ಬಳ್ಳಾರಿ: ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಅಂತಿಮ ಹಂತಕ್ಕೆ ತಲುಪಿದ್ದು, ನಗರ ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬಳ್ಳಾರಿಯಲ್ಲಿ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಿದೆ. ಪಾದಯಾತ್ರೆ ನಗರಕ್ಕೆ ಕೇವಲ 13 ಕಿ.ಮೀ ದೂರದಲ್ಲಿದ್ದು, ಇಂದು ಸಂಜೆಯ ವೇಳೆಗೆ ಬಳ್ಳಾರಿ ತಲುಪಲಿದೆ.
ಕಳೆದ ಜನವರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಹಾಗೂ ನಗರದಲ್ಲಿನ ಸೂಕ್ಷ್ಮ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು, ಹಿರಿಯ ಐಪಿಎಸ್ ಅಧಿಕಾರಿ ಸುಮನ್ ಡಿ. ಪನ್ನೇಕರ್ ನೇತೃತ್ವದಲ್ಲಿ ಅಭೂತಪೂರ್ವ ಭದ್ರತೆ ಏರ್ಪಡಿಸಲಾಗಿದೆ. 3 ಜಿಲ್ಲೆಗಳ ಎಸ್‌ಪಿಗಳು ಸೇರಿದಂತೆ ಒಟ್ಟು 1,200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇಂದಿನಿಂದ ನಾಳೆಯವರೆಗೆ ಭದ್ರತೆಯನ್ನು ದುಪ್ಪಟ್ಟುಗೊಳಿಸಲಾಗಿದೆ.
ಪಾದಯಾತ್ರೆಯ ಅಂತಿಮ ಹಂತದಲ್ಲಿ ಮುರುಗೇಶ್ ನಿರಾಣಿ, ಸಿ.ಟಿ. ರವಿ, ನಳಿನ್ ಕುಮಾರ್ ಕಟೀಲ್, ಎಸ್. ಸುರೇಶ್ ಕುಮಾರ್, ಬಿ.ಸಿ. ಪಾಟೀಲ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ರೂಪಾಲಿ ನಾಯ್ಕ್, ಸಿ.ಕೆ. ರಾಮಮೂರ್ತಿ, ಭಾಗೀರಥಿ ಮುರುಳ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಹೆಜ್ಜೆ ಹಾಕಿದ್ದಾರೆ.
ಪಾದಯಾತ್ರೆ ಸಮೀಪಿಸುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಬಿಜೆಪಿ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬಹಿರಂಗ ಸಮಾವೇಶಕ್ಕೆ ಸ್ಥಳ ನೀಡಲು ಜಿಲ್ಲಾಡಳಿತ ನಿನ್ನೆಯವರೆಗೂ ಸತಾಯಿಸಿದ್ದು, ಕೊನೆಗೆ ಕಠಿಣ ಷರತ್ತುಗಳನ್ನು ವಿಧಿಸಿ ಮುನ್ಸಿಪಲ್ ಮೈದಾನಕ್ಕೆ ಅನುಮತಿ ನೀಡಿದೆ.
ಮಹಾನಗರ ಪಾಲಿಕೆ ಸಿಬ್ಬಂದಿ ನಗರದಲ್ಲಿ ಹಾಕಲಾಗಿದ್ದ ಬಿಜೆಪಿ ಬ್ಯಾನರ್ ಹಾಗೂ ಬಾವುಟಗಳನ್ನು ತೆರವುಗೊಳಿಸಿದ್ದು, ಕಾಂಗ್ರೆಸ್ ಸರ್ಕಾರದ ಈ ನಡೆ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಬಿಜೆಪಿ ಸಮಾವೇಶಕ್ಕೆ ಅನುಮತಿ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಈ ಸಮಾವೇಶದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಸಂಸದರು, ಶಾಸಕರು ಹಾಗೂ 1 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ ಮುನ್ಸಿಪಲ್ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
