ನಗೋಯಾ: ಮಿನಿ ಒಲಿಂಪಿಕ್ಸ್ ಖ್ಯಾತಿಯ, ಏಷ್ಯಾಡ್ ಎಂದು ಕರೆಯಲ್ಪಡುವ ಏಷ್ಯನ್ ಕ್ರೀಡಾಕೂಟದ (Asian Games 2026) 20ನೇ ಆವೃತ್ತಿಯು ಜಪಾನ್ (Japan) ದೇಶದ ಐಚಿ ನಾಗೋಯಾದಲ್ಲಿ (Aichi-Nagoya) ಇಂದು ಆರಂಭವಾಗಲಿದೆ.
ಉದ್ಘಾಟನೆ ಸಮಾರಂಭದಲ್ಲಿ ಭಾರತದ ಧ್ವಜಾಧಾರಿಯಾಗಿ ಆಯ್ಕೆಯಾಗಿದ್ದ ಖ್ಯಾತ ಶಾಟ್ಪುಟ್ ಪಟು ತಜೀಂದರ್ ಪಾಲ್ ಸಿಂಗ್ ತೂರ್ ಅವರನ್ನು ಕೊನೇ ಕ್ಷಣದಲ್ಲಿ ಬದಲಾಯಿಸಲಾಗಿದೆ. ಇದೀಗ ಒಲಿಂಪಿಯನ್ ಶೂಟರ್ ಮನು ಭಾಕರ್ ಅವರೊಂದಿಗೆ ಅನುಭವಿ ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ಧ್ವಜಾಧಾರಿಗಳಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತದ 503 ಅಥ್ಲೀಟ್ಗಳು 36 ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಲಿದ್ದಾರೆ. 265 ನೆರವು ಸಿಬ್ಬಂದಿ ಮತ್ತು ಪದಾಧಿಕಾರಿಗಳೂ ಕ್ರೀಡಾಪಟುಗಳೊಂದಿಗೆ ಇರಲಿದ್ದಾರೆ. 2028ರ ಒಲಿಂಪಿಕ್ಸ್ ಪ್ರವೇಶಕ್ಕೆ ಅರ್ಹತೆ ಗಿಟ್ಟಿಸುವ ಅವಕಾಶವೂ ಇಲ್ಲಿದೆ.
2023ರಲ್ಲಿ ಚೀನಾದಲ್ಲಿ ನಡೆದಿದ್ದ ಕೂಟದಲ್ಲಿ ಭಾರತ ತಂಡವು 106 ಪದಕ ಜಯಿಸಿತ್ತು. 1952ರಲ್ಲಿ ನಡೆದ ಚೊಚ್ಚಲ ಏಷ್ಯನ್ ಗೇಮ್ಸ್ನಲ್ಲಿ ಕೇವಲ 6 ಕ್ರೀಡೆಗಳಿದ್ದವು. ಅಥ್ಲೆಟಿಕ್ಸ್, ಈಜು, ಬಾಸ್ಕೆಟ್ ಬಾಲ್, ಸೈಕ್ಲಿಂಗ್, ಫುಟ್ಬಾಲ್ ಹಾಗೂ ವೇಟ್ ಲಿಫ್ಟಿಂಗ್ ಸ್ಪರ್ಧೆಗಳನ್ನು ನಡೆಸಲಾಗಿತ್ತು. 57 ಪದಕ ಸ್ಪರ್ಧೆಗಳು ನಡೆದಿತ್ತು. 489 ಅಥ್ಲೀಟ್ಗಳು ಪಾಲ್ಗೊಂಡಿದ್ದರು. ಈ ಬಾರಿ ಗೇಮ್ಸ್ನಲ್ಲಿ 43 ಕ್ರೀಡೆಗಳಿವೆ. ಒಟ್ಟು 71 ವಿಭಾಗಗಳಲ್ಲಿ 469 ಪದಕ ಸ್ಪರ್ಧೆಗಳು ನಡೆಯಲಿವೆ. 10 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳಿದ್ದಾರೆ.

