ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ನಮ್ಮ ಜೀವನದ ಒಂದು ಭಾಗವೇ ಆಗಿದೆ. ಬಟ್ಟೆ, ಮೊಬೈಲ್, ಶೂ, ಎಲೆಕ್ಟ್ರಾನಿಕ್ಸ್ನಿಂದ ಹಿಡಿದು ದಿನಬಳಕೆಯ ವಸ್ತುಗಳವರೆಗೆ ಎಲ್ಲವನ್ನೂ ಮನೆಯಲ್ಲೇ ಕುಳಿತು ಆರ್ಡರ್ ಮಾಡಬಹುದು. ಆದರೆ, ಆನ್ಲೈನ್ ಶಾಪಿಂಗ್ ಮಾಡುವಾಗ ನಿಮಗೂ ಒಂದು ಅನುಭವ ಆಗಿರಬಹುದು. ನಿನ್ನೆ 999 ರೂ. ಇದ್ದ ಪ್ರೊಡಕ್ಟ್ ಇಂದು 1,199 ರೂ. ಆಗಿರುತ್ತದೆ. ಮತ್ತೆ ಕೆಲ ದಿನಗಳ ನಂತರ ಅದೇ ಪ್ರೊಡಕ್ಟ್ 899 ರೂ.ಗೆ ಸಿಗಬಹುದು.
ಒಂದೇ ವಸ್ತುವಿನ ಬೆಲೆ ಪದೇಪದೇ ಯಾಕೆ ಬದಲಾಗುತ್ತದೆ? ಇದರ ಹಿಂದೆ ಇರುವ ಪ್ರಮುಖ ಕಾರಣಗಳಲ್ಲಿ ಒಂದು ಡೈನಮಿಕ್ ಪ್ರೈಸಿಂಗ್.
ಡೈನಮಿಕ್ ಪ್ರೈಸಿಂಗ್ ಎಂದರೇನು?
ಸಾಮಾನ್ಯ ಅಂಗಡಿಯಲ್ಲಿ ಒಂದು ವಸ್ತುವಿಗೆ ಒಂದು ಬೆಲೆ ನಿಗದಿ ಮಾಡಿರುತ್ತಾರೆ. ಆದರೆ, ಆನ್ಲೈನ್ ಶಾಪಿಂಗ್ನಲ್ಲಿ ಬೆಲೆ ಯಾವಾಗಲೂ ಒಂದೇ ಆಗಿರುವುದಿಲ್ಲ. ಪ್ರೊಡಕ್ಟ್ಗೆ ಎಷ್ಟು ಡಿಮ್ಯಾಂಡ್ ಇದೆ, ಮಾರುಕಟ್ಟೆಯಲ್ಲಿ ಬೇರೆ ಮಾರಾಟಗಾರರು ಎಷ್ಟು ಬೆಲೆಗೆ ಮಾರುತ್ತಿದ್ದಾರೆ, ಸ್ಟಾಕ್ ಎಷ್ಟಿದೆ, ಯಾವುದೇ ಸೇಲ್ ನಡೆಯುತ್ತಿದೆಯಾ ಸೇರಿದಂತೆ ಹಲವು ಅಂಶಗಳನ್ನು ಆಧರಿಸಿ ಆನ್ಲೈನ್ ಬೆಲೆ ಬದಲಾಗಬಹುದು.
ಕೆಲವು ಆನ್ಲೈನ್ ಪ್ರೈಸಿಂಗ್ ಸಿಸ್ಟಮ್ಗಳು ಡೇಟಾ ಮತ್ತು ಆಲ್ಗಾರಿದಮ್ಗಳನ್ನು ಬಳಸಿ ಬೆಲೆಯನ್ನು ಸ್ವಯಂಚಾಲಿತವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ಅಂದರೆ ನೀವು ಈಗ ನೋಡುತ್ತಿರುವ ಬೆಲೆ ಕೆಲ ಗಂಟೆಗಳ ನಂತರ ಅಥವಾ ಮುಂದಿನ ದಿನವೇ ಬದಲಾಗುವ ಸಾಧ್ಯತೆ ಇದೆ.

ಒಂದೇ ಪ್ರೊಡಕ್ಟ್ನ್ನು ಪದೇಪದೇ ನೋಡಿದರೆ ಬೆಲೆ ಹೆಚ್ಚಾಗುತ್ತಾ?
ಇದು ಆನ್ಲೈನ್ ಶಾಪಿಂಗ್ ಮಾಡುವವರಲ್ಲಿ ಸಾಮಾನ್ಯವಾಗಿರುವ ಒಂದು ಅನುಮಾನ. ಒಂದು ಪ್ರೊಡಕ್ಟ್ ಅನ್ನು ನಾವು ಮತ್ತೆ ಮತ್ತೆ ನೋಡಿದರೆ ಅದೇ ಕಾರಣಕ್ಕೆ ಅದರ ಬೆಲೆ ಹೆಚ್ಚಾಗುತ್ತದೆ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ.
ಬೆಲೆ ಬದಲಾಗಲು ಡಿಮ್ಯಾಂಡ್, ಸ್ಟಾಕ್, ಬೇರೆ ವೆಬ್ಸೈಟ್ಗಳ ಬೆಲೆ, ಸೇಲ್ ಮತ್ತು ಇನ್ನಿತರ ಹಲವು ಕಾರಣಗಳಿರಬಹುದು. ಆದರೆ, ಆನ್ಲೈನ್ ಪ್ಲಾಟ್ಫಾರ್ಮ್ಗಳು ಕಸ್ಟಮರ್ ಬಿಹೇವಿಯರ್ ಸೇರಿದಂತೆ ಹಲವು ರೀತಿಯ ಡೇಟಾವನ್ನು ಬಳಸಬಹುದು. ಹೀಗಾಗಿ ಒಂದು ಪ್ರೊಡಕ್ಟ್ನ ಬೆಲೆ ಬದಲಾಗುವುದನ್ನು ಕಂಡ ತಕ್ಷಣ, “ನಾನು ನೋಡಿದ್ದರಿಂದಲೇ ಬೆಲೆ ಹೆಚ್ಚಾಗಿದೆ” ಎಂದು ನಿರ್ಧರಿಸುವುದು ಸರಿಯಲ್ಲ. ಇದಕ್ಕೆ ಬದಲಾಗಿ ಅದೇ ಪ್ರೊಡಕ್ಟ್ ಅನ್ನು ಬೇರೆ ವೆಬ್ಸೈಟ್ಗಳಲ್ಲಿ ಮತ್ತು ಬೇರೆ ಸಮಯದಲ್ಲಿ ಹೋಲಿಸಿ ನೋಡುವುದು ಉತ್ತಮ.
ಫೆಸ್ಟಿವಲ್ ಸೇಲ್ನಲ್ಲಿ ಸಿಗುವ ಡಿಸ್ಕೌಂಟ್ ನಿಜಕ್ಕೂ ಲಾಭಾನಾ?
50% ಡಿಸ್ಕೌಂಟ್, 70% ಆಫ್, ಲಿಮಿಟೆಡ್ ಟೈಮ್ ಆಫರ್ ಎಂಬ ಪದಗಳು ಆನ್ಲೈನ್ ಶಾಪಿಂಗ್ ಮಾಡುವವರ ಗಮನ ಸೆಳೆಯುತ್ತವೆ. ಆದರೆ ದೊಡ್ಡ ಡಿಸ್ಕೌಂಟ್ ಕಂಡ ತಕ್ಷಣ ಪ್ರೊಡಕ್ಟ್ ಖರೀದಿಸುವುದು ಯಾವಾಗಲೂ ಲಾಭದಾಯಕವಾಗಿರಬೇಕೆಂದಿಲ್ಲ.
ಉದಾಹರಣೆಗೆ, ಒಂದು ಪ್ರೊಡಕ್ಟ್ನ ಬೆಲೆ ಮೊದಲು 2,500 ರೂ. ಇದ್ದು, ಸೇಲ್ ಸಮಯದಲ್ಲಿ 2,000 ರೂ. ಆಗಿದ್ದರೆ ಅದು ನಿಜವಾದ ಡಿಸ್ಕೌಂಟ್ ಆಗಿರಬಹುದು. ಆದರೆ, ಅದೇ ಪ್ರೊಡಕ್ಟ್ ಕೆಲ ದಿನಗಳ ಹಿಂದೆ 1,800 ರೂ.ಗೆ ಸಿಕ್ಕಿದ್ದರೆ, ಈಗ ತೋರಿಸುತ್ತಿರುವ ಡಿಸ್ಕೌಂಟ್ ಅಷ್ಟು ದೊಡ್ಡ ಡೀಲ್ ಆಗಿರದೇ ಇರಬಹುದು. ಹೀಗಾಗಿ ಡಿಸ್ಕೌಂಟ್ ಶೇಕಡಾವಾರು ನೋಡುವುದಕ್ಕಿಂತ ಫೈನಲ್ ಪ್ರೈಸ್ ಎಷ್ಟು? ಅನ್ನೋದನ್ನು ನೋಡುವುದು ಮುಖ್ಯ.
‘ಲಿಮಿಟೆಡ್ ಆಫರ್’ ನೋಡಿ ತಕ್ಷಣ ಖರೀದಿ ಮಾಡಬೇಡಿ
ಕೆಲವು ಆನ್ಲೈನ್ ಶಾಪಿಂಗ್ ವೆಬ್ಸೈಟ್ಗಳಲ್ಲಿ “ಇನ್ನೂ 10 ನಿಮಿಷ ಮಾತ್ರ”, “ಕೇವಲ 2 ಪ್ರೊಡಕ್ಟ್ಗಳು ಮಾತ್ರ ಉಳಿದಿವೆ” ಎಂಬ ಸಂದೇಶಗಳು ಕಾಣಿಸುತ್ತವೆ.
ಇಂತಹ ಮೆಸೇಜ್ಗಳು ಕಸ್ಟಮರ್ ತಕ್ಷಣ ಖರೀದಿ ಮಾಡುವಂತೆ ಒತ್ತಡ ಸೃಷ್ಟಿಸಬಹುದು. ಇದನ್ನು ಫಾಲ್ಸ್ ಅರ್ಜೆನ್ಸಿ ಎಂದು ಕರೆಯಲಾಗುತ್ತದೆ. ಗ್ರಾಹಕರನ್ನು ತಪ್ಪಾಗಿ ಪ್ರಭಾವಿಸುವ ಇಂತಹ ಕೆಲವು ಆನ್ಲೈನ್ ತಂತ್ರಗಳನ್ನು ಭಾರತದಲ್ಲಿ ಡಾರ್ಕ್ ಪ್ಯಾಟರ್ನ್ ಎಂದು ಗುರುತಿಸಲಾಗಿದೆ.
ಹೀಗಾಗಿ “ಇವಾಗಲೇ ಖರೀದಿಸಬೇಕು, ಇಲ್ಲದಿದ್ದರೆ ಆಫರ್ ಹೋಗುತ್ತೆ” ಎಂದು ಆತುರಪಡುವ ಬದಲು ಪ್ರೊಡಕ್ಟ್ನ ಬೆಲೆ ಮತ್ತು ಆಫರ್ನ ಷರತ್ತುಗಳನ್ನು ಒಮ್ಮೆ ಪರಿಶೀಲಿಸಿ.
ಆನ್ಲೈನ್ ಶಾಪಿಂಗ್ ಮಾಡುವಾಗ ಹೆಚ್ಚು ಹಣ ಖರ್ಚಾಗದಂತೆ ಏನು ಮಾಡಬೇಕು?
ಆನ್ಲೈನ್ನಲ್ಲಿ ಒಂದು ಪ್ರೊಡಕ್ಟ್ ಇಷ್ಟ ಆಯಿತು ಅಂತ ತಕ್ಷಣ “ಬೈ ನೌ” ಒತ್ತಬೇಡಿ. ಮೊದಲು ಅದೇ ಪ್ರೊಡಕ್ಟ್ನ ಬೆಲೆಯನ್ನು ಕನಿಷ್ಠ ಎರಡು ಅಥವಾ ಮೂರು ವೆಬ್ಸೈಟ್ಗಳಲ್ಲಿ ಹೋಲಿಸಿ. ಅದೇ ಮಾಡೆಲ್, ಅದೇ ವೇರಿಯಂಟ್, ಅದೇ ಸೈಜ್ ಮತ್ತು ಅದೇ ಫೀಚರ್ಗಳಿರುವ ಪ್ರೊಡಕ್ಟ್ ಅನ್ನೋದನ್ನು ಖಚಿತಪಡಿಸಿಕೊಳ್ಳಿ. ಇದರ ಜೊತೆಗೆ ಡೆಲಿವರಿ ಚಾರ್ಜ್, ಪ್ಲಾಟ್ಫಾರ್ಮ್ ಫೀ, ಕೂಪನ್ ಷರತ್ತು ಮತ್ತು ಪೇಮೆಂಟ್ ಆಫರ್ಗಳನ್ನೂ ಪರಿಶೀಲಿಸಿ.

ಕೆಲವೊಮ್ಮೆ ಪ್ರೊಡಕ್ಟ್ ಬೆಲೆ ಕಡಿಮೆ ಇದ್ದರೂ ಚೆಕ್ಔಟ್ ಸಮಯದಲ್ಲಿ ಹೆಚ್ಚುವರಿ ಶುಲ್ಕ ಸೇರ್ಪಡೆಯಾಗಬಹುದು. ಆದ್ದರಿಂದ ಪ್ರೊಡಕ್ಟ್ ಪೇಜ್ನಲ್ಲಿ ಕಾಣಿಸುವ ಬೆಲೆಗಿಂತ ಚೆಕ್ಔಟ್ನಲ್ಲಿ ಕೊನೆಗೆ ನೀವು ಪಾವತಿಸುವ ಹಣ ಎಷ್ಟು? ಅನ್ನೋದು ಮುಖ್ಯ.
ಪ್ರೈಸ್ ಹಿಸ್ಟರಿ ಎಂದರೇನು?
ಪ್ರೈಸ್ ಹಿಸ್ಟರಿ ಅಂದ್ರೆ ಒಂದು ಪ್ರೊಡಕ್ಟ್ನ ಬೆಲೆ ಹಿಂದೆ ಹೇಗೆ ಬದಲಾಗಿತ್ತು ಎಂಬ ಮಾಹಿತಿ. ಉದಾಹರಣೆಗೆ, ಒಂದು ಹೆಡ್ಫೋನ್ ಈಗ 1,499 ರೂ.ಗೆ ಮಾರಾಟವಾಗುತ್ತಿದೆ ಎಂದುಕೊಳ್ಳಿ.
ಅದು ಕಳೆದ ವಾರ 1,299 ರೂ. ಸಿಕ್ಕಿತ್ತಾ? ಅಥವಾ ಕಳೆದ ತಿಂಗಳು 999 ರೂ. ಸಿಕ್ಕಿತ್ತಾ? ಅನ್ನೋದನ್ನು ಪ್ರೈಸ್ ಹಿಸ್ಟರಿ ಮೂಲಕ ತಿಳಿದುಕೊಳ್ಳಬಹುದು. ಇದರಿಂದ ಈಗ ತೋರಿಸುತ್ತಿರುವ ಡಿಸ್ಕೌಂಟ್ ನಿಜಕ್ಕೂ ಒಳ್ಳೆಯ ಡೀಲ್ ಆಗಿದೆಯಾ ಅನ್ನೋದನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
ಕೆಲವು ಆನ್ಲೈನ್ ಶಾಪಿಂಗ್ ಅನುಭವಗಳಲ್ಲಿ ಹಿಂದಿನ ಬೆಲೆಗಳನ್ನು ಪರಿಶೀಲಿಸಲು ಪ್ರೈಸ್ ಹಿಸ್ಟರಿ ಫೀಚರ್ಗಳನ್ನು ನೀಡಲಾಗುತ್ತದೆ. ಕೆಲವು ಇತರ ಪ್ರೈಸ್ ಟ್ರ್ಯಾಕಿಂಗ್ ವೆಬ್ಸೈಟ್ಗಳಲ್ಲೂ ಹಿಂದಿನ ಬೆಲೆ ಬದಲಾವಣೆಗಳನ್ನು ನೋಡಬಹುದು.
ಪ್ರೈಸ್ ಹಿಸ್ಟರಿ ಹೇಗೆ ಚೆಕ್ ಮಾಡಬೇಕು?
ನೀವು ಖರೀದಿಸಲು ಯೋಚಿಸುತ್ತಿರುವ ಪ್ರೊಡಕ್ಟ್ನ ಹೆಸರು ಅಥವಾ ಲಿಂಕ್ ತೆಗೆದುಕೊಂಡು ಪ್ರೈಸ್ ಹಿಸ್ಟರಿ ನೀಡುವ ಟೂಲ್ಗಳಲ್ಲಿ ಪರಿಶೀಲಿಸಬಹುದು. ಅಲ್ಲಿ ಕಳೆದ ಕೆಲವು ದಿನಗಳು ಅಥವಾ ತಿಂಗಳುಗಳಲ್ಲಿ ಪ್ರೊಡಕ್ಟ್ನ ಬೆಲೆ ಹೇಗೆ ಬದಲಾಗಿದೆ ಎಂಬುದು ಗೊತ್ತಾಗುತ್ತದೆ. ಇದರಿಂದ ಇದು ನಿಜವಾದ ಡಿಸ್ಕೌಂಟ್ ಹೌದಾ? ಅಥವಾ ಸೇಲ್ ಹೆಸರಿನಲ್ಲಿ ಸಾಮಾನ್ಯ ಬೆಲೆಯಲ್ಲೇ ಮಾರುತ್ತಿದ್ದಾರಾ? ಎಂಬುದನ್ನು ಅಂದಾಜು ಮಾಡಬಹುದು.
ಒಂದೇ ವಸ್ತುವಿಗೆ ಬೇರೆ ವೆಬ್ಸೈಟ್ನಲ್ಲಿ ಬೇರೆ ಬೆಲೆ ಯಾಕೆ?
ಇದು ಕೂಡ ಆನ್ಲೈನ್ ಶಾಪಿಂಗ್ನಲ್ಲಿ ಸಾಮಾನ್ಯವಾಗಿ ಕಾಣುವ ವಿಷಯ. ಒಂದೇ ಪ್ರೊಡಕ್ಟ್ ಒಂದು ವೆಬ್ಸೈಟ್ನಲ್ಲಿ 2,000 ರೂ. ಇದ್ದರೆ, ಮತ್ತೊಂದು ವೆಬ್ಸೈಟ್ನಲ್ಲಿ 1,850 ರೂ. ಅಥವಾ ಬೇರೆ ಪ್ಲಾಟ್ಫಾರ್ಮ್ನಲ್ಲಿ 2,100 ರೂ. ಇರಬಹುದು. ಇದಕ್ಕೆ ಮಾರಾಟಗಾರರ ಬೆಲೆ, ಸ್ಟಾಕ್, ಡಿಸ್ಕೌಂಟ್, ಪ್ಲಾಟ್ಫಾರ್ಮ್ ಆಫರ್, ಡೆಲಿವರಿ ವೆಚ್ಚ ಮತ್ತು ಬೇಡಿಕೆ ಸೇರಿದಂತೆ ಹಲವು ಕಾರಣಗಳಿರಬಹುದು.
ಹೀಗಾಗಿ ಒಂದು ವೆಬ್ಸೈಟ್ನಲ್ಲಿ ಕಾಣಿಸಿದ ಬೆಲೆಯನ್ನೇ ಅಂತಿಮ ಬೆಲೆ ಎಂದುಕೊಳ್ಳದೆ, ಬೇರೆ ಕಡೆ ಕೂಡ ಒಮ್ಮೆ ಪರಿಶೀಲಿಸುವುದು ಒಳ್ಳೆಯದು.

ಆನ್ಲೈನ್ ಶಾಪಿಂಗ್ನಲ್ಲಿ ಕಸ್ಟಮರ್ ಏನು ನೆನಪಿಟ್ಟುಕೊಳ್ಳಬೇಕು?
ಆನ್ಲೈನ್ ಶಾಪಿಂಗ್ನಲ್ಲಿ ಡಿಸ್ಕೌಂಟ್ ದೊಡ್ಡದಾಗಿ ಕಾಣಿಸಿದರೆ ಸಾಕು ಅಂತ ಖರೀದಿ ಮಾಡಬೇಡಿ. ಮೊದಲು ಪ್ರೈಸ್ ಹಿಸ್ಟರಿ, ನಂತರ ಬೇರೆ ವೆಬ್ಸೈಟ್ಗಳ ಬೆಲೆ, ಆಮೇಲೆ ಫೈನಲ್ ಚೆಕ್ಔಟ್ ಪ್ರೈಸ್ ಪರಿಶೀಲಿಸಿ. “ಇವತ್ತೇ ಆಫರ್”, “ಇನ್ನೇನು ಮುಗಿಯಲಿದೆ” ಎಂಬ ಮೆಸೇಜ್ಗಳನ್ನು ನೋಡಿ ಆತುರಪಡುವ ಅಗತ್ಯವಿಲ್ಲ. ಅದೇ ರೀತಿ ಒಂದು ಪ್ರೊಡಕ್ಟ್ ಅನ್ನು ಪದೇಪದೇ ನೋಡಿದರೆ ಖಂಡಿತವಾಗಿಯೂ ಅದರ ಬೆಲೆ ಹೆಚ್ಚಾಗುತ್ತದೆ ಎಂಬ ನಂಬಿಕೆಯನ್ನೂ ನೇರವಾಗಿ ಸತ್ಯ ಎಂದು ಪರಿಗಣಿಸಬೇಡಿ.
ಆನ್ಲೈನ್ ಶಾಪಿಂಗ್ ನಮ್ಮ ಜೀವನವನ್ನು ಸುಲಭ ಮಾಡಿದೆ. ಅಂಗಡಿಗೆ ಹೋಗದೆ ಕೆಲವೇ ನಿಮಿಷಗಳಲ್ಲಿ ಬೇಕಾದ ವಸ್ತು ಮನೆಗೆ ಬರುತ್ತದೆ. ಆದರೆ, ಆನ್ಲೈನ್ನಲ್ಲಿ ಕಾಣಿಸುವ ಪ್ರತಿಯೊಂದು ಡಿಸ್ಕೌಂಟ್ ನಿಜಕ್ಕೂ ದೊಡ್ಡ ಉಳಿತಾಯ ಎಂದರ್ಥವಲ್ಲ.
ಒಂದೇ ಪ್ರೊಡಕ್ಟ್ನ ಬೆಲೆ ಸಮಯ, ಡಿಮ್ಯಾಂಡ್, ಸ್ಟಾಕ್ ಮತ್ತು ಮಾರಾಟಗಾರರ ಆಫರ್ಗಳಿಗೆ ಅನುಗುಣವಾಗಿ ಬದಲಾಗಬಹುದು.
ಹೀಗಾಗಿ ಮುಂದಿನ ಬಾರಿ “70% ಡಿಸ್ಕೌಂಟ್” ಅಥವಾ “ಲಿಮಿಟೆಡ್ ಟೈಮ್ ಆಫರ್” ಕಂಡಾಗ ತಕ್ಷಣ ಆರ್ಡರ್ ಮಾಡುವ ಬದಲು ಮೂರು ವಿಷಯ ನೆನಪಿಟ್ಟುಕೊಳ್ಳಿ:
ಹಿಂದಿನ ಬೆಲೆ ಎಷ್ಟು?
ಬೇರೆ ಕಡೆ ಬೆಲೆ ಎಷ್ಟು?
ಕೊನೆಗೆ ನಾನು ಪಾವತಿಸುವ ಫೈನಲ್ ಪ್ರೈಸ್ ಎಷ್ಟು?
ಈ ಮೂರು ವಿಷಯಗಳನ್ನು ಪರಿಶೀಲಿಸಿದರೆ ಆನ್ಲೈನ್ ಶಾಪಿಂಗ್ನಲ್ಲಿ ಅನಗತ್ಯ ಖರ್ಚು ತಪ್ಪಿಸಿಕೊಳ್ಳಬಹುದು.
ಎಕ್ಸ್ಕ್ಲೂಸಿವ್ ಸೇಲ್
ಕೆಲವು ನಿರ್ದಿಷ್ಟ ಬ್ರ್ಯಾಂಡ್ಗಳ ಪ್ರೊಡಕ್ಟ್ಗಳು ಒಂದೇ ಆ್ಯಪ್ ಅಥವಾ ಒಂದೇ ವೆಬ್ಸೈಟ್ನಲ್ಲಿ ಮಾತ್ರ ಸಿಗುತ್ತವೆ. ಇದನ್ನು ಸಾಮಾನ್ಯವಾಗಿ ಎಕ್ಸ್ಕ್ಲೂಸಿವ್ ಸೇಲ್ ಅಥವಾ ಪ್ಲಾಟ್ಫಾರ್ಮ್ ಎಕ್ಸ್ಕ್ಲೂಸಿವ್ ಎಂದು ಕರೆಯಬಹುದು. ಕೆಲವು ಬ್ರ್ಯಾಂಡ್ಗಳು ನಿರ್ದಿಷ್ಟ ಆನ್ಲೈನ್ ಪ್ಲಾಟ್ಫಾರ್ಮ್ ಜೊತೆ ಒಪ್ಪಂದ ಮಾಡಿಕೊಂಡಿರುವುದರಿಂದ, ಆ ಪ್ರೊಡಕ್ಟ್ ಬೇರೆ ಆ್ಯಪ್ಗಳಲ್ಲಿ ಲಭ್ಯವಿರದೇ ಇರಬಹುದು.
ಇಂತಹ ಸಂದರ್ಭಗಳಲ್ಲಿ ಕಸ್ಟಮರ್ಗೆ ಬೆಲೆ ಹೋಲಿಕೆ ಮಾಡಲು ಅವಕಾಶ ಕಡಿಮೆಯಾಗಬಹುದು. ಹಾಗಾಗಿ ಒಂದೇ ಆ್ಯಪ್ನಲ್ಲಿ ಮಾತ್ರ ಸಿಗುವ ಪ್ರೊಡಕ್ಟ್ ಖರೀದಿಸುವ ಮೊದಲು ಅದರ ಬೆಲೆ, ಡಿಸ್ಕೌಂಟ್, ರಿವ್ಯೂ ಮತ್ತು ಇದೇ ರೀತಿಯ ಬೇರೆ ಪ್ರೊಡಕ್ಟ್ಗಳ ಬೆಲೆಯನ್ನೂ ಒಮ್ಮೆ ಪರಿಶೀಲಿಸುವುದು ಉತ್ತಮ.

