ಹೈದರಾಬಾದ್: ಉತ್ತಮ ಉದ್ಯೋಗ ಹಾಗೂ ಹೆಚ್ಚಿನ ವೇತನದ ಆಮಿಷವೊಡ್ಡಿ ಬಾಂಗ್ಲಾದೇಶಿ ಮಹಿಳೆಯರನ್ನು (Human trafficking) ಭಾರತಕ್ಕೆ ಕರೆತಂದು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ ಪ್ರಕರಣದಲ್ಲಿ ಎಂಟು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳಿಗೆ ಹೈದರಾಬಾದ್ನ ವಿಶೇಷ ಎನ್ಐಎ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2019ರಲ್ಲಿ ಬೆಳಕಿಗೆ ಬಂದಿದ್ದ ಮಾನವ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಅಪರಾಧಿಗಳಿಗೆ ಒಟ್ಟು 1.37 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಮೂರು ತಿಂಗಳ ಸಾಮಾನ್ಯ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಲಾಗಿದೆ.
ಉದ್ಯೋಗ ಹಾಗೂ ಉತ್ತಮ ವೇತನದ ಆಮಿಷವೊಡ್ಡಿ ಬಾಂಗ್ಲಾದೇಶಿ ಮಹಿಳೆಯರನ್ನು ಭಾರತಕ್ಕೆ ಕರೆತರುತ್ತಿದ್ದ ಆರೋಪಿಗಳು, ಬಳಿಕ ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡುತ್ತಿದ್ದರು ಎಂದು ತನಿಖೆಯಲ್ಲಿ ಪತ್ತೆಯಾಗಿತ್ತು.
2019ರ ಸೆಪ್ಟೆಂಬರ್ನಲ್ಲಿ ತೆಲಂಗಾಣ ಪೊಲೀಸರು ಹೈದರಾಬಾದ್ನ ಪಹಾಡಿ ಶರೀಫ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ್ದರು. ಜಲ್ಪಲ್ಲಿ ಗ್ರಾಮದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೇಂದ್ರದ ಮೇಲೆ ದಾಳಿ ನಡೆಸಿ ಮೂವರು ಬಾಂಗ್ಲಾದೇಶಿ ಮಹಿಳೆಯರನ್ನು ರಕ್ಷಿಸಲಾಗಿತ್ತು. ಬಾಲಾಪುರದ ಮಹಮೂದ್ ಕಾಲನಿಯ ಮನೆಯೊಂದರಿಂದ ಮತ್ತೊಬ್ಬ ಮಹಿಳೆಯನ್ನೂ ರಕ್ಷಿಸಲಾಗಿತ್ತು. ಇದನ್ನೂ ಓದಿ: ಕೈದಿಗಳ ಪುನರ್ವಸತಿಗೆ ಹೊಸ ಹೆಜ್ಜೆ; ಪರಪ್ಪನ ಅಗ್ರಹಾರದಲ್ಲಿ ‘ನವ ಸಂಕಲ್ಪ ಬೇಕರಿ’ ಉದ್ಘಾಟನೆ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆಯನ್ನು ವಹಿಸಿಕೊಂಡಿತು. ತನಿಖೆ ಮುಂದುವರಿಸಿದ ಎನ್ಐಎ, ಆರೋಪಿಗಳ ವಿರುದ್ಧ 2020ರ ಅಕ್ಟೋಬರ್ 17ರಂದು ಚಾರ್ಜ್ಶೀಟ್ ಸಲ್ಲಿಸಿತು. ಒಟ್ಟು 12 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅವರಲ್ಲಿ ಕೆಲವರು ತಲೆಮರೆಸಿಕೊಂಡಿದ್ದರು. 2019 ಮತ್ತು 2020ರಲ್ಲಿ ಪಶ್ಚಿಮ ಬಂಗಾಳ, ತೆಲಂಗಾಣ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಶಿಕ್ಷೆಗೆ ಗುರಿಯಾದವರನ್ನು ರೂಹುಲ್ ಅಮೀನ್ ಧಾಲಿ, ಮೊಹಮ್ಮದ್ ಯೂಸುಫ್ ಖಾನ್ ಅಲಿಯಾಸ್ ಮೊಹಮ್ಮದ್ ಇಮ್ರಾನ್, ಬಿಥಿ ಬೇಗಂ ಅಲಿಯಾಸ್ ಖದೀಜಾ ಶೇಖ್, ಇಮಾಮುಲ್ ಗಾಜಿ ಅಲಿಯಾಸ್ ಮೊಹಮ್ಮದ್ ರಾಣಾ ಹುಸೇನ್, ಮೊಹಮ್ಮದ್ ಅಲ್ ಮಾಮೂನ್, ಸೊಜಿಬ್ ಶೇಖ್, ಸುರೇಶ್ ಕುಮಾರ್ ದಾಸ್ ಅಲಿಯಾಸ್ ಸಾಗರ್, ಮೊಹಮ್ಮದ್ ಅಬ್ದುಲ್ಲಾ ಮುನ್ಶಿ ಅಲಿಯಾಸ್ ಅಬ್ದುಲ್ ಸರ್ಕಾರ್ ಹಾಗೂ ಮೊಹಮ್ಮದ್ ಅಯೂಬ್ ಶೇಖ್ ಎಂದು ಗುರುತಿಸಿದೆ. ಇದನ್ನೂ ಓದಿ: ಗದಗ | ಗಣೇಶನಿಗೆ ʻನಾನ್-ವೆಜ್ʼ ನೈವೇದ್ಯ – ಸಾವಜಿ ಕುಟುಂಬದ ವಿಶೇಷ ಪದ್ದತಿ

