ಉಡುಪಿ: ಶಿರ್ವ ಮತ್ತು ಉಡುಪಿ (Udupi) ನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿ 9 ಮಂದಿ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ನಾಜ್, ಅನಾಸ್, ಅಲ್ತಾಫ್, ಸ್ಪ್ಯಾನಿ ಸಂದೀಪ್, ಶಾಕೀಬ್, ಫೈಜಲ್, ಇಮ್ಮಿಯಾಜ್, ಅಜಯ್ ಕುಮಾರ್, ಸಂತೋಷ್ ದೇವಾಡಿಗ ಮತ್ತು ಶಿವಮೊಗ್ಗ ಸಾಗರ ತಾಲೂಕಿನ ಶ್ರೀವತ್ಸ ಕೆ.ಜಿ. ಬಂಧಿತ ಆರೋಪಿಗಳು.
ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆ ಎಂಬಲ್ಲಿ ಕೆಲ ವ್ಯಕ್ತಿಗಳು ಎರಡು ಕಾರು, ಒಂದು ಸ್ಕೂಟರ್‌ನಲ್ಲಿ ಮಾದಕ ವಸ್ತುಗಳನ್ನು ಹೊಂದಿರುವುದಾಗಿ ಬಂದ ಮಾಹಿತಿಯಂತೆ ಸಂಜೆ ವೇಳೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 67,714 ರೂ. ಮೌಲ್ಯದ 1354.28 ಗ್ರಾಂ ತೂಕದ ಗಾಂಜಾ, 1,30,960 ರೂ. ಮೌಲ್ಯದ 32.74 ಗ್ರಾಂ ತೂಕದ ಮೆಥಾ ಪಿಟಾಮೈನ್, ಕೃತ್ಯಕ್ಕೆ ಬಳಸಿದ ಎರಡು ಕಾರು, ಒಂದು ಸ್ಕೂಟರ್, 9 ಮೊಬೈಲ್, 2 ತೂಕದ ಮಿಷಿನ್, 75,010 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು – ಕೊಲೆ ಶಂಕೆ
ಶಿರ್ವ ಪೊಲೀಸ್ ಠಾಣಾ ಎಸ್‌ಐ ಅನಿಲ್ ಪ್ರಕರಣದ ತನಿಖೆಯನ್ನು ಮುಂದುವರೆಸಿದಾಗ ಆರೋಪಿಗಳು ಕೇರಳ ರಾಜ್ಯದ ಉಪ್ಪಳ ಎಂಬಲ್ಲಿಂದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಆರೋಪಿಗಳು ಈಗಾಗಲೇ ಹಲವು ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಕೇಸ್‌ಗಳನ್ನು ಹೊಂದಿದ್ದು, ಕ್ರಿಮಿನಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಉಡುಪಿ ನಗರ ಪೊಲೀಸ್ ಠಾಣೆಯ ಎಸ್‌ಐ ಭರತೇಶ್ ಕಂಕಣವಾಡಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸೆ.23 ರಂದು ಮಧ್ಯರಾತ್ರಿ 12:30ರ ಸುಮಾರಿಗೆ ಉಡುಪಿ ವಾದಿರಾಜ ರಸ್ತೆಯ ಮನೆಯೊಂದಕ್ಕೆ ದಾಳಿ ನಡೆಸಿ, ಗಾಂಜಾ ದಾಸ್ತಾನು ಇರಿಸಿದ್ದ ಶ್ರೀವತ್ಸ ಕೆ.ಜಿ. ಎಂಬಾತನನ್ನು ಬಂಧಿಸಿದರು. ಬಂದಿತನಿಂದ 83,000 ರೂ. ಮೌಲ್ಯದ 1 ಕೆಜಿ 659.91 ಗ್ರಾಂ ಮತ್ತು ನಗದು 1,26,500 ರೂ., ಡಿಜಿಟಲ್ ಸ್ಕೆಲ್ ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಸ್ಪ್ಯಾನ್ಸಿ ಸಂದೀಪ್ ವಿರುದ್ಧ ಮಣಿಪಾಲ ಠಾಣೆಯಲ್ಲಿ 1, ಫೈಸಲ್ ವಿರುದ್ಧ ಮಲ್ಪೆ ಠಾಣೆಯಲ್ಲಿ 1 ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ 1 ಹಾಗೂ ಮಣಿಪಾಲ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 3 ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ – ಜಾರ್ಖಂಡ್ ಸಚಿವೆ ಪುತ್ರಿ ಸೇರಿ ನಾಲ್ವರು ದುರ್ಮರಣ
ಇಮ್ತಿಯಾಜ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ 3, ಬ್ರಹ್ಮಾವರ ಠಾಣೆಯಲ್ಲಿ 1 ಕೊಲೆ, ಮಲ್ಪೆ ಠಾಣೆಯಲ್ಲಿ 1, ಮಣಿಪಾಲದಲ್ಲಿ 3 ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಅಜಯ್ ಕುಮಾರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ 1 ದರೋಡೆ ಪ್ರಕರಣ, ಮಣಿಪಾಲ ಠಾಣೆಯಲ್ಲಿ 1, ಶಿರ್ವಾ ಠಾಣೆಯಲ್ಲಿ 1 ಸೇರಿದಂತೆ ಒಟ್ಟು 3 ಪ್ರಕರಣಗಳು ದಾಖಲಾಗಿವೆ. ಆರೋಪಿ ಸಂತೋಷ ದೇವಾಡಿಗ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ 2 ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿವೆ.

