ಕಾರವಾರ: ಅಪ್ರಾಪ್ತ ಬಾಲಕಿ ಅತ್ಯಾಚಾರ ಮಾಡಿದ ಅರೋಪಿಯ ಮನೆಯನ್ನು ಉದ್ರಿಕ್ತಗೊಂಡ ಜನ ಧ್ವಂಸಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.
12 ವರ್ಷದ ದಲಿತ ಬಾಲಕಿಯನ್ನ ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿ ಮನೆಯವರಿಗೆ ಹೇಳದಂತೆ ಆರೋಪಿ ನೋಡಿಕೊಂಡಿದ್ದ. ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ ಪೋಷಕರು ವೈದ್ಯರಿಗೆ ತೋರಿಸಿದ್ದಾರೆ. ಈ ವೇಳೆ ಆಕೆ ಗರ್ಭಿಣಿ ಎಂದು ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತರಾದ ಮುಂಡಗೋಡು ಪೊಲೀಸರು ಅತ್ಯಾಚಾರ ಆರೋಪಿಯನ್ನು ಬಂಧಿಸಿದ್ದರು. ಈ ಘಟನೆ ಊರಿನ ಜನರಿಗೆ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಜನ ಆರೋಪಿಯ ಮನೆಯನ್ನೇ ಧ್ವಂಸ ಮಾಡಿ ಅಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65ರ ವೃದ್ಧ
ಘಟನೆ ಏನು?
ಅತ್ಯಾಚಾರಕ್ಕೆ ಒಳಗಾದ ಬಾಲಕಿ ಹಾಗೂ ಆರೋಪಿ ಒಂದೇ ಊರಿನವರಾಗಿದ್ದು, ಆರೋಪಿ ಈ ಬಾಲಕಿಯನ್ನ ಮೊದಲು ಪುಸಲಾಯಿಸಿ ವಿಶ್ವಾಸ ಗಳಿಸಿದ್ದ. ಆರೋಪಿ ಕಳೆದ ಎಂಟೂವರೆ ತಿಂಗಳ ಹಿಂದೆ ತನ್ನ ಮನೆಯಲ್ಲಿ ಅತ್ಯಾಚಾರ ಎಸಗಿದ್ದ. ಯಾರಿಗೂ ಹೇಳದಂತೆ ಬಾಲಕಿಗೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದ.
