– ಎಐ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ ಒತ್ತು
ನವದೆಹಲಿ: 2027-28ನೇ ಸಾಲಿನ ಕೇಂದ್ರ ಬಜೆಟ್ ಸಿದ್ಧತೆಯ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಜೆನ್ ಝಿಗಳ (Gen-Z) ಜೊತೆ ಪೂರ್ವ ಸಮಾಲೋಚನೆ ನಡೆಸಿದರು.
ಗುರುವಾರ (ನ.26) 2027-28ನೇ ಸಾಲಿನ ಕೇಂದ್ರ ಬಜೆಟ್ (Central Budget) ಸಿದ್ಧತೆಯ ಭಾಗವಾಗಿ ಜೆನ್ ಝಿಗಳ ಪ್ರತಿನಿಧಿಗಳೊಂದಿಗೆ ಮೊದಲ ಬಾರಿಗೆ ವಿಶೇಷ ಬಜೆಟ್ ಪೂರ್ವ ಸಮಾಲೋಚನಾ ಸಭೆ ನಡೆಸಿದರು. ಈ ಸಭೆಯಲ್ಲಿ ಎಐ, ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದನ್ನೂ ಓದಿ: ಜಿಲ್ಲಾಧಿಕಾರಿಗೆ ಅಶ್ಲೀಲ ಮೆಸೇಜ್ – ಟಿವಿಕೆ ಶಾಸಕ ಅರೆಸ್ಟ್
ಎಐ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ ಒತ್ತು:
ಸಭೆಯಲ್ಲಿ ಎಐ, ತಂತ್ರಜ್ಞಾನ ಆಧಾರಿತ ಮಾರುಕಟ್ಟೆಯಲ್ಲಿನ ಬದಲಾವಣೆಗಳಿಗೆ ಯುವಜನತೆಯನ್ನು ಸಜ್ಜುಗೊಳಿಸಲು ತರಬೇತಿಯನ್ನು ಮೇಲ್ದರ್ಜೆಗೇರಿಸುವ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬಲಪಡಿಸುವ ಅಗತ್ಯವನ್ನು ಪ್ರತಿನಿಧಿಗಳು ಒತ್ತಿ ಹೇಳಿದರು. ಕೈಗಾರಿಕೆಗಳ ಅಗತ್ಯತೆಗಳು ಮತ್ತು ಶೈಕ್ಷಣಿಕ ಪಠ್ಯಕ್ರಮದ ನಡುವೆ ಹೆಚ್ಚಿನ ಸಮನ್ವಯ ಇರಬೇಕು ಎಂದು ಕರೆ ನೀಡಿದರು.
ಈ ವೇಳೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ `ಪಿಎಂ ಇಂಟರ್ನ್ಶಿಪ್ ಯೋಜನೆ’ಯನ್ನು ಇನ್ನಷ್ಟು ಆಕರ್ಷಕ ಮತ್ತು ಪರಿಣಾಮಕಾರಿಯಾಗಿ ರೂಪಿಸಬೇಕು ಎಂಬ ಸಲಹೆಗಳೂ ಕೇಳಿಬಂದವು. ಎರಡು ಗಂಟೆಗಳ ಕಾಲ ನಡೆದ ಈ ಸಮಾಲೋಚನಾ ಸಭೆಯಲ್ಲಿ ಸುಮಾರು ಶೇ.50ರಷ್ಟು ಮಹಿಳೆಯರು ಭಾಗವಹಿಸಿದ್ದರು. ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಹಣಕಾಸು ಸಚಿವರಿಗೆ ತಮ್ಮ ಶಿಫಾರಸುಗಳನ್ನು ಸಲ್ಲಿಸಿದರು.ಇದನ್ನೂ ಓದಿ: ಯೋಗಿ ಇಲ್ಲದಿದ್ದರೆ, ಉತ್ತರ ಪ್ರದೇಶ ಇಲ್ಲ – ಸಿಎಂ ಯೋಗಿ ಆದಿತ್ಯನಾಥ್ ಶ್ಲಾಘಿಸಿ ಅಚ್ಚರಿ ಮೂಡಿಸಿದ ಸಂಜಯ್ ರಾವತ್
ನ.16 ರಿಂದ 26ರವರೆಗೆ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವ ಸಭೆಗಳ ಸರಣಿಯ ಭಾಗವಾಗಿ ಈ ಯುವ ಸಮಾಲೋಚನೆಯನ್ನು ಆಯೋಜಿಸಲಾಗಿತ್ತು. 13 ವಲಯಗಳು ಮತ್ತು ಪಾಲುದಾರರ ಗುಂಪುಗಳಿಂದ 200ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಒಟ್ಟುಗೂಡಿಸಿದ್ದ ಈ ಸಮಾಲೋಚನೆಗಳಲ್ಲಿ ಮೊದಲ ಬಾರಿಗೆ ಯುವ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಲಾಗಿತ್ತು. ಈ ಸಭೆಗಳಲ್ಲಿ ಕೈಗಾರಿಕಾ ಸಂಘಗಳ ಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ತಜ್ಞರು, ಉದ್ಯಮಿಗಳು ಮತ್ತು ಶಿಕ್ಷಣ ತಜ್ಞರು ಭಾಗವಹಿಸಿದ್ದರು.
ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅನುರಾಧಾ ಠಾಕೂರ್, ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್, ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳು ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ವಾರ್ಷಿಕ ಬಜೆಟ್ ಸಿದ್ಧತೆಗೆ ಮುನ್ನ ವಿವಿಧ ಪಾಲುದಾರರ ಗುಂಪುಗಳಿಂದ ಸಲಹೆಗಳನ್ನು ಪಡೆಯಲು ಬಜೆಟ್ ಪೂರ್ವ ಸಮಾಲೋಚನೆಗಳನ್ನು ನಡೆಸಲಾಗುತ್ತದೆ. ಮುಂಬರುವ ಹಣಕಾಸು ವರ್ಷದ ಆರ್ಥಿಕ ಆದ್ಯತೆಗಳು ಮತ್ತು ನೀತಿ ಕ್ರಮಗಳನ್ನು ನಿರ್ಧರಿಸಲು ಸರ್ಕಾರಕ್ಕೆ ಈ ಶಿಫಾರಸುಗಳು ನೆರವಾಗಲಿವೆ.ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಶರದ್ ಪವಾರ್ ಬಣದ ಎನ್ಸಿಪಿಯಿಂದ ಬೆಂಬಲ ಘೋಷಣೆ
