ನವದೆಹಲಿ: ಪಾಕಿಸ್ತಾನಕ್ಕೆ (Pakistan) ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ, ನಿವೃತ್ತ ಸೇನಾ ಯೋಧ (Ex Army Jawan) ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಕೇಂದ್ರೀಯ ಸಂಸ್ಥೆಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ, ಗುವಾಹಟಿಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ಬೇಹುಗಾರಿಕೆ ಸಂಬಂಧಿತ ಚಟುವಟಿಕೆಗಳ ಆರೋಪದ ಮೇಲೆ ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆಯು ಬಂಧಿಸಿದೆ. ಇದನ್ನೂ ಓದಿ: ಪಾಕಿಸ್ತಾನಿ ಏಜೆಂಟ್‌ಗೆ ರಹಸ್ಯ ರಕ್ಷಣಾ ಮಾಹಿತಿ ಸೋರಿಕೆ – ನೌಕಾಪಡೆ ನಾವಿಕ ಬಂಧನ
ಭದ್ರತಾ ಪಡೆಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತನೊಬ್ಬನಿಗೆ ರವಾನಿಸುವಲ್ಲಿ ಆತ ಭಾಗಿಯಾಗಿದ್ದನೆಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಸಂಸ್ಥೆಗಳ ಮಾಹಿತಿಯ ಮೇರೆಗೆ ಅಸ್ಸಾಂ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅವರಲ್ಲಿ ಒಬ್ಬ ನಿವೃತ್ತ ಸೇನಾ ಯೋಧ. ಈತ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.
ಆರೋಪಿಗಳಲ್ಲಿ ಒಬ್ಬನನ್ನು ಬಿಹಾರದ ಪೂರ್ವ ಚಂಪಾರಣ್‌ನ 31 ವರ್ಷದ ಅಭಿಷೇಕ್ ಕುಮಾರ್ ಸಿಂಗ್ ಎಂದು ಗುರುತಿಸಿದ್ದಾರೆ. ಶಂಕಿತ ವ್ಯಕ್ತಿಯ ಕುರಿತಾದ ಪ್ರಾಥಮಿಕ ಮಾಹಿತಿಯನ್ನು ತೇಜ್‌ಪುರ ಮೂಲದ ಗಜರಾಜ್ ಕಾರ್ಪ್ಸ್‌ನ ಮಿಲಿಟರಿ ಗುಪ್ತಚರ ವಿಭಾಗವು ಹಂಚಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ – ನಾಲ್ವರು ದುರ್ಮರಣ
ಪಾಕಿಸ್ತಾನದ ಗುಪ್ತಚರ ಏಜೆಂಟ್‌ನ ಸೂಚನೆಯ ಮೇರೆಗೆ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನೆಂದು ಶಂಕಿಸಲಾಗಿದ್ದ ಸಿಂಗ್‌ನ ಕುರಿತು, ಎಸ್‌ಟಿಎಫ್ (STF) ಸೋನಿತ್‌ಪುರ ಪೊಲೀಸರೊಂದಿಗೆ ಸೇರಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿತು. ಕಾರ್ಯಾಚರಣೆಯ ವೇಳೆ, ಆತನ ಬಳಿಯಿದ್ದ ಮೊಬೈಲ್ ಫೋನ್, ಸಿಮ್ ಕಾರ್ಡ್‌ಗಳು ಮತ್ತು ಅಪರಾಧಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು.

