ದೀಪಾವಳಿ ಹಬ್ಬದ ಹೊತ್ತಿನಲ್ಲಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ಯಶ್ (Yash), ರಣಬೀರ್ ಕಪೂರ್ ಅಭಿನಯದ ‘ರಾಮಾಯಣ Part-1’ ಸಿನಿಮಾ (Ramayana Cinema) ವಿಶ್ವಾದ್ಯಂತ 500 ಕೋಟಿ ರೂ. ಗಳಿಕೆಯ ಗಡಿ ದಾಟಿದೆ. ಬಿಡುಗಡೆಯಾದ ಕೇವಲ 4 ದಿನಗಳಲ್ಲೇ ಈ ಸಾಧನೆ ಮಾಡಿರುವ ಚಿತ್ರ ಇದೀಗ ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಈ ಪೌರಾಣಿಕ ಕಥಾಹಂದರದ ಸಿನಿಮಾದಲ್ಲಿ ರಣಬೀರ್ ಕಪೂರ್ (Ranbir Kapoor) ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಇನ್ನು ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ಮಿಂಚಿದ್ದಾರೆ.
ಶನಿವಾರ ಚಿತ್ರದ ಗಳಿಕೆಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದರೆ, ಭಾನುವಾರ ಕಲೆಕ್ಷನ್ನಲ್ಲಿ ಕೊಂಚ ಇಳಿಕೆ ದಾಖಲಾಗಿದೆ. ಆದರೂ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಸಿನಿಮಾ ಭರ್ಜರಿ ಕಮಾಲ್ ಮಾಡಿದೆ.
4 ದಿನಕ್ಕೆ ವಿಶ್ವಾದ್ಯಂತ 507 ಕೋಟಿ ಕಲೆಕ್ಷನ್!
ನವೆಂಬರ್ 8ರ ಭಾನುವಾರ 4ನೇ ದಿನದಂದು ‘ರಾಮಾಯಣ’ ಸಿನಿಮಾ ಭಾರತದಲ್ಲಿ ಎಲ್ಲಾ ಭಾಷೆಗಳಿಂದ ಒಟ್ಟು 56.15 ಕೋಟಿ (Net) ಗಳಿಕೆ ಮಾಡಿದೆ. ಇದರೊಂದಿಗೆ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 66.95 ಕೋಟಿಗೆ ತಲುಪಿದೆ. ಶನಿವಾರದಂದು 69.80 ಕೋಟಿ ಕಲೆಕ್ಷನ್ ಮಾಡಿತ್ತು. ಭಾನುವಾರದಂದು ದೇಶಾದ್ಯಂತ ನಡೆದ 21,770 ಪ್ರದರ್ಶನಗಳಲ್ಲಿ ಚಿತ್ರದ ಸರಾಸರಿ ಆಸನ ಭರ್ತಿ (ಆಕ್ಯುಪೆನ್ಸಿ) ಶೇ.38ರಷ್ಟಿತ್ತು.
4 ದಿನಗಳ ಅಂತ್ಯಕ್ಕೆ ಚಿತ್ರದ ಭಾರತದ ಒಟ್ಟು ನೆಟ್ ಕಲೆಕ್ಷನ್ 238.85 ಕೋಟಿ ತಲುಪಿದ್ರೆ, ಗ್ರಾಸ್ ಕಲೆಕ್ಷನ್ 285.20 ರೂ. ಆಗಿದೆ. ಈ ನಾಲ್ಕು ದಿನಗಳಲ್ಲಿ ಒಟ್ಟು 93,982 ಪ್ರದರ್ಶನಗಳು ತೆರೆ ಕಂಡಿವೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲಿಯೂ ‘ರಾಮಾಯಣ’ ಉತ್ತಮ ಪ್ರದರ್ಶನ ಮುಂದುವರಿಸಿದೆ. 4ನೇ ದಿನ ವಿದೇಶಗಳಲ್ಲಿ 53 ಕೋಟಿ ಗಳಿಸಿದ್ದು, ಒಟ್ಟು ವಿದೇಶಿ ಗ್ರಾಸ್ ಕಲೆಕ್ಷನ್ 222 ಕೋಟಿಗೆ ಏರಿಕೆಯಾಗಿದೆ. ಇದರೊಂದಿಗೆ ಚಿತ್ರದ ವಿಶ್ವಾದ್ಯಂತ ಒಟ್ಟು ಗ್ರಾಸ್ ಕಲೆಕ್ಷನ್ 507.20 ಕೋಟಿಗೆ ತಲುಪಿದೆ ಎಂದು ವರದಿಯಾಗಿದೆ.

