– ಬಿಡಿಎ ಸೈಟ್ಗಳ ಪಕ್ಕದ ಮಾರ್ಜಿನ್ ಲ್ಯಾಂಡ್ ಖರೀದಿಗೂ ಅವಕಾಶ
ಬೆಂಗಳೂರು: ಸಿಲಿಕಾನ್ ಸಿಟಿಯ ಲಕ್ಷಾಂತರ ಆಸ್ತಿ ಮಾಲೀಕರಿಗೆ ಸಿಎಂ ಡಿಕೆ ಶಿವಕುಮಾರ್ ದೀಪಾವಳಿಯ ಗಿಫ್ಟ್ ಕೊಟ್ಟಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮುನ್ನ ಬಿಡಿಎ ವತಿಯಿಂದ ಕೈಗೊಳ್ಳಲಿರುವ ಮಹತ್ವದ ನಿರ್ಧಾರ ಪ್ರಕಟಿಸಿದರು.
ಬೆಂಗಳೂರು ನಗರ ಹಾಗೂ ಕರ್ನಾಟಕದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅವರು, ಜನರ ಸಮಸ್ಯೆಗಳನ್ನು ಬಗೆಹರಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಬಿಡಿಎಗೆ 50 ವರ್ಷ ತುಂಬಿರುವ ಹಿನ್ನೆಲೆ ಬೆಂಗಳೂರಿನ ಅಭಿವೃದ್ಧಿಗೆ ಹೊಸ ಆಲೋಚನೆಗಳೊಂದಿಗೆ ಯೋಜನೆ ರೂಪಿಸಲಾಗುತ್ತಿದೆ. ಬಿಡಿಎಯನ್ನು ಜನಸ್ನೇಹಿ ಸಂಸ್ಥೆಯನ್ನಾಗಿ ಮಾಡಲು ಹಲವು ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
2008ಕ್ಕೂ ಮುನ್ನ ನಿರ್ಮಿಸಿದ ಮನೆಗಳ ಸಕ್ರಮಕ್ಕೆ ಅವಕಾಶ
2008ಕ್ಕೂ ಮುನ್ನ ಬಿಡಿಎ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವವರಿಗೆ ಸಕ್ರಮಗೊಳಿಸಿಕೊಳ್ಳಲು ಮತ್ತೊಂದು ಅವಕಾಶ ನೀಡಲಾಗುತ್ತಿದೆ. ಈ ಹಿಂದೆ ಮಾಡಿದ್ದ 38 B ಸೆಕ್ಷನ್ ನಲ್ಲಿ ಅನಧಿಕೃತ ತೆಗೆದು ಅಧಿಕೃತ ಮಾಡಿಕೊಳ್ಳಿ ಅಂತಾ ಕರೆ ನೀಡುತ್ತಾ ಇದ್ದೇನೆ. ಹಿಂದಿನ ಸರ್ಕಾರ ನಿಗದಿಪಡಿಸಿದ್ದ ಸಕ್ರಮದ ದರವನ್ನ ಶೇ.50ರಷ್ಟು ಕಡಿತಗೊಳಿಸಲಾಗಿದೆ. ಈ ಹಿಂದೆ ಶೇ.10ರಷ್ಟಿದ್ದ ದರವನ್ನ ಶೇ.5ಕ್ಕೆ ಹಾಗೂ ಶೇ.25ರಷ್ಟಿದ್ದ ದರವನ್ನ ಶೇ.12ಕ್ಕೆ ಇಳಿಸಲಾಗಿದೆ ಎಂದರು.
ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 17ರ ವರೆಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಭೂಮಿಯಲ್ಲಿ ಇದ್ದಂಗೆ ವಾಸ ಮಾಡಬಹುದು. ಈಗಾಗಲೇ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವವರು ವಿದ್ಯುತ್ ಬಿಲ್, ನೀರಿನ ಬಿಲ್ ಹಾಗೂ ಕಂದಾಯ ದಾಖಲೆಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ದರವನ್ನು ಅರ್ಧಕ್ಕೆ ಇಳಿಸಲಾಗಿದ್ದು, ಮತ್ತೆ ದರ ಕಡಿತ ಮಾಡುವುದಿಲ್ಲ. ಡಿಸೆಂಬರ್ 17ರ ಬಳಿಕ ಮತ್ತೊಂದು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಡಿಎ ಸೈಟ್ಗಳ ಪಕ್ಕದ ಮಾರ್ಜಿನ್ ಲ್ಯಾಂಡ್ ಖರೀದಿಗೂ ಅವಕಾಶ
ಇನ್ನೂ ಬಿಡಿಎಯಿಂದ ನಿವೇಶನ ಹಂಚಿಕೆ ಪಡೆದಿರುವವರ ನಿವೇಶನದ ಪಕ್ಕದಲ್ಲಿ ಮಾರ್ಜಿನ್ ಲ್ಯಾಂಡ್ ಇದ್ದರೆ, ಅದನ್ನು ಖರೀದಿಸಲು ಅವಕಾಶ ಕಲ್ಪಿಸಲಾಗುತ್ತದೆ. 600 ಚದರ ಅಡಿ ನಿವೇಶನ ಹೊಂದಿರುವವರು ಬಿಡಿಎ ಹಂಚಿಕೆದಾರರು ಅರ್ಜಿ ಸಲ್ಲಿಸಿ ಪಕ್ಕದ ಮಾರ್ಜಿನ್ ಜಾಗವನ್ನು ಮಾರ್ಗಸೂಚಿ ದರದಲ್ಲಿ ಖರೀದಿಸಬಹುದು. ಮಾರ್ಜಿನ್ ಲ್ಯಾಂಡ್ ಖರೀದಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 22ರವರೆಗೆ ಅವಕಾಶ ನೀಡಲಾಗುತ್ತದೆ ಎಂದು ವಿವರಿಸಿದರು.

