ಮಂಗಳೂರು: ಇಲ್ಲಿನ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್ನಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದ ವೇಳೆ ತಡೆಗೋಡೆ ಕುಸಿದು (Wall Collapse) ಉಂಟಾದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 16 ವರ್ಷದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಇತರ ನಾಲ್ವರು ವಿದ್ಯಾರ್ಥಿಗಳು (Student) ಗಾಯಗೊಂಡಿದ್ದಾರೆ. ಮೃತ ವಿದ್ಯಾರ್ಥಿಯನ್ನು ಹಳೆಯಂಗಡಿ ನಿವಾಸಿ ಮೊಹಮ್ಮದ್ ಶಮಾಜ್ (16) ಎಂದು ಗುರುತಿಸಲಾಗಿದೆ. ಶಮಾಜ್ ಸೇಂಟ್ ಅಲೋಶಿಯಸ್ ಪಿಯು ಕಾಲೇಜಿನ ಕಾಮರ್ಸ್ ವಿದ್ಯಾರ್ಥಿ. ಶನಿವಾರ ರಾತ್ರಿ 11.33ರ ಸುಮಾರಿಗೆ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಘಟನೆಯಲ್ಲಿ ಗಾಯಗೊಂಡ ಇತರ ವಿದ್ಯಾರ್ಥಿಗಳನ್ನು ಸೂರಿಂಜೆ ನಿವಾಸಿ ಮೊಹಮ್ಮದ್ ಶನಾನ್ ಅಹ್ಮದ್ (18), ಅಡ್ಯಾರ್ ನಿವಾಸಿ ಹನೀಫ್ (23), ಕಾವೂರಿನ ದಾವೂದ್ ಫರ್ಸಿನ್ ಅಹ್ಮದ್ (18), ಕಸ್ಬಾ ಬೆಂಗ್ರೆಯ ಮೊಹಮ್ಮದ್ ಶಾಕೀಲ್ ಹುಸೈನ್ (18) ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕಾರ್ಯಕ್ರಮದ ವೇಳೆ ಕುಸಿದ ಗೋಡೆ
ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್ನಲ್ಲಿ ಆಯೋಜನೆಗೊಂಡಿತ್ತು. ಕಾರ್ಯಕ್ರಮಕ್ಕಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸೇರಿದ್ದರು. ಹಾಲ್ನಲ್ಲಿ ಜನದಟ್ಟಣೆ ಹೆಚ್ಚಾದ ಹಿನ್ನೆಲೆ ಹಲವು ವಿದ್ಯಾರ್ಥಿಗಳು ಹೊರಗಿನ ಕಾರಿಡಾರ್ನಲ್ಲಿ ನಿಂತಿದ್ದರು. ಈ ವೇಳೆ ಮೊದಲ ಮಹಡಿಯ ಕಾರಿಡಾರ್ನ ದುರ್ಬಲವಾಗಿದ್ದ ತಡೆಗೋಡೆ ಏಕಾಏಕಿ ಕುಸಿದಿದೆ.

ಗೋಡೆ ಕುಸಿದ ಸಂದರ್ಭದಲ್ಲಿ ಕೆಳಭಾಗದಲ್ಲಿ ನಿಂತಿದ್ದ ಮೊಹಮ್ಮದ್ ಶಮಾಜ್ ಅವರ ತಲೆ, ಭುಜ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಸಹಪಾಠಿಗಳು ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಟ್ಟಡ ಮಾಲೀಕ, ಆಯೋಜಕರ ವಿರುದ್ಧ ಕೇಸ್
ಘಟನೆ ಸಂಬಂಧ ಮೃತ ವಿದ್ಯಾರ್ಥಿಯ ತಂದೆ ಮೊಹಮ್ಮದ್ ಇಲಿಯಾಸ್ ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ದಕ್ಷಿಣ ಪೊಲೀಸರು ಕಟ್ಟಡದ ಮಾಲೀಕ ಪರೀಕ್ಷಿತ್ ರೈ ಹಾಗೂ ಕಾರ್ಯಕ್ರಮ ಆಯೋಜಕ, ವಕೀಲ ದಿನಕರ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಟ್ಟಡದ ಸ್ಥಿತಿ ದುರ್ಬಲವಾಗಿದ್ದರೂ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತು ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡಿರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 106 (1), 125(a), 125(b) ಮತ್ತು 290 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

