ಮಂಡ್ಯ: ರಾಜ್ಯದಲ್ಲಿ ಆರ್ಥಿಕ ಇಲಾಖೆಯಿಂದ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಎಚ್ಚರಿಕೆ ಗಂಟೆ ಮೊಳಗುತ್ತಿರುವ ಬೆನ್ನಲ್ಲೇ, ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪುರಸಭೆಯಿಂದ (KR Pete Municipality) ಗಂಭೀರ ಎಡವಟ್ಟೊಂದು ವರದಿಯಾಗಿದೆ. ಕೇವಲ 18,093 ರೂ. ಹಣವಿಲ್ಲದೇ ಪುರಸಭೆ ನೀಡಿದ್ದ ಚೆಕ್ ಬೌನ್ಸ್ (Cheque Bounce) ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಏನಿದು ಚೆಕ್ ಬೌನ್ಸ್ ಕೇಸ್?
ಜ್ಞಾನಭಾರತಿ ಪ್ರಕಾಶನ ಸಂಸ್ಥೆಗೆ ನೀಡಲಾಗಿದ್ದ ಜಾಹೀರಾತು ಬಿಲ್ಲಿನ 18,093 ರೂ. ಮೌಲ್ಯದ ಚೆಕ್ ಖಾತೆಯಲ್ಲಿ ಹಣವಿಲ್ಲದ ಕಾರಣ ರಿಟರ್ನ್ ಆಗಿದೆ. ಪುರಸಭೆಯ ಖಾತೆಯಲ್ಲಿ ಹಣದ ಕೊರತೆ ಇರುವುದಾಗಿ ಬ್ಯಾಂಕ್ ತಿಳಿಸಿದ್ದು, ಚೆಕ್ ಅನ್ನು ವಾಪಸ್ ಕಳುಹಿಸಿದೆ.
ಜನರ ಆಕ್ರೋಶ
ಸರ್ಕಾರದ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಆರ್ಥಿಕ ನಿರ್ವಹಣೆ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ಆಡಳಿತ ಯಂತ್ರ ಸರಾಗವಾಗಿ ಸಾಗಬೇಕಿರುವ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಇಂತಹ ಸಣ್ಣ ಮೊತ್ತದ ಹಣಕ್ಕೂ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ.

ಸರ್ಕಾರದ ಖಜಾನೆ ಮತ್ತು ಇಲಾಖೆಗಳ ಆರ್ಥಿಕ ಅಸ್ಥಿರತೆಯ ಬಗ್ಗೆ ಈಗಾಗಲೇ ಕೇಳಿಬರುತ್ತಿರುವ ವಿರೋಧ ಪಕ್ಷಗಳ ಆರೋಪಗಳಿಗೆ ಈ ಘಟನೆ ಪುಷ್ಟಿ ನೀಡಿದಂತಿದೆ. ಕೇವಲ 18 ಸಾವಿರ ರೂಪಾಯಿಗಳ ಪಾವತಿಗೂ ಖಾತೆಯಲ್ಲಿ ಹಣವಿಲ್ಲದಿರುವುದು ಸರ್ಕಾರ ಹಾಗೂ ಸರ್ಕಾರಿ ಕಚೇರಿಗಳು ನಿಜಕ್ಕೂ ದಿವಾಳಿಯಾಗಿದೆಯೆ? ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.

