– 5,698 ಮತದಾರರ ಹೆಸರು ಡಿಲೀಟ್‌ಗೆ ಅರ್ಜಿ ಸಲ್ಲಿಕೆ ಆರೋಪ
ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ದುರ್ಬಳಕೆ ಮಾಡಿ ಮತದಾರರ ಹೆಸರುಗಳನ್ನ ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ (Sowmya Reddy) ನೀಡಿದ ದೂರಿನ ಆಧಾರದ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜಯನಗರ ಕ್ಷೇತ್ರದಲ್ಲಿ ಒಟ್ಟು 5,698 ಮತದಾರರ ಹೆಸರುಗಳನ್ನ ಪಟ್ಟಿಯಿಂದ ಡಿಲೀಟ್ ಮಾಡಲು ಫಾರಂ-7 ಅರ್ಜಿಗಳನ್ನ ಸಲ್ಲಿಸಿರುವ ಬಗ್ಗೆ ಸೌಮ್ಯಾ ರೆಡ್ಡಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅರ್ಜಿಗಳ ಹಿಂದೆ ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನ ಅಳಿಸುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಅರ್ಜಿಗಳಲ್ಲಿ ಸಿ. ರಮೇಶ್ ಮತ್ತು ರೂಪಾ ಎಂಬವರ ಹೆಸರನ್ನ ಬಳಸಲಾಗಿದೆ. ಆದರೆ, ತಮ್ಮ ಯಾವುದೇ ಮಾಹಿತಿ ಅಥವಾ ಒಪ್ಪಿಗೆಯಿಲ್ಲದೆ ತಮ್ಮ ವೈಯಕ್ತಿಕ ಮಾಹಿತಿಯನ್ನ ನಕಲು ಮಾಡಿ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣದಲ್ಲಿ ಬಿಜೆಪಿ ಮುಖಂಡರಾದ ರಾಮಕೃಷ್ಣ, ಯೋಗೇಶ್ ಸೇರಿದಂತೆ ಒಟ್ಟು ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರಿನಲ್ಲಿ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ದಾಖಲೆಗಳೂ ಇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಯಾವ ವಾರ್ಡ್‌ನಲ್ಲಿ ಎಷ್ಟು ಹೆಸರು ಡಿಲೀಟ್‌ಗೆ ಅರ್ಜಿ?
ವಾರ್ಡ್ 168 – ಹಲಸೂರು: 54 ಮತದಾರರು
ವಾರ್ಡ್ 169 – ಬೈರಸಂದ್ರ: 525 ಮತದಾರರು
ವಾರ್ಡ್ 170 – ಬೈರಸಂದ್ರ: 719 ಮತದಾರರು
ವಾರ್ಡ್ 171 – ಗುರುಪ್ಪನಪಾಳ್ಯ: 4,327 ಮತದಾರರು
ವಾರ್ಡ್ 177, 178, 179 – ಜಯನಗರ: ಒಟ್ಟು 82 ಮತದಾರರು
ಏನಿದು ಫಾರ್ಮ್ 7?
ಫಾರ್ಮ್ 7 ಅನ್ನೋದು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಹೆಸರನ್ನು ಸೇರಿಸುವುದನ್ನು ಆಕ್ಷೇಪಿಸಲು ಇರುವ ಅರ್ಜಿ.

