– ಶಿಸ್ತುಕ್ರಮ ತೆಗೆದುಕೊಳ್ಳಲ್ಲ ಅಂತ ಮೊದಲೇ ಹೇಳಿದ್ವಿ; ಐಐಟಿ ಸ್ಪಷ್ಟನೆ
ಮುಂಬೈ: ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಸಿ ChatGPT (ಚಾಟ್ ಜಿಪಿಟಿ) ಮೂಲಕ ಉತ್ತರ ಪಡೆಯಲು ಯತ್ನಿಸಿದ್ದ ಆರೋಪದ ಬೆನ್ನಲ್ಲೇ ಐಐಟಿ ಬಾಂಬೆಯ ದ್ವಿತೀಯ ವರ್ಷದ ವಿದ್ಯಾರ್ಥಿ (IIT Bombay Student) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಾಹಿಲ್ ವಕೋಡೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಇದಕ್ಕೆ ಐಐಟಿ ಬಾಂಬೆ ಪ್ರತಿಕ್ರಿಯಿಸಿದ್ದು, ಎನರ್ಜಿ ಸೈನ್ಸ್ & ಎಂಜಿನಿಯರಿಂಗ್ (Energy Science and Engineering) ವಿಭಾಗದ ವಿದ್ಯಾರ್ಥಿ ಪರೀಕ್ಷೆ ವೇಳೆ ಮೊಬೈಲ್ ಬಳಸಿ ಪ್ರಶ್ನೆಪತ್ರಿಕೆಯನ್ನ AI ಗೆ ಅಪ್ಲೋಡ್ ಮಾಡಿ ಮಾಡಿ ಉತ್ತರ ಪಡೆಯಲು ಯತ್ನಿಸಿದ್ದ, ಈ ವೇಳೆ ಪ್ರೊಫೆಸರ್ ಕೈಗೆ ಸಿಕ್ಕಿಬಿದ್ದಿದ್ದ.
ಬಳಿಕ ಬೋಧಕರು ಹಾಗೂ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಯೊಂದಿಗೆ ಮಾತನಾಡಿ, ಸಲಹೆ ನೀಡಿದ್ದರು. ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ, ಈ ಘಟನೆ ನಿನ್ನ ಕರಿಯರ್ ಮೇಲೆ ಅಥವಾ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಕೂಡ ಬೀರೋದಿಲ್ಲ ಎಂಬ ಭರವಸೆಯನ್ನೂ ನೀಡಿದ್ದರು. ಆದ್ರೆ ಘಟನೆಯಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಗೆ ತೆರಳಿದ್ದು, ಸಂಜೆ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಘಟನೆ ಕುರಿತು ಸೂಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ, ಘಟನೆಯ ಬಗ್ಗೆ ಸಮಗ್ರ ತನಿಖೆ ಹಾಗೂ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಗಳು ಮತ್ತು ಬೋಧಕರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ.
ಆಡಳಿತ ಮಂಡಳಿ ಸ್ಪಷ್ಟನೆ
ಇನ್ನೂ ವಿದ್ಯಾರ್ಥಿ ಆತ್ಮಹತ್ಯೆ ಬಗ್ಗೆ ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿ ಉತ್ತರಕ್ಕಾಗಿ ಪ್ರಶ್ನೆಪತ್ರಿಕೆಯನ್ನ ಚಾಟ್ ಜಿಪಿಟಿಗೆ ಅಪ್‌ಲೋಡ್ ಮಾಡಿದ್ದ. ಆಗ ಸಿಕ್ಕಿಬಿದ್ದ. ಆದಾಗ್ಯೂ ವಿದ್ಯಾರ್ಥಿಯೊಂದಿಗೆ ಸಮಾಲೋಚನೆ ನಡೆಸಲಾಗಿತ್ತು. ಅಲ್ಲದೇ ಯಾವುದೇ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ, ನಿನ್ನ ಶೈಕ್ಷಣಿಕ ಜೀವನದ ಮೇಲೂ ಪರಿಣಾಮ ಬೀರಲ್ಲ ಎಂದು ಭರವಸೆ ಕೂಡ ನೀಡಲಾಗಿತ್ತು ಎಂದು ಹೇಳಿದೆ. ವಿದ್ಯಾರ್ಥಿ ಸಾವಿಗೆ ಸಂಸ್ಥೆಯು ಅತೀವ ದುಃಖ ವ್ಯಕ್ತಪಡಿಸಿದೆ.
ವರದಿಗಳ ಪ್ರಕಾರ, ಕಳೆದ ಏಳು ತಿಂಗಳಲ್ಲಿ IIT ಬಾಂಬೆ ಆವರಣದಲ್ಲಿ ನಡೆದ 3ನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಸದ್ಯ ಹೇಳಿಕೆಗಳನ್ನು ದಾಖಲಿಸುತ್ತಿರುವ ಪೊಲೀಸರು, ಆಹತ್ಯೆಗೆ ನಿಖರ ಕಾರಣ ಏನೆಂಬುದನ್ನು ಪರಿಶೀಲಿಸುತ್ತಿದ್ದಾರೆ. ಈ ಮಧ್ಯೆ ವಿದ್ಯಾರ್ಥಿ ಸಾವಿಗೆ ನ್ಯಾಯ ಬೇಕೆಂದು ಆಗ್ರಹಿಸಿ, ಮಧ್ಯರಾತ್ರಿಯಿಂದಲೂ ಐಐಟಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

