ಹೈದರಾಬಾದ್: ತೆಲಂಗಾಣ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ(Telangana Assembly) ಆಡಳಿತಾರೂಢ ಕಾಂಗ್ರೆಸ್ (Congress) ಮತ್ತು ಪ್ರತಿಪಕ್ಷ ಬಿಆರ್ಎಸ್ (BRS) ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಸತತ ಮೂರನೇ ದಿನವೂ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಿಆರ್ಎಸ್ನ ಹಿರಿಯ ನಾಯಕರಾದ ಕೆ.ಟಿ. ರಾಮರಾವ್ (KTR) ಮತ್ತು ಟಿ. ಹರೀಶ್ ರಾವ್ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರನ್ನು ಇಡೀ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.
ಬುಧವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತೀವ್ರ ಗದ್ದಲ ಸೃಷ್ಟಿಸಿದರು. ಕಲಾಪ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ, ಶಾಸಕಾಂಗ ವ್ಯವಹಾರಗಳ ಸಚಿವ ಡಿ. ಶ್ರೀಧರ್ ಬಾಬು ಅವರು ಬಿಆರ್ಎಸ್ ಶಾಸಕರ ಅಮಾನತಿಗೆ ನಿರ್ಣಯ ಮಂಡಿಸಿದರು.
ಸಚಿವರ ಪ್ರಸ್ತಾವನೆಯನ್ನು ಅಂಗೀಕರಿಸಿದ ಸಭಾಪತಿ ಗಡ್ಡಂ ಪ್ರಸಾದ್ ಕುಮಾರ್ ಅವರು, ಸದನದ ಕಲಾಪಕ್ಕೆ ನಿರಂತರವಾಗಿ ಅಡ್ಡಿ ಉಂಟುಮಾಡಿದ್ದಕ್ಕಾಗಿ ಬಿಆರ್ಎಸ್ ಸದಸ್ಯರನ್ನು ಪ್ರಸ್ತುತ ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿ ಆದೇಶಿಸಿದರು.
ಪ್ರತಿಭಟನೆ ಯಾಕೆ?
ಚುನಾವಣಾ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಆರೋಪಿಸಿ ಭಾರತ್ ರಾಷ್ಟ್ರ ಸಮಿತಿ (BRS) ಸದಸ್ಯರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ ಆರಂಭದಲ್ಲಿ ತೆಲಂಗಾಣ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಬಿಆರ್ಎಸ್ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಸಂಘರ್ಷ ಏರ್ಪಟ್ಟಿದೆ.
ಈ ಕಾರಣಕ್ಕಾಗಿ ಬಿಆರ್ಎಸ್ ನಾಯಕರು “ಕಾಂಗ್ರೆಸ್ 1000 ದಿನಗಳಲ್ಲಿ ಭರವಸೆ ಈಡೇರಿಸಲು ವಿಫಲವಾಗಿದೆ” ಎಂದು ಬರೆದ ಕಪ್ಪು ಟಿ-ಶರ್ಟ್ ಧರಿಸಿ ವಿಧಾನಸಭೆಗೆ ಬರಲು ಯತ್ನಿಸಿದ್ದರು. ಕಪ್ಪು ಟಿ-ಶರ್ಟ್ ಧರಿಸಿ ಬಂದ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಹರೀಶ್ ರಾವ್ ಸೇರಿದಂತೆ ಹಲವು ಶಾಸಕರನ್ನು ಪೊಲೀಸರು ವಿಧಾನಸಭೆಯ ಗೇಟ್ ಬಳಿಯೇ ತಡೆದು, ವಶಕ್ಕೆ ಪಡೆದರು.
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಕಪ್ಪು ಟಿ-ಶರ್ಟ್ ಧರಿಸಿ ಭಾಗವಹಿಸಲು ಅವಕಾಶ ಇರುವಾಗ, ನಮಗೆ ತೆಲಂಗಾಣ ಅಸೆಂಬ್ಲಿಯಲ್ಲಿ ಯಾಕೆ ಅವಕಾಶವಿಲ್ಲ? ಎಂದು ಪ್ರಶ್ನಿಸಿ ಬಿಆರ್ಎಸ್ ನಾಯಕರು ಜಟಾಪಟಿ ನಡೆಸಿದರು. ಇದು ರಾಜ್ಯಾದ್ಯಂತ ಪ್ರತಿಭಟನೆಗೆ ಕಿಚ್ಚು ಹಚ್ಚಿತು.
