ತುಮಕೂರು: ಕೊಲೆ ಮತ್ತು ಅತ್ಯಾಚಾರ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬ ಪೆರೋಲ್ ಮೇಲೆ ಹೊರಗೆ ಬಂದು ಮನೆಗಳ್ಳತನ ಮಾಡಿ ಶಿರಾ (Sira) ಪೊಲೀಸರ (Police) ಕೈಗೆ ಸಿಕ್ಕಿಬಿದ್ದಿದ್ದಾನೆ.
ಪ್ರಶಾಂತ್ ಮೊಗವೀರ್ ಬಂಧನಕ್ಕೊಳಗಾದವನು. 12 ವರ್ಷದ ಹಿಂದೆ ಕುಂದಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆಯಾಗಿತ್ತು. 12 ವರ್ಷಗಳಿಂದ ಜೈಲಿನಲ್ಲಿದ್ದ ಈತ 2025ರ ನವೆಂಬರ್ನಲ್ಲಿ ಒಂದು ತಿಂಗಳ ಪೆರೋಲ್ ಮೇಲೆ ಹೊರಬಂದಿದ್ದ. ಪೆರೋಲ್ ಅವಧಿ ಮುಗಿದರೂ ಜೈಲಿಗೆ ವಾಪಸ್ ಆಗದೆ ತಲೆಮರೆಸಿಕೊಂಡಿದ್ದ. ಇದನ್ನೂ ಓದಿ: ಸ್ಪಾಗಳ ಹೆಸರಲ್ಲಿ ವೇಶ್ಯಾವಾಟಿಕೆ – ಗ್ರಾಹಕರಂತೆ ತೆರಳಿ 29 ಮಹಿಳೆಯರನ್ನು ರಕ್ಷಿಸಿದ ದೆಹಲಿ ಪೊಲೀಸರು
ಪೆರೋಲ್ ಅವಧಿಯಲ್ಲಿ ವೈದ್ಯೆಯೊಬ್ಬರನ್ನು ಮದುವೆಯಾಗಿದ್ದ. ಜೈಲಿನಲ್ಲಿ ಚಿಕಿತ್ಸೆ ಪಡೆಯಲು ಹೋಗುತ್ತಿದ್ದ ವೇಳೆ ವೈದ್ಯೆಯ ಪರಿಚಯವಾಗಿತ್ತು. ಬಳಿಕ ಪ್ರೇಮಕ್ಕೆ ತಿರುಗಿ, ಇಬ್ಬರು ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.
ಪ್ರಶಾಂತ್ ಜೈಲಿನಲ್ಲಿ ಸಹ ಕೈದಿಗಳಾದ ನಿತೀಶ್ ಡೂಪ್ಲೆ, ಭೀಮ, ಮಲ್ಲಿಕಾರ್ಜುನ ಜೊತೆ ಸೇರಿ ಕಳ್ಳತನಕ್ಕಿಳಿದು ಈಗ ಮತ್ತೆ ಜೈಲು ಸೇರಿದ್ದಾನೆ. ಶಿರಾ ಪಟ್ಟಣದಲ್ಲಿ 50 ಗ್ರಾಂ ಚಿನ್ನಾಭರಣ ದೋಚಿದ್ದ ಆರೋಪ ಈ ಗ್ಯಾಂಗ್ ಮೇಲಿದೆ. ಅಲ್ಲದೇ ಆಂಧ್ರಪ್ರದೇಶದ ಅದೋನಿಯಲ್ಲಿ ಚಿನ್ನದ ಸರ ಕಳ್ಳತನ ಪ್ರಕರಣದಲ್ಲೂ ಭಾಗಿಯಾದ ಆರೋಪ ಕೇಳಿಬಂದಿದೆ. ಈ ಗ್ಯಾಂಗ್ನ ಭೀಮ ಅದೋನಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.
ಬೆಳಗಾವಿಯಲ್ಲಿ ಪೆರೋಲ್ ಮೇಲೆ ಹೊರಬಂದು ನಾಪತ್ತೆಯಾದ ಬಗ್ಗೆ ಪ್ರಶಾಂತ್ ಮೊಗವೀರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಂಕೋಲದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದು, ಶಿರಾದಲ್ಲಿ ಕದ್ದಿದ್ದ 50 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಆಯನೂರು ಬಳಿ ಹಿಟ್ & ರನ್ಗೆ ಲೈನ್ಮ್ಯಾನ್ ಬಲಿ
