– ನಾಮಪತ್ರ ವಾಪಸ್ ನಿರ್ಧಾರದಿಂದ ಹಿಂದೆ ಸರಿದ ರೆಜಿನಗರ ಕ್ಷೇತ್ರದ ಅಭ್ಯರ್ಥಿ
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಮೂಲ ಚಿಹ್ನೆ ಪಡೆಯಲು ಸಾಧ್ಯವಾಗಲಿಲ್ಲ ಎಂಬ ಕಾರಣ ನೀಡಿ ತಮ್ಮ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ್ದ ಮಮತಾ ಬ್ಯಾನರ್ಜಿ (Mamata Banerjee) ಬಣದ ಅಭ್ಯರ್ಥಿ ಈಗ ಮತ್ತೆ ಯೂಟರ್ನ್ ಹೊಡೆದಿದ್ದಾರೆ.
ರೆಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಮತಾ ಬಣದ ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ (Rabiul Alam Chowdhury), ನಾಮಪತ್ರ ಹಿಂಪಡೆಯುವ ನಿರ್ಧಾರವನ್ನ ಕೈಬಿಟ್ಟಿದ್ದಾರೆ. ಹೊಸ ಚಿಹ್ನೆಯೊಂದಿಗೆ ಜನರ ಬಳಿಗೆ ತೆರಳುವುದಾಗಿ ಹೇಳುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ. ಈ ಬೆಳವಣಿಗೆ ಬಂಗಾಳ ರಾಜಕೀಯ ಬೆಳವಣಿಗೆಗೆ ಹೊಸ ತಿರುವುನೀಡಿದಂತಾಗಿದೆ.

ಸೆ.13 ರಂದು ನಂದಿಗ್ರಾಮದ ಅಭ್ಯರ್ಥಿಯನ್ನಾಗಿ ಸಂಚಿತಾ ಪ್ರಧಾನ್ ಹಾಗೂ ರೆಜಿನಗರ್ ಅಭ್ಯರ್ಥಿಯನ್ನಾಗಿ (Rejinagar Candidate) ಚೌಧರಿ ಹೆಸರನ್ನ ಘೋಷಣೆ ಮಾಡಲಾಗಿತ್ತು. ಆದ್ರೆ ನಂದಿಗ್ರಾಮದಿಂದ ಸಂಚಿತಾ ಪ್ರಧಾನ್ ತಮ್ಮ ನಾಮಪತ್ರ ಹಿಂಪಡೆದರು. ಶುಕ್ರವಾರ (ನಿನ್ನೆ) ಮಧ್ಯಾಹ್ನ ಸಿಎಂ ಸುವೇಂದು ಅಧಿಕಾರಿ ಅವರನ್ನ ಭೇಟಿಯಾದ ಬಳಿಕ ಈ ಬೆಳವಣಿಗೆ ನಡೆದಿತ್ತು.
ಈ ಬೆನ್ನಲ್ಲೇ ಪಕ್ಷದ ಮೂಲ ಚಿಹ್ನೆ ಪಡೆಯಲು ಸಾಧ್ಯವಾಗಲಿಲ್ಲ ಎಂಬ ಕಾರಣ ನೀಡಿ ಚೌಧರಿ ಕೂಡ ನಾಮಪತ್ರ ಹಿಂಪಡೆಯುವ ನಿರ್ಧಾರ ಪ್ರಕಟಿಸಿದ್ದರು. ಬಳಿಕ ಹೊಸ ಚಿಹ್ನೆಯೊಂದಿಗೆ ಜನರ ಬಳಿಗೆ ತೆರಳುವುದಾಗಿ ಘೋಷಿಸಿದ್ದಾರೆ.
ಅಷ್ಟೇ ಅಲ್ಲದೇ, ಮಮತಾ ಬ್ಯಾನರ್ಜಿ ಅವರ ಸೂಚನೆಗಳನ್ನ ಮೀರಿ ನಾನು ಏನನ್ನೂ ಮಾಡುತ್ತಿಲ್ಲ. ಈ ಹಿಂದೆ ನಾವು ಹೊಸ ಚಿಹ್ನೆ ಹಾಗೂ ಇತರ ವಿಚಾರಗಳ ಬಗ್ಗೆ ನಿರ್ಧರಿಸುತ್ತೇವೆ ಅಂದುಕೊಂಡಿದ್ದೆವು. ಅದರಂತೆ ನಾನು ಹೊಸ ಚಿಹ್ನೆಯೊಂದಿಗೆ ಜನರ ಬಳಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.

