ಗಾಂಧಿನಗರ: ಊಟದ ವಿಚಾರಕ್ಕೆ ದಂಪತಿ ನಡುವೆ ಉಂಟಾದ ಕೌಟುಂಬಿಕ ಕಲಹದಲ್ಲಿ, ಮಾಜಿ ಸೈನಿಕನನ್ನೇ (Ex Army) ಪತ್ನಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗುಜರಾತ್ನ (Gujarat) ಅಹಮದಾಬಾದ್ನಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಮಾಜಿ ಸೈನಿಕ ದಿಲೀಪ್ ಖರಾಡೆ. ಊಟಕ್ಕೆ ಯಾವ ತರಕಾರಿ ಪಲ್ಯ ಮಾಡಿದ್ದೀಯಾ ಎಂದು ಕೇಳಿದ್ದಕ್ಕೆ ಈ ಕೊಲೆ ನಡೆದಿದೆ. ಮೃತ ದಿಲೀಪ್ ಖರಾಡೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಆರ್ಮಿಯಿಂದ ಬಂದ ನಂತರ ಅವರು ಅಹಮದಾಬಾದ್ನ ನರೋಡಾ ಪ್ರದೇಶದಲ್ಲಿ ಪತ್ನಿ ನಿರ್ಮಲಾ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಜೀವನೋಪಾಯಕ್ಕಾಗಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಮೇಲ್ನೋಟಕ್ಕೆ ಸುಂದರ ಸಂಸಾರದಂತೆ ಕಂಡರೂ, ದಂಪತಿ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಸಮಸ್ಯೆಗಳಿದ್ದವು ಮತ್ತು ಆಗಾಗ ಜಗಳಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಊಟದ ಸಮಯದಲ್ಲಿ ದಿಲೀಪ್ ಪತ್ನಿ ನಿರ್ಮಲಾಗೆ “ಇವತ್ತು ಯಾವ ತರಕಾರಿ ಪಲ್ಯ ಮಾಡಿದ್ದೀಯಾ?” ಎಂದು ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ನಿರ್ಮಲಾ ತಕ್ಷಣವೇ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ದಿಲೀಪ್ ಅವರ ಎದೆಯ ಭಾಗಕ್ಕೆ ಬಲವಾಗಿ ಇರಿದಿದ್ದಾಳೆ. ನಂತರ ಆಕೆಯೇ ಪತಿಯನ್ನು ತಾನೇ ಸ್ವತಃ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆದರೆ, ಚಾಕು ನೇರವಾಗಿ ಹೃದಯದ ಮೇಲ್ಭಾಗಕ್ಕೆ ತಗುಲಿದ್ದರಿಂದ ತೀವ್ರ ಗಾಯಗೊಂಡಿದ್ದ ದಿಲೀಪ್, ಆಸ್ಪತ್ರೆ ತಲುಪುವಷ್ಟರಲ್ಲೇ ದಾರಿಯಲ್ಲಿ ಮೃತಪಟ್ಟಿದ್ದಾರೆ.ಇದನ್ನೂ ಓದಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಅವಘಡ – 21 ಮಂದಿಗೆ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯ
ಘಟನೆಗೆ ಸಂಬಂಧಿಸಿದಂತೆ ಮೃತ ದಿಲೀಪ್ ತಂದೆ ನೀಡಿದ ದೂರಿನ ಮೇರೆಗೆ ನರೋಡಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಇದನ್ನೂ ಓದಿ: ಹಂದಿ ಓಡಿಸಲು ಇಟ್ಟಿದ್ದ ಮದ್ದನ್ನು ಪಟಾಕಿ ಅಂತ ತಿಳಿದು ಬೆಂಕಿ ಹಚ್ಚಿದ ಬಾಲಕ – ತಲೆ ಛಿದ್ರಗೊಂಡು ಸಾವು
