ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ(Bengaluru) ತಡರಾತ್ರಿ ಧಾರಾಕಾರ ಮಳೆಯಾಗಿದೆ. ನಿನ್ನೆ ಸಂಜೆ ಸುಮಾರು 1 ಗಂಟೆ ಕಾಲ ಮಳೆಯಾಗಿತ್ತು. ಬಳಿಕ ರಾತ್ರಿ 10 ಗಂಟೆಯ ನಂತರ ಮತ್ತೆ ನಗರದ ಹಲವೆಡೆ ಭಾರೀ ಮಳೆ(Rain) ಸುರಿದಿದೆ.
ರಾತ್ರಿ ಸತತ 4 ಗಂಟೆಗಳ ಕಾಲ ಅಬ್ಬರಿಸಿದ ವರುಣನ ಆರ್ಭಟಕ್ಕೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿದಿದೆ.
ಮಲ್ಲೇಶ್ವರಂ ಮತ್ತು ಯಶವಂತಪುರ ಸಂಪರ್ಕಿಸುವ ರಸ್ತೆ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿತ್ತು. ರಸ್ತೆಯಲ್ಲಿ ನಿಂತ ಭಾರಿ ನೀರಿನಲ್ಲಿ ಬೈಕ್ಗಳು ಕೆಟ್ಟು ನಿಂತಿದ್ದು, ಸವಾರರು ವಾಹನಗಳನ್ನು ನೀರಿನಲ್ಲೇ ತಳ್ಳಿಕೊಂಡು ಹೋಗುವ ದುಸ್ಥಿತಿ ಎದುರಾಯಿತು.
ನಗರದ ವಾಣಿಜ್ಯ ಕೇಂದ್ರ ಕೆ.ಆರ್. ಮಾರ್ಕೆಟ್ ರಸ್ತೆ ಕೆರೆಯ ಸ್ವರೂಪ ಪಡೆದುಕೊಂಡಿತ್ತು. ಮೊಣಕಾಲುದ್ದ ನೀರು ನಿಂತ ಪರಿಣಾಮ ವಾಹನ ಸವಾರರು ಹಾಗೂ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದು, ವ್ಯಾಪಾರ ಮುಗಿಸಿ ಮನೆಗೆ ತೆರಳಲು ಹರಸಾಹಸ ಪಡಬೇಕಾಯಿತು. ಇದನ್ನೂ ಓದಿ: ಹಾಸನ ದೇವಿಗೆರೆಯಲ್ಲಿ ಪೆಂಡಾಲ್ ಗಣಪತಿ ವಿಸರ್ಜನೆ – ಹಾಸನ ಎಸ್ಪಿಗೆ ಡಿಸಿ ನೋಟಿಸ್
ಸುರೇಶ್ ಕುಮಾರ್ಗೆ ಸಂಕಷ್ಟ
ಮಳೆಯಿಂದಾಗಿ ಚಂದಾಪುರ ವ್ಯಾಪ್ತಿಯಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿದೆ. ಸುಮಾರು 2 ಕಿ.ಮೀ ಉದ್ದದ ಟ್ರಾಫಿಕ್ ಜಾಮ್ನಲ್ಲಿ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಸಿಲುಕಿಕೊಂಡಿದ್ದರು. ಬರೋಬ್ಬರಿ 50 ನಿಮಿಷಗಳ ಕಾಲ ಒಂದಿಂಚೂ ಮುಂದೆ ಸಾಗಲಾಗದೆ ರಸ್ತೆಯಲ್ಲೇ ಕಾಲ ಕಳೆದ ಅವರು, ಸಂಚಾರ ದಟ್ಟಣೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮಳೆಯ ಅಬ್ಬರಕ್ಕೆ ನಗರದ ಬಹುತೇಕ ಕಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಬಿಬಿಎಂಪಿ ಮತ್ತು ಸಂಚಾರ ಪೊಲೀಸರು ರಸ್ತೆಗೆ ಇಳಿದು ನೀರು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

