ಸೋಯಾ ಚಿಕನ್ (Soya Chicken) ರುಚಿಕರ ಹಾಗೂ ವಿಭಿನ್ನವಾದ ಒಂದು ಖಾದ್ಯ. ಸೋಯಾ ಚಂಕ್ಸ್ಗಳನ್ನು ಚಿಕನ್ ತುಂಡುಗಳಂತೆ ಮೃದುವಾಗಿ ಬೇಯಿಸಿ, ಘಮಘಮಿಸುವ ಮಸಾಲೆಗಳೊಂದಿಗೆ ಫ್ರೈ ಮಾಡುವ ಈ ಡಿಶ್ ಬಾಯಲ್ಲಿ ನೀರೂರಿಸುತ್ತದೆ.
ಮಾಂಸಾಹಾರದ ರುಚಿಯನ್ನು ಹೋಲುವ ಇದು, ಸಸ್ಯಾಹಾರಿಗಳಿಗೆ ಒಂದು ಅತ್ಯುತ್ತಮ ಆಯ್ಕೆ. ಅತಿ ಕಡಿಮೆ ಸಮಯದಲ್ಲಿ, ಮನೆಯಲ್ಲೇ ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿ ಮಾಡಬಹುದಾದ ಈ ಖಾದ್ಯವು ಬಿಸಿಬಿಸಿಯಾದ ಅನ್ನ, ಚಪಾತಿ ಅಥವಾ ರೋಟಿ ಜೊತೆ ತಿನ್ನಲು ಅತ್ಯಂತ ರುಚಿಕರವಾಗಿರುತ್ತದೆ. ವೀಕೆಂಡ್ನಲ್ಲಿ ಒಮ್ಮೆ ಮಸಾಲೆಭರಿತ ಈ ಸೋಯಾ ಚಿಕನ್ ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು:
ಸೋಯಾ ಚಂಕ್ಸ್
ಈರುಳ್ಳಿ
ಟೊಮೆಟೊ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸಿನಕಾಯಿ
ಅರಿಶಿನ ಪುಡಿ
ಅಚ್ಚ ಖಾರದ ಪುಡಿ
ಧನಿಯಾ ಪುಡಿ
ಗರಂ ಮಸಾಲ
ಎಣ್ಣೆ
ಕೊತ್ತಂಬರಿ ಸೊಪ್ಪು
ಉಪ್ಪು
ಮಾಡುವ ವಿಧಾನ:
ಪಾತ್ರೆಯಲ್ಲಿ ನೀರನ್ನು ಕುದಿಸಿ, ಅದಕ್ಕೆ ಸ್ವಲ್ಪ ಉಪ್ಪು ಹಾಕಿ. ಈಗ ಸೋಯಾ ಚಂಕ್ಸ್ಗಳನ್ನು ಹಾಕಿ ಉರಿಯನ್ನು ಆಫ್ ಮಾಡಿ. ಅವು ಮೆದುವಾಗಲು 5 ರಿಂದ 7 ನಿಮಿಷಗಳ ಕಾಲ ಬಿಡಿ. ಬಿಸಿ ನೀರನ್ನು ಸೋಸಿ, ತಣ್ಣನೆಯ ನೀರನ್ನು ಹಾಕಿ ತೊಳೆದು, ಸೋಯಾದಲ್ಲಿರುವ ನೀರೆಲ್ಲವನ್ನೂ ಸಂಪೂರ್ಣವಾಗಿ ಗಟ್ಟಿಯಾಗಿ ಹಿಂಡಿ ಒಂದು ಪಾತ್ರೆಯಲ್ಲಿಟ್ಟುಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಹೆಚ್ಚಿದ ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಹಾಕಿ ಈರುಳ್ಳಿ ಗೋಲ್ಡನ್ ಬ್ರೌನ್ ಬರುವವರೆಗೆ ಹುರಿಯಿರಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ. ನಂತರ ಟೊಮೆಟೊ ಹಾಕಿ ಅದು ಮೆದುವಾಗುವವರೆಗೆ ಬೇಯಿಸಿ.

ಅರಿಶಿನ ಪುಡಿ, ಖಾರದ ಪುಡಿ, ಧನಿಯಾ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎಣ್ಣೆ ಬಿಡುವವರೆಗೆ ಒಂದು ನಿಮಿಷ ಮಸಾಲೆ ಫ್ರೈ ಮಾಡಿ. ಹಿಂಡಿಟ್ಟುಕೊಂಡ ಸೋಯಾ ಚಂಕ್ಸ್ಗಳನ್ನು ಬಾಣಲೆಗೆ ಹಾಕಿ. ಮಸಾಲೆ ಎಲ್ಲಾ ಸೋಯಾಗೆ ಚೆನ್ನಾಗಿ ಹಿಡಿಯುವಂತೆ ತಿರುಗಿಸಿ.
ತುಂಬಾ ಒಣಗಿದಂತೆ ಅನಿಸಿದರೆ 2-3 ಚಮಚ ನೀರು ಹಾಕಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ ಇದರಿಂದ ಮಸಾಲೆ ಚೆನ್ನಾಗಿ ಹಿಡಿಯುತ್ತದೆ. ಕೊನೆಯಲ್ಲಿ ಗರಂ ಮಸಾಲ ಮತ್ತು ಕೊತ್ತಂಬರಿ ಸೊಪ್ಪು ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟವ್ ಆಫ್ ಮಾಡಿ. ಬಿಸಿಬಿಸಿಯಾದ ಅನ್ನ, ಚಪಾತಿ ಅಥವಾ ರೊಟ್ಟಿ ಜೊತೆ ತಿನ್ನಲು ಇದು ಅತ್ಯಂತ ರುಚಿಕರವಾಗಿರುತ್ತದೆ.

