ದಶಕಗಳಿಂದ ಭಾರತೀಯರ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಪೆಟ್ರೋಲ್ ದ್ವಿಚಕ್ರ ವಾಹನಗಳ ಅಧಿಪತ್ಯಕ್ಕೆ ಈಗ ಬಲವಾದ ಪೈಪೋಟಿ ಶುರುವಾಗಿದೆ. ಗಗನಕ್ಕೇರಿರುವ ಇಂಧನ ದರ ಹಾಗೂ ದಿನೇದಿನೆ ಮುಂದುವರಿಯುತ್ತಿರುವ ಬ್ಯಾಟರಿ ತಂತ್ರಜ್ಞಾನ(Battery Technology) ದೇಶದ ಸಾರಿಗೆ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಿಸುತ್ತಿದೆ. 2026ರಲ್ಲಂತೂ ಎಲೆಕ್ಟ್ರಿಕ್(Electric) ವಾಹನಗಳ ಮಾರಾಟ ಸಾರ್ವಕಾಲಿಕ ದಾಖಲೆ ಬರೆದಿದ್ದು, ಭಾರತೀಯ ಸವಾರರು ಕೇವಲ ಪರಿಸರ ಕಾಳಜಿಗಾಗಿ ಮಾತ್ರವಲ್ಲದೆ, ತಮ್ಮ ತಿಂಗಳ ಬಜೆಟ್ ಉಳಿತಾಯಕ್ಕಾಗಿ ಇವಿ ಕಡೆಗೆ ಮುಖಮಾಡುತ್ತಿದ್ದಾರೆ. ಹಾಗಾದರೆ ಸಾಂಪ್ರದಾಯಿಕ ಪೆಟ್ರೋಲ್ ಬೈಕ್‌ಗಳಿಗಿಂತ ಇವಿ ನಿಜಕ್ಕೂ ಲಾಭದಾಯಕವೇ? 5 ವರ್ಷಗಳ ಒಡೆತನದ ಲೆಕ್ಕಾಚಾರವೇನು? ಇಲ್ಲಿದೆ ಸಂಪೂರ್ಣ ವಿವರ.
ದಾಖಲೆ ಬರೆದ ಮಾರಾಟದ ಸಂಖ್ಯೆ
2026ರ ಮೊದಲ 9 ತಿಂಗಳುಗಳಲ್ಲೇ ಭಾರತದಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಇದು ಇಡೀ 2025ರ ಒಟ್ಟು ಮಾರಾಟದ ದಾಖಲೆಯನ್ನು ಮೀರಿಸಿದೆ. ಕೇವಲ ಸೆಪ್ಟೆಂಬರ್ 2026 ರ ಒಂದೇ ತಿಂಗಳಲ್ಲಿ ದಾಖಲೆಯ 2.07 ಲಕ್ಷಕ್ಕೂ ಹೆಚ್ಚು ಇವಿ ಬೈಕ್/ಸ್ಕೂಟರ್‌ಗಳು ನೋಂದಣಿಯಾಗಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.88 ರಷ್ಟು ಭಾರೀ ಬೆಳವಣಿಗೆಯಾಗಿದೆ.
ಭಾರತದ ಒಟ್ಟು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಇವಿ ವಾಹನಗಳ ಪಾಲು ಈಗ ಶೇ.11 ಕ್ಕಿಂತ ಹೆಚ್ಚು ತಲುಪಿದೆ. ಅಂದರೆ, ದೇಶದಲ್ಲಿ ಮಾರಾಟವಾಗುವ ಪ್ರತಿ 100 ದ್ವಿಚಕ್ರ ವಾಹನಗಳಲ್ಲಿ 11 ಕ್ಕೂ ಹೆಚ್ಚು ವಾಹನಗಳು ಎಲೆಕ್ಟ್ರಿಕ್ ಆಗಿವೆ. ತಜ್ಞರ ಅಂದಾಜಿನ ಪ್ರಕಾರ, 2030ರ ವೇಳೆಗೆ ರಸ್ತೆಯಲ್ಲಿರುವ ಶೇ.40 ರಿಂದ 45 ರಷ್ಟು ದ್ವಿಚಕ್ರ ವಾಹನಗಳು ಇವಿ ಆಗಲಿವೆ.

ಇವಿ Vs ಪೆಟ್ರೋಲ್ ಯಾವುದು ಬೆಸ್ಟ್?
ಪ್ರಯಾಣದ ವೆಚ್ಚ: ಎಲೆಕ್ಟ್ರಿಕ್ ಸ್ಕೂಟರ್/ಬೈಕ್‌ಗಳಲ್ಲಿ ಪ್ರಯಾಣದ ವೆಚ್ಚ ಅತ್ಯಂತ ಕಡಿಮೆಯಾಗಿದ್ದು, ಪ್ರತಿ ಕಿಲೋಮೀಟರ್‌ಗೆ ಕೇವಲ 0.17 ಪೈಸೆಯಿಂದ 0.25 ಪೈಸೆ ತಗಲುತ್ತದೆ. ಆದರೆ ಪೆಟ್ರೋಲ್ ಬೈಕ್‌ಗಳಲ್ಲಿ(Petrol) ಇದು ಹೆಚ್ಚಾಗಿದ್ದು, ಪ್ರತಿ ಕಿಲೋಮೀಟರ್‌ಗೆ ಸರಿಸುಮಾರು 1.70 ರಿಂದ 2 ರೂ. ವೆಚ್ಚವಾಗುತ್ತದೆ.
ನಿರ್ವಹಣಾ ವೆಚ್ಚ: ಎಲೆಕ್ಟ್ರಿಕ್ ಬೈಕ್‌ಗಳಲ್ಲಿ ಎಂಜಿನ್ ಇಲ್ಲದಿರುವುದರಿಂದ ಸರ್ವಿಸ್ ಹಾಗೂ ನಿರ್ವಹಣಾ ವೆಚ್ಚ ತೀರಾ ಕಡಿಮೆ ಇರುತ್ತದೆ. ಇದಕ್ಕೆ ವಿರುದ್ಧವಾಗಿ, ಪೆಟ್ರೋಲ್ ಬೈಕ್‌ಗಳಿಗೆ ನಿಯಮಿತವಾಗಿ ಇಂಜಿನ್ ಆಯಿಲ್ ಬದಲಾವಣೆ ಹಾಗೂ ಎಂಜಿನ್ ಸರ್ವಿಸ್ ಅಗತ್ಯವಿರುವುದರಿಂದ ನಿರ್ವಹಣಾ ವೆಚ್ಚ ಹೆಚ್ಚಾಗಿರುತ್ತದೆ.
ಆರಂಭಿಕ ಖರೀದಿ ಬೆಲೆ: ಅತ್ಯಾಧುನಿಕ ಬ್ಯಾಟರಿ ತಂತ್ರಜ್ಞಾನದ ಬಳಕೆಯಿಂದಾಗಿ ಎಲೆಕ್ಟ್ರಿಕ್ ಬೈಕ್‌ಗಳ ಆರಂಭಿಕ ಖರೀದಿ ಬೆಲೆ ಕೊಂಚ ಹೆಚ್ಚಿರುತ್ತದೆ. ಆದರೆ ಪೆಟ್ರೋಲ್ ಬೈಕ್‌ಗಳು ಗ್ರಾಹಕರ ಬಜೆಟ್‌ಗೆ ಅನುಗುಣವಾಗಿ ಕೈಗೆಟುಕುವ ದರಗಳಲ್ಲಿ ಲಭ್ಯವಿವೆ.
ಮೈಲೇಜ್ ಮತ್ತು ರೇಂಜ್: ಎಲೆಕ್ಟ್ರಿಕ್ ಬೈಕ್‌ಗಳು ಮಾದರಿಯನ್ನು ಅವಲಂಬಿಸಿ ಒಂದು ಪೂರ್ಣ ಚಾರ್ಜ್‌ಗೆ 80 ರಿಂದ 150 ಕಿಲೋಮೀಟರ್ ವ್ಯಾಪ್ತಿಯನ್ನು (ರೇಂಜ್) ನೀಡಿದರೆ, ಪೆಟ್ರೋಲ್ ಬೈಕ್‌ಗಳು ಒಂದು ಬಾರಿ ಟ್ಯಾಂಕ್ ಫುಲ್ ಮಾಡಿದರೆ ಸುಲಭವಾಗಿ 300 ರಿಂದ 500 ಕಿಲೋಮೀಟರ್‌ವರೆಗೂ ಚಲಿಸುತ್ತವೆ.
ಇಂಧನ ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲು ಸಾಮಾನ್ಯವಾಗಿ 3 ರಿಂದ 5 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ; ಆದರೆ ಪೆಟ್ರೋಲ್ ಬೈಕ್‌ಗಳಿಗೆ ಕೇವಲ 2 ನಿಮಿಷಗಳಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿಕೊಳ್ಳಬಹುದು.

ನಗರ ಸವಾರಿಗೆ ಇವಿ:
ದೆಹಲಿ, ಬೆಂಗಳೂರು ಹಾಗೂ ಮುಂಬೈನಂತಹ ಮೆಟ್ರೋ ನಗರಗಳಲ್ಲಿ ನಿತ್ಯ 20 ರಿಂದ 50 ಕಿ.ಮೀ. ಪ್ರಯಾಣಿಸುವವರಿಗೆ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಂತ ಲಾಭದಾಯಕವಾಗಿ ಮಾರ್ಪಡುತ್ತಿವೆ. ಗೇರ್ ಅಥವಾ ಕ್ಲಚ್ ಬದಲಿಸುವ ಗೋಜಿಲ್ಲದಿರುವುದು ಟ್ರಾಫಿಕ್ ದಟ್ಟಣೆಯಲ್ಲಿ ಸವಾರಿಯನ್ನು ಹಗುರವಾಗಿಸಿದೆ. ಪೆಟ್ರೋಲ್‌ಗೆ ಹೋಲಿಸಿದರೆ ಚಾರ್ಜಿಂಗ್ ವೆಚ್ಚ ತೀರಾ ಕಡಿಮೆ. ಎಂಜಿನ್ ಆಯಿಲ್ ಅಥವಾ ಕ್ಲಚ್ ರಿಪೇರಿ ಇಲ್ಲದಿರುವುದರಿಂದ ನಿರ್ವಹಣಾ ವೆಚ್ಚವೂ ಸವಾರರ ಜೇಬಿಗೆ ಉಳಿತಾಯ ತರುತ್ತಿದೆ.
ಪೆಟ್ರೋಲ್ ಬೈಕ್‌ಗಳಿಗೇಕೆ ಇಂದಿಗೂ ಬೇಡಿಕೆ?
ಇವಿಗಳ ಅಬ್ಬರದ ನಡುವೆಯೂ ಪೆಟ್ರೋಲ್ ಬೈಕ್‌ಗಳ ಜನಪ್ರಿಯತೆ ಕುಗ್ಗಿಲ್ಲ. ದೂರದ ಪ್ರಯಾಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಪೆಟ್ರೋಲ್ ವಾಹನಗಳೇ ಪ್ರಾಯೋಗಿಕ. ನಿಮಿಷಗಳಲ್ಲಿ ಇಂಧನ ತುಂಬಿಸಿಕೊಂಡು ಹೊರಡಬಹುದು; ಮಧ್ಯದಾರಿಯಲ್ಲಿ ಚಾರ್ಜಿಂಗ್ ಪಾಯಿಂಟ್ ಹುಡುಕುವ ಆತಂಕವಿರುವುದಿಲ್ಲ. ಭಾರತೀಯ ಗ್ರಾಹಕರು ದೀರ್ಘಾವಧಿಯ ಬಾಳಿಕೆ, ಸುಲಭ ಮರುಮಾರಾಟ ಮೌಲ್ಯ (ರೀಸೇಲ್ ವ್ಯಾಲ್ಯೂ) ಹಾಗೂ ವಿಶ್ವಾಸಾರ್ಹತೆಗೆ ಆದ್ಯತೆ ನೀಡುತ್ತಾರೆ. ಇದರೊಂದಿಗೆ ಎಂಜಿನ್‌ನ ಶಬ್ದ, ಗೇರ್ ಬದಲಾವಣೆ ಮತ್ತು ವೈಬ್ರೇಷನ್ ನೀಡುವ ರೋಮಾಂಚನಕಾರಿ ಅನುಭವವನ್ನು ಸದ್ಯಕ್ಕೆ ಇವಿಗಳು ಸಂಪೂರ್ಣವಾಗಿ ನೀಡಲಾರವು.
ದಿನಕ್ಕೆ ಸರಾಸರಿ 50 ಕಿ.ಮೀ ಪ್ರಯಾಣಿಸುವ ವ್ಯಕ್ತಿಗೆ 5 ವರ್ಷಗಳ ಅವಧಿಯಲ್ಲಿ ಎಲೆಕ್ಟ್ರಿಕ್ ಮತ್ತು ಪೆಟ್ರೋಲ್ ಬೈಕ್‌ಗಳ ಅಂದಾಜು ವೆಚ್ಚ ಎಷ್ಟಾಗಬಹುದು?
ಎಲೆಕ್ಟ್ರಿಕ್ ಬೈಕ್‌ಗಳ ಆರಂಭಿಕ ಬೆಲೆ ಕೊಂಚ ಹೆಚ್ಚಾಗಿದ್ದು ಸುಮಾರು 1,20,000 ರೂ.ನಿಂದ 1,60,000 ರೂ. ರಷ್ಟಿರುತ್ತದೆ. ಆದರೆ ಪೆಟ್ರೋಲ್ ಬೈಕ್‌ಗಳು ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಅಂದರೆ ಸುಮಾರು 90,000 ರೂ. ನಿಂದ 1,30,000 ರೂ.ಗೆ ಲಭ್ಯವಾಗುತ್ತವೆ.
ಕಡಿಮೆ ವಿದ್ಯುತ್ ದರದ ಕಾರಣದಿಂದಾಗಿ ಎಲೆಕ್ಟ್ರಿಕ್ ಬೈಕ್‌ಗೆ 5 ವರ್ಷಗಳಲ್ಲಿ ಚಾರ್ಜಿಂಗ್ ವೆಚ್ಚ ಕೇವಲ ಸುಮಾರು 20,000 ರೂ. ದಿಂದ 25,000 ರೂ. ಆಗುತ್ತದೆ. ಆದರೆ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ಗಿತ ಕ್ಕಿಂತ ಹೆಚ್ಚಿರುವುದರಿಂದ ಪೆಟ್ರೋಲ್ ಬೈಕ್‌ಗೆ ಸುಮಾರು 1,60,000 ದಿಂದ 1,80,000 ರೂ. ರಷ್ಟು ಭಾರಿ ಮೊತ್ತದ ಇಂಧನ ವೆಚ್ಚ ತಗಲುತ್ತದೆ.

ಎಲೆಕ್ಟ್ರಿಕ್ ಬೈಕ್‌ನಲ್ಲಿ ಎಂಜಿನ್ ಮತ್ತು ಕ್ಲಚ್ ಭಾಗಗಳಿಲ್ಲದ ಕಾರಣ ಸರ್ವಿಸ್ ವೆಚ್ಚ ಅತ್ಯಂತ ಕಡಿಮೆಯಾಗಿದ್ದು, 5 ವರ್ಷಗಳಿಗೆ ಸುಮಾರು ಅಂದಾಜು 10,000 ರೂ. ತಗಲಬಹುದು. ಅದೇ ಪೆಟ್ರೋಲ್ ಬೈಕ್‌ಗೆ ನಿಯಮಿತವಾಗಿ ಎಂಜಿನ್ ಆಯಿಲ್ ಬದಲಾವಣೆ ಹಾಗೂ ನಿರಂತರ ಸರ್ವಿಸ್ ಅಗತ್ಯವಿರುವುದರಿಂದ ಸುಮಾರು ಅಂದಾಜು 40,000 ರೂ. ವೆಚ್ಚವಾಗುತ್ತದೆ.
ಎಲೆಕ್ಟ್ರಿಕ್ ಬೈಕ್‌ಗಳಲ್ಲಿ 5 ವರ್ಷಗಳ ಬಳಕೆಯ ನಂತರ ಬ್ಯಾಟರಿ ಬದಲಾವಣೆಗೆ ಸುಮಾರು 50,000 ದಿಂದ 80,000 ವರೆಗೆ ವೆಚ್ಚವಾಗುವ ಸಾಧ್ಯತೆಯಿರುತ್ತದೆ. ಆದರೆ ಪೆಟ್ರೋಲ್ ಬೈಕ್‌ಗಳಲ್ಲಿ ಎಂಜಿನ್ ದೀರ್ಘಕಾಲ ಬಾಳಿಕೆ ಬರುವುದರಿಂದ ಇಂತಹ ಯಾವುದೇ ಬ್ಯಾಟರಿ ಬದಲಾವಣೆ ಜಾಸ್ತಿ ವೆಚ್ಚ ಅನ್ವಯಿಸುವುದಿಲ್ಲ.
ಎಲೆಕ್ಟ್ರಿಕ್ ಬೈಕ್ ಇವುಗಳಲ್ಲಿ ಇನ್‌ಸ್ಟಂಟ್ ಟಾರ್ಕ್ (Instant Torque) ಇರುತ್ತದೆ. ಅಂದರೆ, ನೀವು ಆಕ್ಸಿಲರೇಟರ್ ಕೊಟ್ಟ ತಕ್ಷಣವೇ ಬೈಕ್ ಅತ್ಯಂತ ವೇಗವಾಗಿ (0-40 km/h ವೇಗವನ್ನು ಕೆಲವೇ ಸೆಕೆಂಡುಗಳಲ್ಲಿ) ಪಿಕಪ್ ಪಡೆದುಕೊಳ್ಳುತ್ತದೆ. ನಗರದ ಟ್ರಾಫಿಕ್‌ನಲ್ಲಿ ಓಡಿಸಲು ಇದು ಅತ್ಯಂತ ಸುಲಭ ಮತ್ತು ನಿಶ್ಯಬ್ದವಾಗಿರುತ್ತದೆ.
ಪೆಟ್ರೋಲ್ ಬೈಕ್‌ಗಳು ಆರಂಭದಲ್ಲಿ ಇವಿ ಬೈಕ್‌ಗಳಿಗಿಂತ ಕೊಂಚ ನಿಧಾನ ಎನಿಸಿದರೂ, ಹೆದ್ದಾರಿಗಳಲ್ಲಿ (Highways) 80 km/h ಗಿಂತ ಹೆಚ್ಚಿನ ವೇಗದಲ್ಲಿ ಸ್ಥಿರವಾಗಿ ಮತ್ತು ದೀರ್ಘಕಾಲ ಚಲಿಸಲು ಇಂದಿಗೂ ಪೆಟ್ರೋಲ್ ಬೈಕ್‌ಗಳೇ ರಾಜ. ಎಲೆಕ್ಟ್ರಿಕ್ ಬೈಕ್‌ಗಳನ್ನು ಹೈವೇಯಲ್ಲಿ ಅತಿ ಹೆಚ್ಚು ವೇಗವಾಗಿ ಓಡಿಸಿದರೆ ಅದರ ಬ್ಯಾಟರಿ ರೇಂಜ್ ಶೇ. 35-45 ರಷ್ಟು ಬೇಗನೆ ಖಾಲಿಯಾಗುತ್ತದೆ.
ಎಲೆಕ್ಟ್ರಿಕ್ ಬೈಕ್‌ಗಳು ಕೇವಲ ವಾಹನಗಳಲ್ಲ, ಅವು ಡಿಜಿಟಲ್ ಗ್ಯಾಜೆಟ್‌ಗಳಂತೆ. ಇವುಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಜಿಪಿಎಸ್ ಇಂಟಿಗ್ರೇಷನ್, ಟಚ್‌ಸ್ಕ್ರೀನ್ ಡ್ಯಾಶ್‌ಬೋರ್ಡ್, ರಿವರ್ಸ್ ಗೇರ್ (Reverse Mode), ಕಳ್ಳತನದ ಅಲರ್ಟ್ (Theft Alert) ಮತ್ತು ಓವರ್-ದಿ-ಏರ್ (OTA) ಸಾಫ್ಟ್‌ವೇರ್ ಅಪ್ಡೇಟ್‌ಗಳಂತಹ ಅತ್ಯಾಧುನಿಕ ಸೌಲಭ್ಯಗಳಿರುತ್ತವೆ.
ಸಾಮಾನ್ಯ ಪೆಟ್ರೋಲ್ ಬೈಕ್‌ಗಳಲ್ಲಿ ಇಷ್ಟೊಂದು ಡಿಜಿಟಲ್ ಫೀಚರ್ಸ್ ಇರುವುದಿಲ್ಲ. ಆದರೆ ಇವುಗಳ ಮೆಕ್ಯಾನಿಕಲ್ ವ್ಯವಸ್ಥೆ ಸರಳವಾಗಿದ್ದು, ಯಾವುದೇ ಹಳ್ಳಿಯ ಸಣ್ಣ ಗ್ಯಾರೇಜ್‌ನಲ್ಲೂ ರಿಪೇರಿ ಮಾಡಿಸಬಹುದು.
ಮರು ಮಾರಾಟ:
ಪೆಟ್ರೋಲ್ ಬೈಕ್‌ಗಳನ್ನು 5-8 ವರ್ಷಗಳ ನಂತರ ಮಾರಾಟ ಮಾಡಿದರೂ ಉತ್ತಮ ಮರುಮಾರಾಟ ಮೌಲ್ಯ (Resale Value) ಸಿಗುತ್ತದೆ.ಎಲೆಕ್ಟ್ರಿಕ್ ಬೈಕ್‌ಗಳಲ್ಲಿ 5 ವರ್ಷಗಳ ನಂತರ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುವುದರಿಂದ, ಹೊಸ ಬ್ಯಾಟರಿ ಅಳವಡಿಸದ ಹೊರತು ಮರುಮಾರಾಟದ ಸಮಯದಲ್ಲಿ ನಿರೀಕ್ಷಿತ ಬೆಲೆ ಸಿಗದಿರಬಹುದು.
ಮುಂಚೂಣಿಯಲ್ಲಿರುವ ಪ್ರಮುಖ ಕಂಪನಿಗಳು
ಪ್ರಸ್ತುತ ಭಾರತೀಯ ಇವಿ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಮತ್ತು ಹೊಸ ತಲೆಮಾರಿನ ಕಂಪನಿಗಳ ನಡುವೆ ತೀವ್ರ ಪೈಪೋಟಿ ಇದೆ:
ಟಿವಿಎಸ್ (TVS Motor): ತನ್ನ TVS iQube ಸ್ಕೂಟರ್ ಮೂಲಕ ಪ್ರಸ್ತುತ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ (ಸುಮಾರು ಶೇ. 26 ಮಾರುಕಟ್ಟೆ ಪಾಲು).
ಬಜಾಜ್ (Bajaj Auto): ತನ್ನ Bajaj Chetak ಇವಿ ಮೂಲಕ ಟಿವಿಎಸ್‌ಗೆ ತೀವ್ರ ಪೈಪೋಟಿ ನೀಡುತ್ತಾ ಎರಡನೇ ಸ್ಥಾನದಲ್ಲಿದೆ.
ಎಥರ್ ಎನರ್ಜಿ (Ather Energy): ತನ್ನ 450X ಮತ್ತು ಹೊಸ ‘Rizta’ ಫ್ಯಾಮಿಲಿ ಸ್ಕೂಟರ್‌ಗಳ ಮೂಲಕ ಮೂರನೇ ಸ್ಥಾನ ಕಾಯ್ದುಕೊಂಡಿದೆ.
ಹೀರೋ ವಿಡಾ (Hero Vida) ಮತ್ತು ಓಲಾ ಎಲೆಕ್ಟ್ರಿಕ್ (Ola Electric): ಇವುಗಳು ಸಹ ಮಾರುಕಟ್ಟೆಯ ಪ್ರಮುಖ ಪಾಲನ್ನು ಹೊಂದಿವೆ
ಇವಿ ಮಾರಾಟ ಇಷ್ಟೊಂದು ಹೆಚ್ಚಾಗಲು ಕಾರಣಗಳೇನು?
ಪೆಟ್ರೋಲ್ ಬೆಲೆ 100 ರೂ. ಗಡಿಯ ದಾಟಿರುವುದರಿಂದ ಜನ ಸಾಮಾನ್ಯರಿಗೆ ಇವಿ ಬೈಕ್‌ಗಳು ಅತ್ಯುತ್ತಮ ಪರ್ಯಾಯವಾಗಿ ಕಾಣಿಸುತ್ತಿವೆ. ಪೆಟ್ರೋಲ್ ಬೈಕ್‌ಗೆ ಹೋಲಿಸಿದರೆ ಇವಿ ಚಾರ್ಜಿಂಗ್ ವೆಚ್ಚ ಅತ್ಯಂತ ಕಡಿಮೆ. ಈಗ ಕಂಪನಿಗಳು ಕೇವಲ ದುಬಾರಿ ಬೈಕ್ ಮಾತ್ರವಲ್ಲದೆ, ಮಧ್ಯಮ ವರ್ಗದವರಿಗೂ ಕೈಗೆಟುಕುವ ಬೆಲೆಯಲ್ಲಿ (Budget Friendly) ಹಾಗೂ ಇಡೀ ಕುಟುಂಬ ಬಳಸಬಹುದಾದ ವಿಶಾಲವಾದ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ತರುತ್ತಿವೆ. ಬ್ಯಾಟರಿಗಳ ಸಾಮರ್ಥ್ಯ ಹೆಚ್ಚಾಗುತ್ತಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಹೆಚ್ಚು ದೂರ (Range) ಚಲಿಸುವ ಗಾಡಿಗಳು ಬರುತ್ತಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಇವಿ ಮತ್ತು ಪೆಟ್ರೋಲ್ ದ್ವಿಚಕ್ರ ವಾಹನಗಳ ನಡುವಿನ ಸ್ಪರ್ಧೆಯಲ್ಲಿ ಯಾವುದು ಶ್ರೇಷ್ಠ ಎನ್ನುವುದಕ್ಕಿಂತ ನಿಮ್ಮ ದಿನನಿತ್ಯದ ಅಗತ್ಯಕ್ಕೆ ಯಾವುದು ಸರಿಹೊಂದುತ್ತದೆ ಎಂಬುದೇ ಮುಖ್ಯ. ನೀವು ದಿನಂಪ್ರತಿ ನಗರದೊಳಗೇ 30 ರಿಂದ 60 ಕಿ.ಮೀ ಸಂಚರಿಸುವವರಾಗಿದ್ದು, ಮನೆಯಲ್ಲೇ ಚಾರ್ಜಿಂಗ್ ವ್ಯವಸ್ಥೆ ಇದ್ದರೆ ಇವಿ ಬೈಕ್ ನಿಮ್ಮ ತಿಂಗಳ ಇಂಧನ ಬಜೆಟ್ ಅನ್ನು ಗಣನೀಯವಾಗಿ ತಗ್ಗಿಸಿ, ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಉಳಿತಾಯ ತಂದುಕೊಡುತ್ತದೆ. ಅದೇ ವೇಳೆ, ನಿರಂತರವಾಗಿ ಹೆದ್ದಾರಿ ಪ್ರಯಾಣ ಮಾಡುವವರಿಗೆ, ಗ್ರಾಮೀಣ ಭಾಗದ ಸವಾರರಿಗೆ ಪೆಟ್ರೋಲ್ ಬೈಕ್‌ಗಳೇ ಇಂದಿಗೂ ಅತ್ಯಂತ ಭರವಸೆಯ ಆಯ್ಕೆ. ನಿಮ್ಮ ದೈನಂದಿನ ಸಂಚಾರದ ದೂರ ಮತ್ತು ಬಜೆಟ್ ಅನ್ನು ಅಳೆದು ತೂಗಿ ನಿರ್ಧಾರ ಕೈಗೊಳ್ಳುವುದೇ ಜಾಣತನ.

