ಉಡುಪಿ: ತುಳುನಾಡಿನ ಕೃಷಿ ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಯ ಪ್ರತೀಕವಾದ ಬಲೀಂದ್ರ ಪೂಜೆಯನ್ನು ಉಡುಪಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ದೀಪಾವಳಿ ಅಮಾವಾಸ್ಯೆಯ ಪ್ರಯುಕ್ತ ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧವಾಗಿ ಬಲೀಂದ್ರ ಪೂಜೆ ನೆರವೇರಿತು. ಅರಸ ಬಲೀಂದ್ರನನ್ನು ವರ್ಷಕ್ಕೊಮ್ಮೆ ಸ್ವಾಗತಿಸಿ, ಗೌರವಿಸುವ ತುಳುನಾಡಿನ ವಿಶಿಷ್ಟ ಆಚರಣೆಗೆ ಶ್ರೀಕೃಷ್ಣಮಠ ಸಾಕ್ಷಿಯಾಯಿತು.
ಶ್ರೀಕೃಷ್ಣ ಮಠದ ಕನಕ ಗೋಪುರದ ಮುಂಭಾಗದಲ್ಲಿ ಪರ್ಯಾಯ ಶ್ರೀ ಶಿರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬಲೀಂದ್ರ ಪೂಜೆ ನಡೆಯಿತು. ಶ್ರೀಮಠದ ಪುರೋಹಿತರಾದ ಸುದರ್ಶನ ಆಚಾರ್ಯ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಈ ಸಂದರ್ಭದಲ್ಲಿ ಶಿರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಸೇರಿದಂತೆ ಮಠದ ಭಕ್ತರು ಉಪಸ್ಥಿತರಿದ್ದರು.
ತುಳುನಾಡಿನಲ್ಲಿ ಬಲೀಂದ್ರ ಪೂಜೆಗೆ ವಿಶೇಷ ಮಹತ್ವವಿದೆ. ಈ ಭಾಗವನ್ನು ಆಳಿದ ಅರಸ ಬಲೀಂದ್ರನು ದೀಪಾವಳಿಯ ಸಂದರ್ಭದಲ್ಲಿ ತನ್ನ ಪ್ರಜೆಗಳನ್ನು ಕಾಣಲು ಬರುತ್ತಾನೆ ಎಂಬ ನಂಬಿಕೆಯೊಂದಿಗೆ ಆತನನ್ನು ದೀಪ ಬೆಳಗಿಸಿ ಸ್ವಾಗತಿಸುವುದು ಇಲ್ಲಿನ ಸಂಪ್ರದಾಯ. ಕೃಷಿ ಪ್ರಧಾನ ಬದುಕಿನೊಂದಿಗೆ ಬೆಸೆದುಕೊಂಡಿರುವ ಈ ಆಚರಣೆಯಲ್ಲಿ ರೈತರು ತಮ್ಮ ಭತ್ತದ ಗದ್ದೆಗಳಲ್ಲಿ ದೀಪಗಳನ್ನು ಬೆಳಗಿಸಿ ಬಲೀಂದ್ರನನ್ನು ಆಹ್ವಾನಿಸುತ್ತಾರೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ಬಲೀಂದ್ರ ಪೂಜೆಯ ಬಳಿಕ ಪಂಚದೀಪ ಪ್ರಜ್ವಲನೆ ನೆರವೇರಿಸಲಾಯಿತು. ನಂತರ ವಾದ್ಯಮೇಳದೊಂದಿಗೆ ಶ್ರೀಕೃಷ್ಣ ಮಠದ ವಿವಿಧ ಭಾಗಗಳಿಗೆ ತೆರಳಿ ದೀಪಗಳನ್ನು ಬೆಳಗಿಸಿ ಪೂಜೆ ಸಲ್ಲಿಸಲಾಯಿತು. ನೂರಾರು ದೀಪಗಳ ಬೆಳಕಿನಲ್ಲಿ ಕಂಗೊಳಿಸಿದ ಕೃಷ್ಣಮಠದ ಸೌಂದರ್ಯ ಭಕ್ತರ ಕಣ್ಮನ ಸೆಳೆಯಿತು. ಭಕ್ತಿಭಾವ, ಸಂಪ್ರದಾಯ ಹಾಗೂ ದೀಪಗಳ ಬೆಳಕಿನೊಂದಿಗೆ ಕೃಷ್ಣಮಠದಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿತ್ತು.
