ಬಿಗ್‌ಬಾಸ್(Bigg Boss) ಮನೆಯಿಂದ ಈ ವಾರ ‘ಕಾಮನ್‌ಮ್ಯಾನ್’ ಕೋಟಾದ ಸ್ಪರ್ಧಿ ಲಿಖಿತ್ ಗೊಂದಿ(Likith Gondhi) ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಮನೆಯಿಂದ ಹೊರಬರುತ್ತಿದ್ದಂತೆಯೇ ತಮ್ಮ ನಾಲ್ಕು ವಾರಗಳ ಜರ್ನಿ, ಆಟದ ವೈಖರಿ ಹಾಗೂ ಎಲಿಮಿನೇಷನ್ ಕುರಿತು ಲಿಖಿತ್ ಅತ್ಯಂತ ಪ್ರಾಮಾಣಿಕವಾಗಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
‘ಅಗ್ನಿಪರೀಕ್ಷೆ’ಯಲ್ಲಿ ಗೆದ್ದು ಬಿಗ್‌ಬಾಸ್ ಮನೆಯೊಳಗೆ ಆತ್ಮವಿಶ್ವಾಸದಿಂದ ಪ್ರವೇಶ ಪಡೆದಿದ್ದ ನಾಲ್ವರು ಕಾಮನ್‌ಮ್ಯಾನ್ ಸ್ಪರ್ಧಿಗಳ ಪೈಕಿ, ಎಲ್ಲರಿಗಿಂತ ಮೊದಲು ಹೊರಬಂದಿದ್ದು ಲಿಖಿತ್ ಗೊಂದಿ. ಇತರ ಸ್ಪರ್ಧಿಗಳಿಗಿಂತ ಮೊದಲೇ ಏಕೆ ಎಲಿಮಿನೇಟ್ ಆಗಬೇಕಾಯಿತು ಎಂಬ ಪ್ರಶ್ನೆಗೆ ಯಾವುದೇ ನೆಪ ಹೇಳದೆ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ನನ್ನ ಎಲಿಮಿನೇಷನ್‌ಗೆ ಸಂಪೂರ್ಣವಾಗಿ ನಾನೇ ಕಾರಣ. ನಾನು ಆಟವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಸಮಯ ಸಿಕ್ಕಾಗ ನನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕಿತ್ತು. ನನಗೆ ಸಿಕ್ಕಿದ್ದ ಅತ್ಯಂತ ದೊಡ್ಡ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದು ನಾನು ಹೊರಬಂದಿರಲು ನನ್ನ ಆಟದ ವೈಖರಿಯೇ ಕಾರಣ ಎಂದು ಲಿಖಿತ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ನಲ್ಲಿ ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಪರದಾಟ
ಮನೆಯೊಳಗಿನ ನೆನಪುಗಳನ್ನು ಮೆಲುಕು ಹಾಕಿದ ಲಿಖಿತ್, “ಬಿಗ್‌ಬಾಸ್ ಮನೆಯಲ್ಲಿ ನಾನು ಮಹಾಕವಿ ಮಂಜು(Manju) ಅವರ ಒಡನಾಟ ಮತ್ತು ಸ್ನೇಹವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ಅದ್ಭುತವಾಗಿ ಆಡುತ್ತಿದ್ದು, ಈ ಸೀಸನ್‌ನ ಬಿಗ್‌ಬಾಸ್ ಟ್ರೋಫಿಯನ್ನು ಮಂಜು ಅವರೇ ಗೆಲ್ಲುತ್ತಾರೆ” ಎಂದು ಭವಿಷ್ಯ ನುಡಿದಿದ್ದಾರೆ.

