ಕೋಲಾರ: ಇಲ್ಲಿನ (Kolar) ಸುಂದರಪಾಳ್ಯ ಬಳಿಯ ಚೆನೈ-ಬೆಂಗಳೂರು ಎಕ್ಸ್ಪ್ರೆಸ್ ಹೈವೆಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಯಲ್ಲಿ ಮಹಿಳೆಯ (Woman) ಶವವನ್ನು ಪಾರ್ಸೆಲ್ ರೀತಿ ಸುತ್ತಿ ದುಷ್ಕರ್ಮಿಗಳು ಎಸೆದು ಹೋಗಿದ್ದಾರೆ.
ಪಾರ್ಸೆಲ್ ರೀತಿ ಬಿದ್ದಿದ್ದ ಮೂಟೆಯನ್ನು ಕಂಡ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ವಾಸನೆ ಬಂದಿದೆ. ತಕ್ಷಣ ಬೇತಮಂಗಲ ಪೊಲೀಸರಿಗೆ ಜನ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ 35 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದೆ. ಶವದ ಗುರುತು ಪತ್ತೆಯಾಗಿಲ್ಲ. ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಇದನ್ನೂ ಓದಿ: ಮಾತುಕತೆಗಾಗಿ ಮಸ್ತಾನ್ ದರ್ಗಾ ಬಳಿಯ ಲಾಡ್ಜ್ಗೆ ಬಂದಿದ್ದ ಜೋಡಿ – ಇಂದು ಚೆಕ್ಔಟ್ ಆಗುವಾಗ ಗಲಾಟೆ; ಇರಿದು ಕೊಂದ ಪ್ರಿಯಕರ
ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಕುಳಿತ ಸ್ಥಿತಿಯಲ್ಲಿ ಆಕೆಯ ಶವವನ್ನು ಕೈಕಾಲು ಕಟ್ಟಿ ನಂತರ 1 ಗೋಣಿ ಚೀಲದಲ್ಲಿ ಹಾಕಿ, ಆದಕ್ಕೆ ಮತ್ತೊಂದು ಪ್ಲಾಸ್ಟಿಕ್ ಕವರ್ ಸುತ್ತಿ, ಅದರ ಮೇಲೆ ಪಾರ್ಸೆಲ್ ಪ್ಲಾಸ್ಟರ್ ಸುತ್ತಿ ನಂತರ ವಾಷಿಂಗ್ ಮಿಷನ್ ಟ್ರಾಲಿಗೆ ಕಟ್ಟಿ ತಂದು ಬಿಸಾಡಿದ್ದಾರೆ. ಕಾರಿನಲ್ಲಿ ಶವ ಬಿಸಾಡಿ ಹೋಗಿರುವ ಚಲನ ವಲನಗಳು ಹೆದ್ದಾರಿ ಟೋಲ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸುಂದರಪಾಳ್ಯ, ಆಂದ್ರ ಮತ್ತು ತಮಿಳುನಾಡಿನ ಗಡಿ ಪ್ರದೇಶವಾಗಿದ್ದು ಅಲ್ಲಿಂದಲೂ ಯಾರಾದರೂ ಶವವನ್ನು ತಂದು ಬಿಸಾಡಿ ಹೋಗಿರುವ ಸಾಧ್ಯತೆ ಇದೆ. ಗಡಿ ಭಾಗದ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅಲ್ಲದೇ ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಮಹಿಳೆಯ ಗುರುತು ಪತ್ತೆಹಚ್ಚಲು ಕ್ರಮಕೈಗೊಳ್ಳಲಾಗಿದೆ.
ಸ್ಥಳಕ್ಕೆ ಕೆಜಿಎಫ್ ಎ.ಶಿವಾಂಶು ರಜಪೂತ್ ಹಾಗೂ ಡಿವೈಎಸ್ಪಿ ಲಕ್ಷ್ಮಯ್ಯ, ಸೋಕೋ ತಂಡ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಕೊಲೆ – ಪ್ರಿಯಕರನಿಂದಲೇ ದುಷ್ಕೃತ್ಯ
