ಅಮೆರಿಕ (US) ಕೆಲವು ವಿಶೇಷ ಔಷಧ ಉತ್ಪನ್ನಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಔಷಧೀಯ ಘಟಕಗಳಿಗೆ ʻಶೂನ್ಯ ಸುಂಕ (Zero Tariff)ʼ ವಿಧಿಸುವುದಾಗಿ ಘೋಷಿಸಿದೆ. ಈ ವಿನಾಯಿತಿಗೆ ಅರ್ಹವಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 2ರಂದು ಔಷಧ ಆಮದುಗಳ ಮೇಲಿನ ನೀತಿಯಲ್ಲಿ ಬದಲಾವಣೆ ತರಲು ಹಾಗೂ ದೇಶೀಯ ಔಷಧ ಉತ್ಪಾದನೆಯನ್ನು ಉತ್ತೇಜಿಸಲು ಕ್ರಮ ವಹಿಸಿದ್ದರು. ಇದರ ಮುಂದುವರಿದ ಭಾಗವಾಗಿ ಕೆಲವು ನಿರ್ದಿಷ್ಟ ವರ್ಗದ ಔಷಧಗಳಿಗೆ ಸುಂಕ ವಿನಾಯಿತಿ ನೀಡಲಾಗಿದೆ.

ಯಾವ ಔಷಧಗಳಿಗೆ ಶೂನ್ಯ ಸುಂಕ?
ನಿಗದಿತ ಷರತ್ತುಗಳನ್ನ ಪೂರೈಸಿದರೆ ಕೆಳಗಿನ ವಿಶೇಷ ಔಷಧಗಳ ವರ್ಗಗಳು ಶೂನ್ಯ ಸುಂಕಕ್ಕೆ ಅರ್ಹವಾಗಬಹುದು
* ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ (Orphan Drugs) (ಅನಾಥ ಔಷಧಗಳು ಅಂತಲೂ ಕರೆಯುತ್ತಾರೆ)
* ನ್ಯೂಕ್ಲಿಯರ್ ಮೆಡಿಸಿನ್ಗಳು – ಅಂದ್ರೆ ಅತ್ಯಲ್ಪ ಪ್ರಮಾಣದಲ್ಲಿ ಬಳಸಿಕೊಂಡು ದೇಹದೊಳಗಿನ ಕಾಯಿಲೆಗಳನ್ನು ಪತ್ತೆಹಚ್ಚಲು ಮತ್ತು ಗುಣಪಡಿಸಲು ಬಳಸುವ ವೈದ್ಯಕೀಯ ವಿಜ್ಞಾನದ ಒಂದು ವಿಶೇಷ ವಿಭಾಗ.
* ಪ್ಲಾಸ್ಮಾ ಆಧಾರಿತ ಚಿಕಿತ್ಸೆಗಳು
* ಫರ್ಟಿಲಿಟಿ ಔಷಧಗಳು (ಸಂತಾನೋತ್ಪತ್ತಿ ಹಾರ್ಮೋನ್ ಚಿಕಿತ್ಸೆಗಳು)
* ಸೆಲ್ ಥೆರಪಿ (ಕೋಶ ಚಿಕಿತ್ಸೆ) ಮತ್ತು ಜೀನ್ ಥೆರಪಿ (ಜೀನ್ ಚಿಕಿತ್ಸೆ)
* ಆಂಟಿಬಾಡಿ-ಡ್ರಗ್ ಕಾಂಜುಗೇಟ್ಗಳು (ADC) – ಕ್ಯಾನ್ಸರ್ ಕೋಶಗಳನ್ನು ಮಾತ್ರ ನಿಖರವಾಗಿ ಗುರುತಿಸಿ ನಾಶಪಡಿಸುವ ಅತ್ಯಾಧುನಿಕ ಜೈವಿಕ ಔಷಧಗಳಾಗಿವೆ.

100% ಸುಂಕ ವಿನಾಯ್ತಿ ಯಾವುದಕ್ಕೆ ಅನ್ವಯ ಆಗಲ್ಲ?
ಅಮೆರಿಕವು ವ್ಯಾಪಾರ ವಿಸ್ತರಣಾ ಕಾಯ್ದೆ ಸೆಕ್ಷನ್ 232 (Trade Expansion Act Section 232) ಅಡಿಯಲ್ಲಿ ಕೆಲವು ಪರವಾನಗಿ ಪಡೆದ ಔಷಧ ಉತ್ಪನ್ನಗಳು ಮತ್ತು ಅವುಗಳ ಘಟಕಗಳ ಮೇಲೆ 100% ಮೌಲ್ಯಾನುಸಾರ ಸುಂಕ ವಿಧಿಸುವುದಾಗಿ ಘೋಷಿಸಿತ್ತು. ಈ ಸುಂಕ ಜುಲೈ 31ರಿಂದ ಜಾರಿಗೆ ಬಂದಿದ್ದು, ವ್ಯಾಪ್ತಿಗೆ ಬರುವ ಇತರ ಕಂಪನಿಗಳಿಗೆ ಸೆಪ್ಟೆಂಬರ್ 29 ರಿಂದ ಅನ್ವಯವಾಗಬೇಕಿತ್ತು. ಆದರೆ ಭಾರತೀಯ ಔಷಧೋದ್ಯಮಕ್ಕೆ ಪ್ರಮುಖವಾದ ಸಂಗತಿಯೆಂದರೆ, ಜೆನೆರಿಕ್ ಔಷಧಗಳು ಮತ್ತು ಅವುಗಳಿಗೆ ಸಂಬಂಧಿಸಿದ ಘಟಕಗಳಿಗೆ Section 232ರ ಈ ಔಷಧ ಸುಂಕಗಳು ಸದ್ಯಕ್ಕೆ ಅನ್ವಯಿಸುವುದಿಲ್ಲ ಎಂದು ವಾಣಿಜ್ಯ ಇಲಾಖೆ ಸ್ಪಷ್ಟಪಡಿಸಿದೆ.
ಭಾರತಕ್ಕೆ ಇದರ ಅರ್ಥವೇನು?
ಭಾರತವು ವಿಶ್ವದ ಪ್ರಮುಖ ಔಷಧ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಅಮೆರಿಕವೇ ಭಾರತದ ಅತಿದೊಡ್ಡ ಔಷಧ ರಫ್ತು ಮಾರುಕಟ್ಟೆಯಾಗಿದೆ.
2024-25ನೇ ಹಣಕಾಸು ವರ್ಷದಲ್ಲಿ ಭಾರತದ ಔಷಧ ರಫ್ತು ಸುಮಾರು 30.47 ಶತಕೋಟಿ ಡಾಲರ್ (ಸುಮಾರು 2.93 ಲಕ್ಷ ಕೋಟಿ ರೂಪಾಯಿ) ಆಗಿದ್ದು, ಇದರಲ್ಲಿ ಸುಮಾರು 34% ರಫ್ತು ಅಮೆರಿಕಕ್ಕೆ ನಡೆದಿದೆ. ಅಂದರೆ, ಭಾರತದಿಂದ ಅಮೆರಿಕಕ್ಕೆ 10 ಶತಕೋಟಿ ಡಾಲರ್ಗಿಂತಲೂ ಹೆಚ್ಚಿನ ಮೌಲ್ಯದ ಔಷಧಗಳು ಮತ್ತು ಔಷಧೀಯ ಘಟಕಗಳು ರಫ್ತಾಗಿವೆ. ಆದರೆ ಇಲ್ಲಿ ಒಂದು ಪ್ರಮುಖ ಅಂಶವಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ ಪ್ರಮುಖ ಸಾಮರ್ಥ್ಯ ಜೆನೆರಿಕ್ ಔಷಧಗಳಲ್ಲಿದೆ. ಪೇಟೆಂಟ್ ಹೊಂದಿರುವ ಹೊಸ ಔಷಧಗಳು ಅಥವಾ ವಿಶೇಷ ಔಷಧಗಳ ಕ್ಷೇತ್ರದಲ್ಲಿ ಭಾರತದ ಪಾಲು ತುಲನಾತ್ಮಕವಾಗಿ ಕಡಿಮೆ. ಹೀಗಾಗಿ, ಇತ್ತೀಚಿನ ಸುಂಕ ವಿನಾಯಿತಿಯ ನೇರ ಪರಿಣಾಮ ಭಾರತಕ್ಕೆ ಸೀಮಿತವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕ್ಷಣದ ಪರಿಣಾಮ ಸೀಮಿತವಾಗಬಹುದು
ಭಾರತದ ಔಷಧೀಯ ಉತ್ಪನ್ನಗಳ ರಫ್ತು ಉತ್ತೇಜನ ಮಂಡಳಿ (Pharmexcil)ನ ಮಾಜಿ ಮಹಾನಿರ್ದೇಶಕ ಉದಯ ಭಾಸ್ಕರ್ ಅವರ ಪ್ರಕಾರ, ಸುಂಕ ವಿನಾಯಿತಿಯ ತಕ್ಷಣದ ಪರಿಣಾಮ ಭಾರತಕ್ಕೆ ಹೆಚ್ಚೇನಿಲ್ಲ. ಏಕೆಂದ್ರೆ, ವಿನಾಯಿತಿ ಪಡೆದಿರುವ ವಿಶೇಷ ಔಷಧಗಳ ವರ್ಗಗಳಲ್ಲಿ ಭಾರತ ಪ್ರಮುಖ ರಫ್ತುದಾರ ರಾಷ್ಟ್ರವಾಗಿಲ್ಲ. ಈ ನಿರ್ಧಾರದ ಹಿಂದೆ ಅಮೆರಿಕದ ಮುಂಬರುವ ಮಧ್ಯಂತರ ಚುನಾವಣೆಗಳೂ ಒಂದು ಕಾರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದಾರೆ.
20 ದೇಶಗಳಿಗೆ ವಿನಾಯ್ತಿ
ಅಪರೂಪದ ಕಾಯಿಲೆಗಳ ಔಷಧಗಳು, ಜೀನ್ ಥೆರಪಿ, ಫರ್ಟಿಲಿಟಿ ಚಿಕಿತ್ಸೆಗಳು ಮತ್ತು ಬಯಾಲಾಜಿಕಲ್ ಔಷಧಗಳಂತಹ ವಿಶೇಷ ಉತ್ಪನ್ನಗಳಿಗೆ ಈ ವಿನಾಯಿತಿ ಅನ್ವಯಿಸುತ್ತದೆ. ಒಟ್ಟು 20 ದೇಶಗಳಿಗೆ ಈ ವಿನಾಯಿತಿ ನೀಡಲಾಗಿದೆ. ಅಮೆರಿಕದಲ್ಲಿ ಔಷಧಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಮತ್ತು ಚಿಕಿತ್ಸಾ ವೆಚ್ಚ ಮತ್ತಷ್ಟು ಹೆಚ್ಚಾಗುವುದನ್ನ ತಡೆಯುವುದು ಈ ನಿರ್ಧಾರದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿರಬಹುದು ಎಂದು ಉದಯ ಭಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಜೆನೆರಿಕ್ ಔಷಧಗಳಿಗೆ ಸುಂಕ ಬಂದ್ರೆ ಭಾರತಕ್ಕೆ ದೊಡ್ಡ ಹೊಡೆತ
ಉದಯ ಭಾಸ್ಕರ್ ಅವರ ಪ್ರಕಾರ, ಜೆನೆರಿಕ್ ಔಷಧಗಳ ಮೇಲೂ 100% ಸುಂಕ ಹೇರಿದರೆ ಭಾರತಕ್ಕೆ ದೊಡ್ಡ ಹೊಡೆತ ಬೀಳಬಹುದು. ಏಕೆಂದ್ರೆ ಭಾರತವು ವಿಶ್ವದ ಅತಿದೊಡ್ಡ ಜೆನೆರಿಕ್ ಔಷಧ ತಯಾರಕರಲ್ಲಿ ಒಂದಾಗಿದೆ. ಭಾರತದ ಒಟ್ಟು ಸುಮಾರು 30 ಶತಕೋಟಿ ಡಾಲರ್ ಮೌಲ್ಯದ ಔಷಧ ರಫ್ತಿನಲ್ಲಿ ಸುಮಾರು 30% ಅಮೆರಿಕಕ್ಕೆ ಹೋಗುತ್ತದೆ. ಆದ್ದರಿಂದ ಭವಿಷ್ಯದಲ್ಲಿ ಜೆನೆರಿಕ್ ಔಷಧಗಳ ಮೇಲೂ ಹೆಚ್ಚಿನ ಸುಂಕ ವಿಧಿಸಿದರೆ, ಅದರ ಪರಿಣಾಮ ಭಾರತೀಯ ಔಷಧ ಕಂಪನಿಗಳ ಮೇಲೆ ಗಮನಾರ್ಹವಾಗಬಹುದು. ಆದರೆ ಸದ್ಯಕ್ಕೆ ಜೆನೆರಿಕ್ ಔಷಧಗಳು ಮತ್ತು ಅವುಗಳಿಗೆ ಸಂಬಂಧಿಸಿದ ಘಟಕಗಳು Section 232ರ ಸುಂಕದ ವ್ಯಾಪ್ತಿಯಿಂದ ಹೊರಗಿವೆ.

ರೋಗಿಗಳ ದೃಷ್ಟಿಯಿಂದಲೂ ಮಹತ್ವದ ನಿರ್ಧಾರ
ಜೈಪುರ ಮೂಲದ ಜಾಲಿ ಹೆಲ್ತ್ಕೇರ್ನ ಹಿರಿಯ ಸಲಹೆಗಾರ ಡಾ. ನರೇಂದ್ರ ಕುಮಾರ್ ಜಾಲಿ ಅವರ ಪ್ರಕಾರ, ವಿಶೇಷ ಔಷಧಗಳಿಗೆ ಸುಂಕ ವಿನಾಯಿತಿ ನೀಡಿರುವುದು ರೋಗಿಗಳ ಚಿಕಿತ್ಸಾ ಲಭ್ಯತೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಅಪರೂಪದ ಕಾಯಿಲೆಗಳು, ಕ್ಯಾನ್ಸರ್ ಮತ್ತು ಇತರ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಬಳಸುವ ಔಷಧಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದರೆ, ಈಗಾಗಲೇ ದುಬಾರಿಯಾಗಿರುವ ಚಿಕಿತ್ಸೆಗಳ ವೆಚ್ಚ ಮತ್ತಷ್ಟು ಹೆಚ್ಚಾಗಬಹುದಿತ್ತು.
ಹೀಗಾಗಿ, ಕೆಲವು ವಿಶೇಷ ಔಷಧಗಳನ್ನ ಸುಂಕದಿಂದ ಹೊರಗಿಟ್ಟಿರುವುದು ರೋಗಿಗಳಿಗೆ ಚಿಕಿತ್ಸೆಯ ಲಭ್ಯತೆ ಮತ್ತು ಕೈಗೆಟುಕುವಿಕೆಯ ದೃಷ್ಟಿಯಿಂದ ಸಕಾರಾತ್ಮಕ ಹೆಜ್ಜೆ ಎಂದು ಅವರು ಹೇಳಿದ್ದಾರೆ.
ಕಂಪನಿಗಳು ಮಾಡಬೇಕಿರೋದು ಏನು?
* ವಿನಾಯಿತಿಯ ಪ್ರಯೋಜನ ಪಡೆಯಲು ಔಷಧ ತಯಾರಕರು ತಮ್ಮ ಉತ್ಪನ್ನಗಳು ನಿಗದಿತ ವರ್ಗಕ್ಕೆ ಸೇರುತ್ತವೆಯೇ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕಾಗುತ್ತದೆ.
* ಜೊತೆಗೆ, ಅಮೆರಿಕದ ನಿಯಮಗಳಿಗೆ ಅನುಗುಣವಾಗಿ ಅಗತ್ಯ ದಾಖಲೆಗಳನ್ನ ಸಿದ್ಧಪಡಿಸುವುದು ಹಾಗೂ ಸರಬರಾಜು ಸರಪಳಿಯ (Supply Chain) ದಾಖಲೆಗಳನ್ನ ಸರಿಯಾಗಿ ನಿರ್ವಹಿಸುವುದು ಅಗತ್ಯವಾಗಲಿದೆ.
ಭಾರತದ ಮುಂದೆ ಇರುವ ದೊಡ್ಡ ಪ್ರಶ್ನೆ ಏನು?
ಸದ್ಯದ ಮಟ್ಟಿಗೆ ವಿಶೇಷ ಔಷಧಗಳಿಗೆ ನೀಡಿರುವ ಶೂನ್ಯ ಸುಂಕ ವಿನಾಯಿತಿಯಿಂದ ಭಾರತಕ್ಕೆ ಸೀಮಿತ ಪರಿಣಾಮವೇ ಆಗಬಹುದು. ಆದರೆ ಜೆನೆರಿಕ್ ಔಷಧಗಳ ಮೇಲೆ ಅಮೆರಿಕ ಭವಿಷ್ಯದಲ್ಲಿ ಸುಂಕ ವಿಧಿಸುತ್ತದೆಯೇ? ಎಂಬುದು ಭಾರತೀಯ ಔಷಧೋದ್ಯಮದ ಪಾಲಿಗೆ ಹೆಚ್ಚು ಮಹತ್ವದ ಪ್ರಶ್ನೆಯಾಗಿದೆ.
ಏಕೆಂದರೆ ಅಮೆರಿಕವೇ ಭಾರತದ ಪ್ರಮುಖ ಔಷಧ ರಫ್ತು ಮಾರುಕಟ್ಟೆಯಾಗಿದ್ದು, ಭಾರತೀಯ ಕಂಪನಿಗಳ ದೊಡ್ಡ ಶಕ್ತಿ ಜೆನೆರಿಕ್ ಔಷಧಗಳಲ್ಲಿದೆ.

