ನಿತೇಶ್ ತಿವಾರಿ ಅವರ ‘ರಾಮಾಯಣ: ಭಾಗ-1’ (Ramayana: Part One) ಚಿತ್ರವು ಬಾಕ್ಸಾಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ ಮೂರು ದಿನಗಳಲ್ಲಿ ವಿಶ್ವದಾದ್ಯಂತ ಸಿನಿಮಾ 375 ಕೋಟಿ ರೂ. ಗಳಿಕೆ ಮಾಡಿದೆ.
ಎರಡನೇ ದಿನ ಗಳಿಕೆಯಲ್ಲಿ ಸ್ವಲ್ಪ ಇಳಿಕೆ ಕಂಡಿದ್ದರೂ, ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ (Yash) ಅಭಿನಯದ ಈ ಚಿತ್ರವು ಶನಿವಾರ ಗಮನಾರ್ಹ ಏರಿಕೆ ದಾಖಲಿಸಿದೆ. ಮೂರನೇ ದಿನ ಭಾರತದಲ್ಲಿ ಈ ಚಿತ್ರವು 69.80 ಕೋಟಿ ಗಳಿಕೆ ಮಾಡಿದೆ. ಇದರೊಂದಿಗೆ ಮೂರು ದಿನಗಳಲ್ಲಿ ಭಾರತದಲ್ಲಿ ಒಟ್ಟು 182.70 ಕೋಟಿ ರೂಪಾಯಿ ಗಳಿಸಿದೆ. ಟ್ರೇಡ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ (Sacnilk) ವರದಿಯ ಪ್ರಕಾರ, ಚಿತ್ರದ ಜಾಗತಿಕ ಒಟ್ಟು ಗಳಿಕೆಯು (gross collection) 375.50 ಕೋಟಿ ರೂ. ತಲುಪಿದೆ.
ಸಿನಿಮಾ ರಿಲೀಸ್ ಆದ ದಿನ ದೇಶದಲ್ಲಿ 64.85 ಕೋಟಿ ರೂ. ಗಳಿಕೆಯಾಗಿತ್ತು. ಮಾರನೇ ದಿನ ಗಳಿಕೆಯಲ್ಲಿ ಶೇ.25.9 ರಷ್ಟು ಕುಸಿತವನ್ನು ದಾಖಲಿಸಿತ್ತು. ವೀಕೆಂಡ್ನಲ್ಲಿ ಸಿನಿಮಾ ಕಲೆಕ್ಷನ್ನಲ್ಲಿ ಏರಿಕೆ ಕಂಡುಬಂದಿದೆ. ಇದನ್ನೂ ಓದಿ: 4000 ಕೋಟಿ ಬಜೆಟ್ ಅಲ್ಲ.. ರಾಮ, ಸೀತೆ, ರಾವಣ ಪಾತ್ರಗಳ ಬಗ್ಗೆ ಮಾತನಾಡಿ: ‘ರಾಮಾಯಣ’ ಬಗ್ಗೆ ಸಲ್ಮಾನ್ ಮಾತು
ಈ ಚಿತ್ರದ ಥಿಯೇಟರ್ ಪ್ರದರ್ಶನಕ್ಕೆ ವಿದೇಶಿ ಮಾರುಕಟ್ಟೆಗಳು ಕೂಡ ಗಣನೀಯ ಕೊಡುಗೆ ನೀಡಿವೆ. ‘ರಾಮಾಯಣ’ ಚಿತ್ರವು ಮೂರನೇ ದಿನ ವಿದೇಶಗಳಲ್ಲಿ ಅಂದಾಜು 60 ಕೋಟಿ ರೂಪಾಯಿ ಒಟ್ಟು ಗಳಿಕೆಯನ್ನು ದಾಖಲಿಸಿದೆ. ಇದರೊಂದಿಗೆ ವಿದೇಶಗಳಲ್ಲಿನ ಒಟ್ಟು ಗಳಿಕೆಯು 157.25 ಕೋಟಿ ರೂಪಾಯಿಗೆ ತಲುಪಿದೆ. ಇದೀಗ, ವಿಶ್ವಾದ್ಯಂತ ಮೂರೇ ದಿನಗಳಲ್ಲಿ 375.50 ಕೋಟಿ ಕಮಾಲ್ ಮಾಡಿದೆ.
ಸಿನಿಮಾ ದೇಶೀಯ ಬಾಕ್ಸಾಫೀಸ್ ಪ್ರದರ್ಶನದಲ್ಲಿ ಹಿಂದಿ ಆವೃತ್ತಿಯು ಮುಂಚೂಣಿಯಲ್ಲಿದೆ. ಶನಿವಾರದಂದು ಹಿಂದಿಯಲ್ಲಿ 53 ಕೋಟಿ ಗಳಿಕೆಯಾಗಿದೆ. ಹಿಂದಿಯಲ್ಲೇ ಮೂರು ದಿನಗಳಲ್ಲಿ 136 ಕೋಟಿ ಗಲ್ಲಾಪೆಟ್ಟಿಗೆ ಸೇರಿದೆ. ಕನ್ನಡ ಆವೃತ್ತಿಯು ಮೂರನೇ ದಿನ 6.30 ಕೋಟಿ ಗಳಿಸಿದರೆ, ತೆಲುಗು ಆವೃತ್ತಿಯು 6 ಕೋಟಿ ಸೇರಿಸಿದೆ. ಶನಿವಾರದಂದು ತಮಿಳು ಆವೃತ್ತಿಯು 2.50 ಕೋಟಿ ಹಾಗೂ ಮಲಯಾಳಂ ಆವೃತ್ತಿಯು 2 ಕೋಟಿ ಗಳಿಸಿವೆ. ಇದನ್ನೂ ಓದಿ: ಭಾರತದಲ್ಲಿ ಮೊದಲ ದಿನ 77.50 ಕೋಟಿ ಕಲೆಕ್ಷನ್ ಮಾಡಿದ ‘ರಾಮಾಯಣ’ – ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
ಶನಿವಾರದಂದು ಭಾರತದಾದ್ಯಂತ ಈ ಚಲನಚಿತ್ರವು 23,696 ಪ್ರದರ್ಶನಗಳನ್ನು ಕಂಡಿದ್ದು, ಒಟ್ಟಾರೆ ಶೇ.41.3ರಷ್ಟು ಆಸನ ಭರ್ತಿ (ಆಕ್ಯುಪೆನ್ಸಿ) ದಾಖಲಿಸಿದೆ. ಅಂದು ಚಿತ್ರಮಂದಿರಗಳಿಗೆ ಭೇಟಿ ನೀಡಿದವರ ಅಂದಾಜು ಸಂಖ್ಯೆ 26.24 ಲಕ್ಷವಾಗಿದ್ದು, ಇದರೊಂದಿಗೆ ಮೂರು ದಿನಗಳ ಒಟ್ಟು ವೀಕ್ಷಕರ ಸಂಖ್ಯೆ ಸುಮಾರು 69.88 ಲಕ್ಷಕ್ಕೆ ತಲುಪಿದೆ.
