆಚ್ಚಿನ ಜನರಿಗೆ ಪರಿಚಯವಿರಲಿಲ್ಲ. ಆದರೆ, ಡಾ. ಹೆಡ್ಗೆವಾರ್ ಅವರನ್ನು ಎಲ್ಲರೂ ತಿಳಿದಿದ್ದರು. ಸಂಘದ ಆರಂಭದಿಂದಲೇ ಸ್ವಯಂಸೇವಕರು ಅದರ ಗುರುತಾಗಿದ್ದಾರೆ. ಇಂದಿಗೂ 100 ವರ್ಷಗಳ ಬಳಿಕ ಅದೇ ಗುರುತು ಮುಂದುವರಿದಿದೆ ಎಂದು ಅವರು ಹೇಳಿದರು.
ಪ್ರಚಾರಕರ ನಿಸ್ವಾರ್ಥ ಸೇವೆಯ ಉಲ್ಲೇಖ
ಇದೇ ವೇಳೆ ಆರ್ಎಸ್ಎಸ್ ಪ್ರಚಾರಕರ ಜೀವನದ ಕುರಿತು ಬರೆಯಲಾಗುತ್ತಿರುವ ಪುಸ್ತಕದ ಬಗ್ಗೆಯೂ ಭಾಗವತ್ ಪ್ರಸ್ತಾಪಿಸಿದರು. ಪ್ರಚಾರಕರ ಜೀವನದ ಬಗ್ಗೆ ಬರೆಯುತ್ತಿರುವುದು ಕೃತಜ್ಞತೆ ಮತ್ತು ಪ್ರೀತಿಯ ಕಾರಣಕ್ಕಾಗಿಯೇ ಹೊರತು ಯಾವುದೇ ವೈಯಕ್ತಿಕ ಅಥವಾ ಭೌತಿಕ ಲಾಭಕ್ಕಾಗಿ ಅಲ್ಲ ಎಂದು ಹೇಳಿದರು.
ಪ್ರಚಾರಕರಿಗೆ ಸಂಘವೇ ಎಲ್ಲವೂ. ಅವರು ಯಾವುದೇ ವೈಯಕ್ತಿಕ ಲಾಭ ಅಥವಾ ಪ್ರತಿಫಲವನ್ನು ನಿರೀಕ್ಷಿಸುವುದಿಲ್ಲ. ಅವರ ಸಮರ್ಪಣೆ ಮತ್ತು ನಿಷ್ಠೆಯನ್ನು ಕೇವಲ ಪದಗಳಲ್ಲಿ ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ. ಅವರೊಂದಿಗೆ ನೇರ ಸಂಪರ್ಕ ಹೊಂದಿದವರು ಮಾತ್ರ ಅವರ ಜೀವನದ ಬದ್ಧತೆಯನ್ನು ನಿಜವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಎಥೆನಾಲ್ ಪ್ರಮಾಣ ಎಷ್ಟಿದೆ ಅನ್ನೋದಕ್ಕೆ ತೈಲ ಕಂಪನಿಗಳ ಬಳಿಯೂ ಉತ್ತರವಿಲ್ಲ; ನಮ್ಮ ವರದಿಗೆ ನಾವು ಬದ್ಧ: ರಿಜ್ವಾನ್ ಅರ್ಷದ್
ಸ್ವಯಂಸೇವಕರ ಜೀವನವು ಪ್ರವಾಹದ ವಿರುದ್ಧ ಈಜಿದಂತೆ ಎಂದು ಬಣ್ಣಿಸಿದ ಭಾಗವತ್, ಸ್ವಾರ್ಥ, ಅಹಂಕಾರ ಮತ್ತು ವೈಯಕ್ತಿಕ ನಿರೀಕ್ಷೆಗಳಿಗೆ ಅಲ್ಲಿ ಅವಕಾಶವಿಲ್ಲ ಎಂದರು. ಸಮಾಜಕ್ಕೆ ತಾನು ಎಷ್ಟು ಒಳ್ಳೆಯದನ್ನು ಮಾಡಬಹುದು ಎಂಬುದೇ ಸ್ವಯಂಸೇವಕನ ಮುಖ್ಯ ಚಿಂತನೆಯಾಗಿರಬೇಕು. ಎಲ್ಲ ಸ್ವಯಂಸೇವಕರು ಈ ಆದರ್ಶವನ್ನು ಒಂದೇ ಮಟ್ಟದಲ್ಲಿ ಪಾಲಿಸದಿದ್ದರೂ, ಅವರ ಗುರಿ ಮತ್ತು ದಿಕ್ಕು ಒಂದೇ ಆಗಿರುತ್ತದೆ ಎಂದು ಹೇಳಿದರು.
