– ಸತ್ಯ ಹೇಳಿದ್ರೆ ಮೋದಿ ಸರ್ಕಾರದಿಂದ ಒತ್ತಡ; ಆರೋಪ
– ಇಡೀ ದೇಶವೇ ರಾಜ್ಯದ ವರದಿಯನ್ನ ಗಂಭೀರವಾಗಿ ಪರಿಗಣಿಸಿದ್ದಾರೆ
ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ (Ethanol) ಮಿಶ್ರಣ ಮಾಡಲಾಗುತ್ತಿದೆ ಎನ್ನುವ ರಾಜ್ಯ ಸರ್ಕಾರದ ವರದಿಗೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕಿತ್ತು. ಆದ್ರೆ ಕೇಂದ್ರ ಉತ್ತರ ಕೊಡುತ್ತಿಲ್ಲ, ತೈಲ ಕಂಪನಿಗಳು ಉತ್ತರ ಕೊಡುತ್ತಿವೆ. ಕೇವಲ ತಾಂತ್ರಿಕ ಅಂಶಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ರೆ ಪೆಟ್ರೋಲ್ಗೆ ಎಷ್ಟು ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಅನ್ನೋದಕ್ಕೆ ತೈಲ ಕಂಪನಿಗಳ ಬಳಿಯೂ ಉತ್ತರವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ (Rizwan Arshad) ಆರೋಪ ಮಾಡಿದ್ದಾರೆ.
ರಾಜ್ಯದ ಬಂಕ್ಗಳಲ್ಲಿ ಪೆಟ್ರೋಲ್ಗೆ 20%ಗೂ ಹೆಚ್ಚು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಅನ್ನೋದು ಪ್ರಯೋಗಾಲಯದ ವರದಿಯಲ್ಲಿ ಸಾಬೀತಾಗಿದೆ. ಈ ಸಂಬಂಧ ನಡೆಸಿದ ಪ್ರಯೋಗಾಲಯ ಪರೀಕ್ಷಾ ವರದಿಗಳನ್ನು (Lab Report) ಬಹಿರಂಗಪಡಿಸಿ ಮಾತನಾಡಿದ ಸಚಿವ ರಿಜ್ವಾನ್ ಅರ್ಷದ್ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಪೆಟ್ರೋಲ್ಗೆ ಎಥೆನಾಲ್ ಮಿಶ್ರಣದ ಬಗ್ಗೆ ರಾಜ್ಯ ಸರ್ಕಾರವೇ ಪರೀಕ್ಷೆ ಮಾಡಿಸಿತ್ತು. ದೇಶದ ಜನ ರಾಜ್ಯದ ವರದಿಯನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ನಾವು ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದೇವೆ. ಸೋಷಿಯಲ್ ಮೀಡಿಯಾಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಷ್ಟೇ ಗಂಭೀರತೆಯಿಂದ ಕೇಂದ್ರ ಸರ್ಕಾರ ನಮ್ಮಿಂದ ಮಾಹಿತಿ ಪಡೆದು ಉತ್ತರ ಕೊಡಬೇಕಾಗಿತ್ತು. ಆದ್ರೆ ಅವರು ಸರ್ಕಾರದ ವತಿಯಿಂದ ಉತ್ತರ ಕೊಟ್ಟಿಲ್ಲ, ತೈಲ ಕಂಪನಿಗಳಷ್ಟೇ ಉತ್ತರ ಕೊಡುತ್ತಿವೆ ಎಂದಿದ್ದಾರೆ.
ಕರ್ನಾಟಕದಲ್ಲಿ 6 ಕಡೆ ಮಿಶ್ರಣ ಆಗುತ್ತೆ
ಆಯಿಲ್ ಕಂಪನಿಗಳು ತಾಂತ್ರಿಕ ಅಂಶಗಳ ಬಗ್ಗೆ ಮಾತ್ರ ಮಾತಾಡಿದ್ದಾರೆ, ಸುತ್ತಿ ಬಳಸಿ ಅದನ್ನೇ ಮಾತಾಡ್ತಾರೆ. ಆದ್ರೆ ಪೆಟ್ರೋಲ್ಗೆ ಎಷ್ಟು ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಅನ್ನೋದಕ್ಕೆ ಅವರ ಬಳಿಯೂ ಉತ್ತರ ಇಲ್ಲ. ಔಟ್ಲೆಟ್ ಪ್ರಶ್ನೆ ಇಲ್ಲಿ ಬರಲ್ಲ. ಇಲ್ಲಿ ಡೀಲರ್ಸ್ ಇದನ್ನ ಮಾಡಲು ಸಾಧ್ಯವಿಲ್ಲ. ತೈಲ ಕಂಪನಿಗಳು ಎಥೆನಾಲ್ ಮಿಶ್ರಣ ಕಂಟ್ರೋಲ್ ಆಂಡ್ ಆಟೋಮ್ಯಾಟಿಕ್ ಪ್ರಕ್ರಿಯೆ ಅಂತಾರೆ. ಕರ್ನಾಟಕದಲ್ಲಿ 6 ಟರ್ಮಿನಲ್ಗಳಿವೆ, ಕರ್ನಾಟಕದಲ್ಲಿ 6 ಕಡೆ ಮಿಶ್ರಣ ಆಗುತ್ತೆ, ಇದು ನಿಮ್ಮ ಸಮಸ್ಯೆ, ಡೀಲರ್ಸ್ ಸಮಸ್ಯೆ ಅಲ್ಲ ಆಕ್ರೋಶ ಹೊರಹಾಕಿದ್ದಾರೆ.
ಸತ್ಯ ಹೇಳಿದ್ರೆ ಮೋದಿ ಸರ್ಕಾರದಿಂದ ಒತ್ತಡ
ಮುಂದುವರಿದು… ಮೋದಿ ಸರ್ಕಾರದಲ್ಲಿ ಅವರು ಹೇಳಿದ್ದೇ ಸತ್ಯ, ಅವರದ್ದೇ ಸರಿ. ಯಾರದ್ರೂ ಸತ್ಯ ಹೇಳಿದ್ರೆ ಅವರಿಗೆ ಒತ್ತಡ ಹಾಕಿ ವಾಪಸ್ ಹೇಳಿಕೆ ಪಡೆಯುವಂತೆ ಮಾಡ್ತಾರೆ. ಸೊಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಪ್ಯಾಕ್ಚರ್ ಅಸೊಸಿಯೇಷನ್ ಅವರು ಪತ್ರ ಬರೆದು ದೂರು ಕೊಡುತ್ತಾರೆ. ಒಂದು ಸೊಸೈಟಿ ಅವರು ಕ್ಲೋರೈಡ್ ಮತ್ತು ಸಲ್ಪರ್ ಜಾಸ್ತಿ ಇದೆ, ಇದು ಇಂಜಿನ್ ಗೆ ಡ್ಯಾಮೇಜ್ ಮಾಡ್ತಿದೆ ಅಂತಾ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ, ಕೇಂದ್ರ ಸರ್ಕಾರದ ಒತ್ತಡ ಬಳಿಕ ಹೇಳಿಕೆ ವಾಪಸ್ ತಗೋತಾರೆ. ಇನ್ಶುರೆನ್ಸ್ ಕಂಪನಿಗಳು ಗ್ಯಾರಂಟಿ ಕೊಡಲ್ಲ ಅಂತಾರೆ, ಕೇಂದ್ರ ಸರ್ಕಾರದ ಒತ್ತಡದ ಬಳಿಕ ವಾಪಸ್ ಪಡೆಯುತ್ತಾರೆ. ಆಟಾರ್ನಿ ಜನರಲ್ ಕೋರ್ಟ್ಗೆ ಇದು ಪ್ರಯೋಗ ಅಂತಾರೆ, ಬಳಿಕ ವಾಪಸ್ ತಗೋತಾರೆ. ಬಿಎಂಡಬ್ಲ್ಯು ಅವರು ಎಥನಾಲ್ ಪ್ರಮಾಣದಲ್ಲಿ ನಮ್ಮ ಎಂಜಿನ್ ಸಪೋರ್ಟ್ ಮಾಡಲ್ಲ ಅಂತಾರೆ, ಆದ್ರೆ ನಾವು ನಮ್ಮ ಹೇಳಿಕೆ ವಾಪಸ್ ಪಡೆಯಲ್ಲ. ನಮ್ಮ ವರದಿ ಸರಿ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.

