ಬಾಗಲಕೋಟೆ: ವಾಂಬೆ ಕಾಲೋನಿ ನಮ್ಮ ಕ್ಲಿನಿಕ್ನಲ್ಲಿ ವೈದ್ಯಾಧಿಕಾರಿಯಾಗಿದ್ದುಕೊಂಡೇ ನಿಯಮಬಾಹಿರವಾಗಿ ವೈದ್ಯಕೀಯ ಸ್ನಾತಕೋತ್ತರ (PG) ವ್ಯಾಸಂಗ ಮಾಡುತ್ತಿದ್ದ ವೈದ್ಯಾಧಿಕಾರಿ ಡಾ. ಅಂಕಿತಾ ಯರಗಲ್(Ankita Yaragal) ಅವರನ್ನು ಗುತ್ತಿಗೆ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆಗೊಳಿಸಿ ಜಿಲ್ಲಾ ಆರೋಗ್ಯಾಧಿಕಾರಿ (DHO) ಡಾ. ರಾಜಕುಮಾರ ಯರಗಲ್ ಆದೇಶ ಹೊರಡಿಸಿದ್ದಾರೆ.
ಹಾಲಿ ಡಿಹೆಚ್ಒ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಹಾಗೂ ಹಾಲಿ ಶಾಸಕ ಉಮೇಶ್ ಮೇಟಿ(Umesh Meti) ಅವರ ಸೊಸೆಯಾಗಿರುವ ಡಾ. ಅಂಕಿತಾ ಯರಗಲ್ ನಮ್ಮ ಕ್ಲಿನಿಕ್ನಲ್ಲಿ ವೈದ್ಯಾಧಿಕಾರಿಯಾಗಿ ನಿಯೋಜಿಸಲಾಗಿತ್ತು.
ಅಂಕಿತಾ ನಮ್ಮ ಕ್ಲಿನಿಕ್ನಲ್ಲಿ ಕರ್ತವ್ಯ ನಿರ್ವಹಿಸದೆ ಪಿಜಿ ಅಧ್ಯಯನ ಮಾಡುತ್ತಿದ್ದ ಹಾಗೂ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ 75 ಸಾವಿರ ರೂ. ಸರ್ಕಾರಿ ವೇತನ ಪಡೆದು ಕರ್ತವ್ಯ ಲೋಪ ಮಾಡುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ತನಿಖಾ ವರದಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ – ಪೂರ್ಣಾವಧಿ ಎಂಡಿ ಓದುತ್ತಿದ್ದರೂ ಸರ್ಕಾರದಿಂದ ವೇತನ
ಇಲಾಖೆಯ ಅಥವಾ ಮೇಲಧಿಕಾರಿಗಳ ಗಮನಕ್ಕೆ ತಾರದೆ ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದು, ಕೇವಲ ಬಿಡುವಿನ ವೇಳೆಯಲ್ಲಿ ವಾಂಬೆ ಕಾಲೋನಿಯ ನಮ್ಮ ಕ್ಲಿನಿಕ್ನಲ್ಲಿ ಬಂದು ಸಹಿ ಮಾಡುತ್ತಿರುವುದು ಕಂಡುಬಂದಿತ್ತು.
ಕಳೆದ ಆಗಸ್ಟ್ 28 ರಿಂದ ವೈದ್ಯಾಧಿಕಾರಿ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದು, ಈ ವಿಚಾರವನ್ನು ತಾಲೂಕು ಆರೋಗ್ಯಾಧಿಕಾರಿಗಳಿಗಾಗಲಿ (THO) ಅಥವಾ ಆರೋಗ್ಯ ಇಲಾಖೆಯ ಯಾವುದೇ ಹಿರಿಯ ಅಧಿಕಾರಿಗಳ ಗಮನಕ್ಕಾಗಲಿ ತಂದಿರಲಿಲ್ಲ.
ಮಾಧ್ಯಮಗಳಲ್ಲಿ ಗೈರುಹಾಜರಾತಿ ಹಾಗೂ ನಿಯಮ ಉಲ್ಲಂಘನೆಯ ಕುರಿತು ವರದಿಗಳು ಬಿತ್ತರಗೊಂಡ ಹಿನ್ನೆಲೆಯಲ್ಲಿ ಅವರನ್ನು ಗುತ್ತಿಗೆ ವೈದ್ಯಾಧಿಕಾರಿ ಸೇವೆಯಿಂದ ಈ ಕೂಡಲೇ ಬಿಡುಗಡೆಗೊಳಿಸಲಾಗಿದೆ.
ಈ ಅವಧಿಯಲ್ಲಿ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ನಷ್ಟ ಉಂಟಾಗಿದ್ದರೆ, ಅದನ್ನು ನಿಯಮಾನುಸಾರ ಅವರ ಬಳಿಯಿಂದಲೇ ವಸೂಲಿ ಮಾಡಿಕೊಳ್ಳಲಾಗುವುದು.ಈ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಅಥವಾ ಅಹವಾಲುಗಳಿದ್ದಲ್ಲಿ ಲಿಖಿತ ರೂಪದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲು ಅವಕಾಶ ನೀಡಲಾಗಿದೆ.

