– ಮಹತ್ವದ ನೀತಿ ಸುಧಾರಣೆಗಳ ಸುಳಿವು ಕೊಟ್ಟ ʻನಮೋʼ
ಮುಂಬೈ: ಜಾಗತಿಕ ಮಟ್ಟದಲ್ಲಿ ಸವಾಲಿನ ಪರಿಸ್ಥಿತಿ ಮುಂದುವರಿದಿದ್ದರೂ, ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ಸಂಘರ್ಷಗಳು, ವ್ಯಾಪಾರ ಉದ್ವಿಗ್ನತೆ ಹಾಗೂ ಇಂಧನ ಮತ್ತು ತೈಲ ಪೂರೈಕೆ ಸರಪಳಿಗಳಲ್ಲಿನ ಅಡೆತಡೆಗಳ ನಡುವೆಯೂ ವಿಶ್ವಕ್ಕೆ ಹೊಸ ಭರವಸೆ ಮೂಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿಪ್ರಾಯಪಟ್ಟರು.
ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನ 3ನೇ ಹಂತದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಜಗತ್ತು ದೀರ್ಘಕಾಲದಿಂದ ಸಂಘರ್ಷ ಮತ್ತು ಅನಿಶ್ಚಿತತೆಯ ಪರಿಸ್ಥಿತಿ ಎದುರಿಸುತ್ತಿದೆ. ಇಂಧನ ಮತ್ತು ಸರಕುಗಳ ಪೂರೈಕೆ ಸರಪಳಿಗಳ ಮೇಲೆ ಒತ್ತಡವಿದ್ದು, ವ್ಯಾಪಾರ ಕ್ಷೇತ್ರದಲ್ಲಿನ ಉದ್ವಿಗ್ನತೆಯೂ ಮುಂದುವರಿದಿದೆ ಎಂದು ವಿವರಿಸಿದ್ರು.
Shared the four priorities for India’s FinTech sector. pic.twitter.com/mMJCkN6g9c
— Narendra Modi (@narendramodi) September 8, 2026
ಏಪ್ರಿಲ್–ಜೂನ್ ತ್ರೈಮಾಸಿಕವು ವಿಶೇಷವಾಗಿ ಸವಾಲಿನ ಅವಧಿಯಾಗಿತ್ತು. ಆದ್ರೂ ಭಾರತದ ಬಲವಾದ ಆರ್ಥಿಕ ಬೆಳವಣಿಗೆಯು ದೇಶದ ಆರ್ಥಿಕತೆಯ ಸ್ಥಿತಿಸ್ಥಾಪಕತೆಯನ್ನ ತೋರಿಸಿದೆ. ಇಂತಹ ಪರಿಸ್ಥಿತಿಯಲ್ಲೂ ಭಾರತ ಶೇ.7.8ರಷ್ಟು ಬೆಳವಣಿಗೆ ಸಾಧಿಸಿದ್ದು, ವಿಶ್ವಕ್ಕೆ ಹೊಸ ಭರವಸೆಯನ್ನ ಕೊಟ್ಟಂತಾಗಿದೆ ಎಂದು ಮೋದಿ ಹೇಳಿದರು.
ಭಾರತದ ಸುಧಾರಿಸುತ್ತಿರುವ ಸಾರ್ವಭೌಮ ಕ್ರೆಡಿಟ್ ರೇಟಿಂಗ್ ಕೂಡ ಜಾಗತಿಕ ಮಟ್ಟದಲ್ಲಿ ದೇಶದ ಮೇಲಿನ ವಿಶ್ವಾಸ ಹೆಚ್ಚುತ್ತಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಸುಮಾರು 3 ದಶಕಗಳ ಬಳಿಕ ಈ ರೀತಿಯ ರೇಟಿಂಗ್ ಏರಿಕೆ ಕಂಡುಬಂದಿದೆ. ಭಾರತದ ಆರ್ಥಿಕ ಬೆಳವಣಿಗೆಯ ವೇಗ, ಸ್ಥೂಲ ಆರ್ಥಿಕ ಸ್ಥಿರತೆ ಹಾಗೂ ಇತ್ತೀಚಿನ ವರ್ಷಗಳಲ್ಲಿ ಕೈಗೊಂಡಿರುವ ರಚನಾತ್ಮಕ ಸುಧಾರಣೆಗಳ ಮೇಲಿನ ಜಗತ್ತಿನ ಹೆಚ್ಚುತ್ತಿರುವ ವಿಶ್ವಾಸವನ್ನ ಇದು ಪ್ರತಿಬಿಂಬಿಸುತ್ತದೆ ಎಂದರಲ್ಲದೇ ಭಾರತದ ಸುಧಾರಣಾ ಎಕ್ಸ್‌ಪ್ರೆಸ್ ಇನ್ನಷ್ಟು ವೇಗವಾಗಿ ಸಾಗಲಿದೆ ಎಂದು ತಿಳಿಸಿದರು.
India’s Reform Express will only gather more speed. pic.twitter.com/kcScVMnNG0
— Narendra Modi (@narendramodi) September 8, 2026
ಭಾರತದ ಯುಪಿಐ ನಿರ್ಣಾಯಕ ಅಧ್ಯಾಯ
ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಏಕೀಕೃತ ಪಾವತಿ ವ್ಯವಸ್ಥೆ (UPI) ಗೆ 10 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಫಿನ್‌ಟೆಕ್ ಪಯಣ ಅದ್ಭುತವಾಗಿದೆ. ಯುಪಿಐ ಭಾರತದ ಅತ್ಯಂತ ಯಶಸ್ವಿ ಡಿಜಿಟಲ್ ಉಪಕ್ರಮಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿ ಯುಪಿಐ ತಂದಿರುವ ಬದಲಾವಣೆ ಎಷ್ಟರಮಟ್ಟಿಗೆ ಮಹತ್ವದ್ದಾಗಿದೆ ಎಂದರೆ, ಇದೀಗ ಫಿನ್‌ಟೆಕ್ ಕುರಿತು ಯಾವುದೇ ಚರ್ಚೆಯೂ ಯುಪಿಐ ಉಲ್ಲೇಖವಿಲ್ಲದೆ ಪೂರ್ಣಗೊಳ್ಳುವುದಿಲ್ಲ ಎಂದು ಮೋದಿ ಹೇಳಿದರು.
ಯುಪಿಐ ಹಲವು ದೇಶಗಳಿಗೆ ವಿಸ್ತರಿಸುವ ಗುರಿ
ಹಲವು ದೇಶಗಳಿಗೆ ವಿಸ್ತರಿಸಿರುವ ಯುಪಿಐನ ಮುಂದಿನ ಹಂತವು ಆಯಾ ದೇಶಗಳ ಪಾವತಿ ವ್ಯವಸ್ಥೆಗಳೊಂದಿಗೆ ಸಂಪರ್ಕ ಕಲ್ಪಿಸುವುದಾಗಿದೆ. ಸಿಂಗಾಪುರದೊಂದಿಗೆ ನಾವು ಈಗಾಗಲೇ ಇದನ್ನ ಮಾಡಿದ್ದೇವೆ. ಇದರ ಪರಿಣಾಮವಾಗಿ ಭಾರತ ಮತ್ತು ಸಿಂಗಾಪುರದ ನಡುವಿನ ವಹಿವಾಟುಗಳು ಒಂದು ನಗರದ ಎರಡು ರಸ್ತೆಗಳ ನಡುವಿನ ವಹಿವಾಟಿನಂತೆ ಸುಲಭವಾಗಿ ನಡೆಯುತ್ತಿವೆ. ಇದೇ ರೀತಿಯ ಸಂಪರ್ಕವನ್ನ ಇತರ ದೇಶಗಳು ಮತ್ತು ಮಾರುಕಟ್ಟೆಗಳೊಂದಿಗೂ ನಿರ್ಮಿಸಬೇಕಿದೆ ಎಂದು ಅವರು ಹೇಳಿದರು.
