ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬಹುಚರ್ಚಿತ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ(Soujanya Murder Case) ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ನಿರ್ದೇಶನದ ಮೇರೆಗೆ ಪ್ರಕರಣದ ಮರುತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಐಜಿಪಿ ಎನ್. ಶಶಿಕುಮಾರ್ (DIG Shashikumar) ಅವರ ನೇತೃತ್ವದಲ್ಲಿ ಈ ವಿಶೇಷ ತನಿಖಾ ದಳ ಕಾರ್ಯನಿರ್ವಹಿಸಲಿದ್ದು, ತಂಡದಲ್ಲಿ ಅನುಭವಿ ಉನ್ನತ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೇಶ್, ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರಿದ್ದಾರೆ.
2012ರಲ್ಲಿ ನಡೆದ ಈ ಭೀಕರ ಕೃತ್ಯದ ತನಿಖೆಯನ್ನು ಈ ಹಿಂದೆ ಸಿಬಿಐ ನಡೆಸಿತ್ತಾದರೂ, ಏಕೈಕ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. ನೈಜ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಹಾಗೂ ಸಮಗ್ರ ತನಿಖೆ ನಡೆಯಬೇಕು ಎಂದು ಸೌಜನ್ಯ ಅವರ ತಾಯಿ ಕುಸುಮಾವತಿ ಹಾಗೂ ಹೋರಾಟಗಾರರು ನಿರಂತರವಾಗಿ ನಡೆಸಿದ ಕಾನೂನು ಹೋರಾಟದ ಫಲವಾಗಿ ಸುಪ್ರೀಂಕೋರ್ಟ್(Supreme Court) ಮರುತನಿಖೆಗೆ ನಿರ್ದೇಶನ ನೀಡಿತ್ತು.
ನ್ಯಾಯಾಲಯದ ಆದೇಶ ಪಾಲಿಸಿರುವ ರಾಜ್ಯ ಸರ್ಕಾರ, ಪ್ರಕರಣದ ನಿಷ್ಪಕ್ಷಪಾತ ಮತ್ತು ಆಳವಾದ ತನಿಖೆಗಾಗಿ ಐಪಿಎಸ್ ಅಧಿಕಾರಿಗಳ ಈ ಪ್ರಬಲ ತಂಡವನ್ನು ರಚಿಸಿದೆ.

