* 7 ಸಾವಿರ ಉದ್ಯೋಗಿಗಳ ವೈಯಕ್ತಿಕ ಮಾಹಿತಿ ಸೋರಿಕೆ
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಕೆಲಸ ಮಾಡುತ್ತಿರುವ ಕಾಶ್ಮೀರಿ ಪಂಡಿತ (Kashmiri Pandits) ಸಮುದಾಯದ ಸರ್ಕಾರಿ ನೌಕರರಿಗೆ ಉಗ್ರ ಸಂಘಟನೆಗಳಿಂದ ಮತ್ತೊಮ್ಮೆ ಬೆದರಿಕೆ ಬಂದಿದೆ.
ಲಷ್ಕರ್-ಎ-ತಯ್ಬಾ ಜೊತೆಗೆ ಸಂಪರ್ಕ ಹೊಂದಿರುವ ಯುನೈಟೆಡ್ ಲಿಬರೇಷನ್ ಕೌನ್ಸಿಲ್ ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿ ನೇಮಕಗೊಂಡಿರುವ ಕಾಶ್ಮೀರಿ ಪಂಡಿತ ನೌಕರರಿಗೆ ಕೆಲಸ ತೊರೆಯುವಂತೆ ಎಚ್ಚರಿಕೆ ನೀಡಿದೆ. ಕೆಲಸ ಮುಂದುವರಿಸಿದರೆ ಜೀವಕ್ಕೆ ಅಪಾಯ ಎದುರಾಗಲಿದೆ ಎಂದು ಬೆದರಿಕೆ ಹಾಕಲಾಗಿದೆ. ಇದನ್ನೂ ಓದಿ: ‘ವಂದೇ ಮಾತರಂ’ ಗೀತೆ ಮುಗಿಯೋವರೆಗೂ ಎದ್ದು ನಿಂತ ಓಮರ್ ಅಬ್ದುಲ್ಲಾ; ಕಾಂಗ್ರೆಸ್ ಆಕ್ಷೇಪ
ಮಾಹಿತಿಯ ಪ್ರಕಾರ, ಸುಮಾರು 7 ಸಾವಿರ ಕಾಶ್ಮೀರಿ ಪಂಡಿತ ಉದ್ಯೋಗಿಗಳು ಉಗ್ರರ ಬೆದರಿಕೆಯ ವ್ಯಾಪ್ತಿಯಲ್ಲಿದ್ದಾರೆ. ಉದ್ಯೋಗಿಗಳ ಮೊಬೈಲ್ ಸಂಖ್ಯೆ, ಮನೆ ವಿಳಾಸ ಮತ್ತು ವಾಹನ ನೋಂದಣಿ ಸಂಖ್ಯೆಯಂತಹ ವೈಯಕ್ತಿಕ ಮಾಹಿತಿಯನ್ನು ಭಯೋತ್ಪಾದಕ ಸಂಘಟನೆ ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದೆ.
ಕೆಲವು ಬೆದರಿಕೆ ಪತ್ರಗಳು ಮೊದಲು ಡಾರ್ಕ್ ವೆಬ್‌ನಲ್ಲಿ ಕಾಣಿಸಿಕೊಂಡು ಬಳಿಕ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಮೂಲಕ ಹರಿದಾಡಿವೆ. ಇದರಿಂದ ವೈಯಕ್ತಿಕ ಮಾಹಿತಿಯ ಸೋರಿಕೆಯ ಮೂಲ ಪತ್ತೆಹಚ್ಚುವುದು ಮತ್ತು ಅದರ ಹಿಂದೆ ಇರುವ ಜಾಲವನ್ನು ಬಯಲಿಗೆಳೆಯುವುದು ಭದ್ರತಾ ಸಂಸ್ಥೆಗಳಿಗೆ ಸವಾಲಾಗಿದೆ. ಇದನ್ನೂ ಓದಿ: ಭಾರತದ 7.8% ಜಿಡಿಪಿ ಬೆಳವಣಿಗೆ ವಿಶ್ವಕ್ಕೆ ಹೊಸ ಭರವಸೆ – ಪ್ರಧಾನಿ ಮೋದಿ
ಕಳೆದ ಒಂದು ತಿಂಗಳಲ್ಲಿ ಕಾಶ್ಮೀರಿ ಪಂಡಿತ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ಕನಿಷ್ಠ ಐದು ಬೆದರಿಕೆ ಪತ್ರಗಳು ಹೊರಬಂದಿವೆ ಎನ್ನಲಾಗಿದೆ. ಸೆಪ್ಟೆಂಬರ್ 5ರಂದು ಬೆದರಿಕೆ ಪತ್ರ ಹಿನ್ನಲೆ ಸೆಪ್ಟೆಂಬರ್ 6ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಪೊಲೀಸ್ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಲಾಗಿದೆ.
