– ರೈಫಲ್ನಲ್ಲಿ ತಾಂತ್ರಿಕ ದೋಷ – ತಪ್ಪಿದ ಮಾರಣಹೋಮ
– ದೋಷ ಸರಿಪಡಿಸಿಲು ಆನ್ಲೈನ್ನಲ್ಲಿ ಹುಡುಕಾಡಿದ್ದ ಯುವಕ
ವಾಷಿಂಗ್ಟನ್: ಹಿಂದೂ ದೇವಾಲಯದಲ್ಲಿ ಭಾರತೀಯರನ್ನ ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ (Mass Shooting) ನಡೆಸಲು ಸಂಚು ರೂಪಿಸಿದ್ದ ಅಮೆರಿಕದ ಯುವಕನನ್ನ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಹೌದು. ಅಮೆರಿಕದ ಇಲಿನಾಯ್ಸ್ನಲ್ಲಿರುವ ಹಿಂದೂ ದೇವಾಲಯದಲ್ಲಿ (Hindu Temple) ಭಾರತೀಯರನ್ನ ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ 19 ವರ್ಷದ ಅಮೆರಿಕದ ಪ್ರಜೆಯನ್ನ ವಶಕ್ಕೆ ಬಂಧಿಸಲಾಗಿದೆ. ಆತನ ರೈಫಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಭೀಕರ ಮಾರಣ ಹೋಮ ತಪ್ಪಿದೆ, ಜೊತೆಗೆ ಸಂಚು ಕೂಡ ಬಯಲಾಗಿದೆ ಎಂದು ಆತನ ಸಹೋದ್ಯೋಗಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಂಧಿತನನ್ನು ಇಲಿನಾಯ್ಸ್ನ ಪಾಲಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಾಪೊರಾಕಿಸ್ (Alexandros Paporakis) ಎಂದು ಗುರುತಿಸಲಾಗಿದೆ. ಈತ ಟ್ಯಾಕೋ ಬೆಲ್ (Taco Bell) ರೆಸ್ಟೋರೆಂಟ್ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಇಲಿನಾಯ್ಸ್ನ ಅರೋರಾ ನಗರದ ನೈಋತ್ಯ ಉಪನಗರದಲ್ಲಿರುವ ಅತಿದೊಡ್ಡ ಹಿಂದೂ ದೇವಾಲಯದಲ್ಲಿ ಭಾರತೀಯರನ್ನ (Indians) ಗುರಿಯಾಗಿಸಿ ಸಾಮೂಹಿಕ ಗುಂಡಿನ ದಾಳಿ ನಡೆಸಲು ಈತ ಯೋಜಿಸಿದ್ದ. ಕಳೆದ ಭಾನುವಾರ ಆತ ದೇವಾಲಯಕ್ಕೆ ತೆರಳಿದ್ದ ಎಂದು ವರದಿಗಳು ತಿಳಿಸಿವೆ.

ತನಿಖಾಧಿಕಾರಿಗಳ ಪ್ರಕಾರ, ಆರೋಪಿಯ ಬಳಿ ಮಾರ್ಪಡಿಸಲಾದ ಎಆರ್ ಮಾದರಿಯ ರೈಫಲ್, 300 ಸುತ್ತುಗಳ ಗುಂಡುಗಳು, ದೇಹದ ರಕ್ಷಣಾ ಕವಚ, ಪೆಟ್ರೋಲ್ ಕ್ಯಾನ್ಗಳು ಹಾಗೂ ಸ್ವಸ್ತಿಕ್ ಚಿಹ್ನೆಗಳಿದ್ದವು. ತನ್ನ ತಾಯಿಯ ಮನೆಯಿಂದ ದೇವಾಲಯಕ್ಕೆ ತೆರಳಿದ್ದ ಆತ, ಹೆಚ್ಚಿನ ಸಂಖ್ಯೆಯ ಭಾರತೀಯರನ್ನ ಹತ್ಯೆ ಮಾಡುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರೈಫಲ್ನಲ್ಲಿ ತಾಂತ್ರಿಕ ದೋಷ – ಸಹೋದ್ಯೋಗಿಯಿಂದ ಪೊಲೀಸರಿಗೆ ಮಾಹಿತಿ
ಆರೋಪಿಯ ರೈಫಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಆತ ಗುಂಡು ಹಾರಿಸಲು ಸಾಧ್ಯವಾಗಲಿಲ್ಲ. ಇದರಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದಂತಾಗಿದೆ. ದಾಳಿ ನಡೆಸಲು ಸಾಧ್ಯವಾಗದ ಬಳಿಕ ಆತ ಅಲ್ಲಿಂದ ತೆರಳಿದ್ದು, ತನ್ನ ರೈಫಲ್ನ ದೋಷವನ್ನು ಹೇಗೆ ಸರಿಪಡಿಸಬಹುದು ಎಂಬುದರ ಕುರಿತು ಆನ್ಲೈನ್ನಲ್ಲಿ ಹುಡುಕಾಡಿದ್ದಾನೆ. ಅಲ್ಲದೆ, ಸಾಮೂಹಿಕ ಗುಂಡಿನ ದಾಳಿ ನಡೆಸುವ ತನ್ನ ಉದ್ದೇಶದ ಬಗ್ಗೆ ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಿ ತಿಳಿಸಿದ್ದಾನೆ. ಬಳಿಕ ಆರೋಪಿಯ ಸಹೋದ್ಯೋಗಿ ಪೊಲೀಸರಿಗೆ ಈ ಸಂಚಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಅಕ್ಟೋಬರ್ 11ರಂದು ಪಾಪೊರಾಕಿಸ್ನನ್ನು ಬಂಧಿಸಲಾಗಿದೆ ಎಂದು ಕೂಡ ವರದಿಗಳಿಂದ ತಿಳಿದುಬಂದಿದೆ.
ಸದ್ಯ 19ರ ಯುವಕನನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

