ಬೆಳಕಿನ ಹಬ್ಬ ದೀಪಾವಳಿ ಎಂದರೆ ಸಾಲು ದೀಪಗಳ ಜೊತೆಗೆ ಪಟಾಕಿಗಳ ಸದ್ದೇ ನೆನಪಾಗುವುದು ಇಂದಿನ ವಾಡಿಕೆ. ಆದರೆ, ಕತ್ತಲನ್ನು ಓಡಿಸಲು ಹಣತೆಯ ಸಾಲಷ್ಟೇ ಸಾಕು, ಹೊಗೆ-ಸದ್ದಿನ ಅಬ್ಬರವಲ್ಲ ಎಂಬುದನ್ನು ಶತಮಾನಗಳಿಂದ ಸಾಬೀತುಪಡಿಸುತ್ತಾ ಬಂದಿರುವ ಅಪರೂಪದ ಊರುಗಳು ನಮ್ಮ ನಡುವೆ ಇಂದಿಗೂ ಇವೆ.
ಶತಮಾನಗಳೇ ಉರುಳಿದರೂ ಪರಿಸರ ಮತ್ತು ಮೂಕ ಪ್ರಾಣಿ-ಪಕ್ಷಿಗಳ ಒಡನಾಟಕ್ಕೆ ಚ್ಯುತಿ ಬಾರದಂತೆ, ಒಂದೇ ಒಂದು ಪಟಾಕಿಯನ್ನೂ ಸಿಡಿಸದೆ ಶುದ್ಧ ಬೆಳಕಿನ ಹಬ್ಬವಾಗಿಯೇ ದೀಪಾವಳಿಯನ್ನು ಸಂಭ್ರಮಿಸುವ ಈ ಪರಂಪರೆ ಇಂದಿನ ಆಧುನಿಕ ಜಗತ್ತಿಗೆ ವಿಸ್ಮಯ ಹಾಗೂ ಆದರ್ಶ. ಪ್ರಕೃತಿಯ ಮಡಿಲಲ್ಲಿ ಮಣ್ಣಿನ ಹಣತೆಗಳ ಪ್ರಶಾಂತ ನಂದಾದೀಪ ಬೆಳಗುತ್ತಾ, ಹಬ್ಬದ ನೈಜ ಸತ್ವವನ್ನು ಜೀವಂತವಾಗಿರಿಸಿಕೊಂಡಿರುವ ಈ ವಿಶಿಷ್ಟ ಆಚರಣೆ ಕಂಡುಬರುವುದು ತಮಿಳುನಾಡಿನ (Tamilnadu) ಮೈಲಾಡುದುರೈ ಜಿಲ್ಲೆಯ ಕೊಲ್ಲಿಡಂ ಸಮೀಪವಿರುವ ಪೆರಂಬೂರ್ (Peramboor) ಗ್ರಾಮದಲ್ಲಿ.
ಪಟಾಕಿ ಸಿಡಿಸಲ್ಲ ಯಾಕೆ?
ಪೆರಂಬೂರ್ ಗ್ರಾಮಸ್ಥರು ನೂರು ವರ್ಷಗಳಿಂದ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಅದಕ್ಕೆ ಕಾರಣ ಅಲ್ಲಿನ ಆಲದ ಮರದಲ್ಲಿ ಆಶ್ರಯ ಪಡೆದಿರುವ ನೂರಾರು ಹಣ್ಣು ತಿನ್ನುವ ಬಾವಲಿಗಳ ರಕ್ಷಣೆ.
ಗ್ರಾಮದಲ್ಲಿ ಸುಮಾರು 150 ವರ್ಷಗಳಿಗೂ ಹೆಚ್ಚು ಹಳೆಯದಾದ ಬೃಹತ್ ಆಲದ ಮರವಿದೆ. ಸ್ಥಳೀಯ ಭಾಷೆಯಲ್ಲಿ ಈ ಪ್ರದೇಶವನ್ನು ‘ವವ್ವಾಲ್ ತೋಪ್ಪು’ (ಬಾವಲಿಗಳ ತೋಟ) ಎಂದು ಕರೆಯಲಾಗುತ್ತದೆ.ಈ ಆಲದ ಮರದ ಕೆಳಗೆ ಗ್ರಾಮಸ್ಥರ ಆರಾಧ್ಯ ದೈವವಾದ ಮುನೀಶ್ವರ ದೇವರ ಸನ್ನಿಧಿ ಇದೆ. ಇದರಿಂದಾಗಿ ಆ ಮರ ಮತ್ತು ಅಲ್ಲಿ ವಾಸಿಸುವ ಜೀವಿಗಳನ್ನು ಗ್ರಾಮಸ್ಥರು ಪವಿತ್ರವೆಂದು ಭಾವಿಸುತ್ತಾರೆ. ಈ ಬಾವಲಿಗಳು ತಮ್ಮ ಗ್ರಾಮದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಒಂದು ಭಾಗ ಎಂದು ನಂಬಿರುವ ಗ್ರಾಮಸ್ಥರು, ಸುಮಾರು 100 ವರ್ಷಗಳ ಹಿಂದೆಯೇ ಅವುಗಳಿಗೆ ಯಾವುದೇ ತೊಂದರೆಯಾಗಬಾರದೆಂದು ದೀಪಾವಳಿಯಂದು ಪಟಾಕಿ ಸಿಡಿಸದಿರಲು ತೀರ್ಮಾನಿಸಿದರು. ಈ ನಿಯಮ ತಲೆಮಾರುಗಳಿಂದ ಇಂದಿಗೂ ಚಾಲ್ತಿಯಲ್ಲಿದೆ.
ಇಲ್ಲಿ ನೆಲೆಸಿರುವ ಬಾವಲಿಗಳು ‘ಇಂಡಿಯನ್ ಫ್ಲೈಯಿಂಗ್ ಫಾಕ್ಸ್’ (Indian Flying Foxes) ಎಂಬ ದೊಡ್ಡ ಜಾತಿಯ ಹಣ್ಣು ತಿನ್ನುವ ಬಾವಲಿಗಳು. ಈ ಜೀವಿಗಳು ರಾತ್ರಿಯಿಡೀ ಆಹಾರ ಹುಡುಕಿಕೊಂಡು ಹಾರಿ, ಮುಂಜಾನೆ ತಮ್ಮ ಆವಾಸಸ್ಥಾನವಾದ ಇದೇ ಆಲದ ಮರಕ್ಕೆ ವಿಶ್ರಾಂತಿಗಾಗಿ ಮರಳುತ್ತವೆ. ಹಗಲಿನಲ್ಲಿ ನಿದ್ರಿಸುವ ಇವು ಶಬ್ದಕ್ಕೆ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುತ್ತವೆ.
ದೀಪಾವಳಿಯ ಪಟಾಕಿಗಳ ಕರ್ಕಶ ಶಬ್ದ, ರಾಸಾಯನಿಕ ಹೊಗೆ ಮತ್ತು ಕಣ್ಣು ಕುಕ್ಕುವ ಬೆಳಕು ಇವುಗಳ ನಿದ್ರೆ ಹಾಗೂ ವಿಶ್ರಾಂತಿಯ ಆವರ್ತನವನ್ನು ಹಾಳುಮಾಡುತ್ತವೆ. ಇಂತಹ ತೀವ್ರ ಆಘಾತದಿಂದ ಹೆದರಿ ಬಾವಲಿಗಳು ತಮ್ಮ ಗೂಡುಗಳನ್ನು ಶಾಶ್ವತವಾಗಿ ತೊರೆದು ಹೋಗುವ ಅಪಾಯವಿರುತ್ತದೆ. ಇದನ್ನು ತಡೆಯಲೆಂದೇ ಗ್ರಾಮಸ್ಥರು ಪಟಾಕಿಯನ್ನು ತ್ಯಜಿಸಿದ್ದಾರೆ.
ಹಣ್ಣು ಮತ್ತು ಹೂವಿನ ಮಕರಂದವನ್ನು ತಿನ್ನುವ ಈ ಬಾವಲಿಗಳು, ಬೀಜ ಪ್ರಸರಣ (Seed dispersal) ಮತ್ತು ಸಸ್ಯಗಳ ಪರಾಗಸ್ಪರ್ಶದಲ್ಲಿ (Pollination) ಪ್ರಮುಖ ಪಾತ್ರ ವಹಿಸುತ್ತವೆ. ಸುತ್ತಮುತ್ತಲಿನ ಹಳ್ಳಿಗಳ ಕಾಡು, ಕೃಷಿ ಮತ್ತು ನೈಸರ್ಗಿಕ ಸಸ್ಯವರ್ಗ ಸಮೃದ್ಧವಾಗಿ ಬೆಳೆಯಲು ಈ ಬಾವಲಿಗಳು ಪರೋಕ್ಷವಾಗಿ ನೆರವಾಗುತ್ತವೆ ಎಂಬ ನಿಸರ್ಗ ಪ್ರೇಮವೂ ಈ ನಿರ್ಧಾರಕ್ಕೆ ಕಾರಣ.
ಬಾವಲಿಗಳು ಸಾಮಾನ್ಯವಾಗಿ ಮರದಿಂದ ಹಣ್ಣನ್ನು ಕಿತ್ತುಕೊಂಡು, ಬೇರೆ ಪರಭಕ್ಷಕ ಜೀವಿಗಳ ಭಯವಿಲ್ಲದ ಸುರಕ್ಷಿತ ಸ್ಥಳಕ್ಕೆ ಅಥವಾ ತಮ್ಮ ಗೂಡಿಗೆ ಹಾರಿ ಹೋಗುತ್ತವೆ. ಅಲ್ಲಿ ಹಣ್ಣಿನ ತಿರುಳನ್ನು ತಿಂದು, ಬೀಜಗಳನ್ನು ಹಾಗೆಯೇ ನೆಲಕ್ಕೆ ಉಗುಳುತ್ತವೆ. ಸಣ್ಣ ಬೀಜಗಳಿರುವ ಹಣ್ಣುಗಳನ್ನು ತಿಂದಾಗ, ಆ ಬೀಜಗಳು ಬಾವಲಿಯ ಜೀರ್ಣಾಂಗವ್ಯೂಹದ ಮೂಲಕ ಹಾದುಹೋಗಿ ಹಿಕ್ಕೆಯೊಂದಿಗೆ ಹೊರಬರುತ್ತವೆ. ಬಾವಲಿಗಳ ಜೀರ್ಣಾಂಗದಲ್ಲಿ ಸ್ರವಿಸುವ ಜೀರ್ಣರಸಗಳು ಬೀಜದ ಹೊರಪದರವನ್ನು ಮೃದುಗೊಳಿಸುತ್ತವೆ. ಇದರಿಂದಾಗಿ ಬೀಜಗಳು ನೆಲಕ್ಕೆ ಬಿದ್ದಾಗ ಮೊಳಕೆಯೊಡೆಯುವ ಸಾಮರ್ಥ್ಯ ಹೆಚ್ಚಾಗುತ್ತದೆ. ಬಾವಲಿಗಳು ಹಾರಾಡುವಾಗ ಹಿಕ್ಕೆ ಹಾಕುವುದರಿಂದ, ಹಿಕ್ಕೆ ನೈಸರ್ಗಿಕ ಗೊಬ್ಬರವಾಗಿಯೂ ಕೆಲಸ ಮಾಡುತ್ತದೆ.
ಹಬ್ಬದ ಆಚರಣೆಯ ಪದ್ಧತಿ:
ಗ್ರಾಮಸ್ಥರು ಹಬ್ಬವನ್ನೇನೂ ನಿಲ್ಲಿಸಿಲ್ಲ. ಆಚರಿಸುವ ವಿಧಾನವನ್ನು ಬದಲಿಸಿಕೊಂಡಿದ್ದಾರೆ. ದೀಪಾವಳಿಯ ದಿನದಂದು ಇಡೀ ಗ್ರಾಮ ಕೇವಲ ಮಣ್ಣಿನ ಹಣತೆಗಳನ್ನು ಬೆಳಗಿಸಿ, ಸ್ಥಳೀಯ ದೇವಸ್ಥಾನಗಳಲ್ಲಿ ಶಾಂತಿಯುತವಾಗಿ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಸಂಭ್ರಮಿಸುತ್ತದೆ. ಬಾವಲಿಗಳು ಇರುವ ತೋಪಿನ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಶಬ್ದ ಅಥವಾ ಹೊಗೆ ಉಂಟಾಗದಂತೆ ಎಚ್ಚರವಹಿಸಲಾಗುತ್ತದೆ.
ಪರಿಸರ ಪ್ರೇಮಕ್ಕೆ ಸಿಕ್ಕ ಮನ್ನಣೆ:
ಈ ಗ್ರಾಮದ ವಾತಾವರಣ ಮತ್ತು ಬಾವಲಿಗಳ ಸಂರಕ್ಷಣಾ ಕಾರ್ಯವನ್ನು ಗುರುತಿಸಿ, ತಮಿಳುನಾಡು ಸರ್ಕಾರದ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣಾ ಇಲಾಖೆಯು ಈ ಪ್ರದೇಶವನ್ನು ವಿಶೇಷ ಪರಿಸರ ತಾಣವಾಗಿ (Eco-spot) ಪರಿಗಣಿಸಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ.
ಈ ಬಾವಲಿಗಳು ರಾತ್ರಿ ವೇಳೆ ಸುತ್ತಮುತ್ತಲಿನ ಹತ್ತಾರು ಕಿಲೋಮೀಟರ್ ದೂರ ಸಂಚರಿಸಿ ಮಾವು, ನೇರಳೆ ಮತ್ತು ಇತರೆ ಕಾಡು ಮರಗಳ ಬೀಜಗಳನ್ನು ಹರಡುವುದರಿಂದ ಆ ಭಾಗದ ಜೀವವೈವಿಧ್ಯತೆ ಮತ್ತು ಹಸಿರು ಹೊದಿಕೆ ಮತ್ತಷ್ಟು ವೃದ್ಧಿಸಲು ಸಹಕಾರಿಯಾಗಿದೆ ಎಂದು ಜೀವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆಧುನಿಕತೆಯ ಭರಾಟೆಯಲ್ಲಿ ಪಟಾಕಿಗಳ ಬಳಕೆ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ, ಈ ಗ್ರಾಮದ ಮಕ್ಕಳು ಹಾಗೂ ಯುವಕರು ಹಿರಿಯರ ಈ ಪರಿಸರಸ್ನೇಹಿ ಸಂಪ್ರದಾಯವನ್ನು ಯಾವುದೇ ಮುಜಗರವಿಲ್ಲದೆ ಹೆಮ್ಮೆಯಿಂದ ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷ.






