ಬೆಂಗಳೂರು/ಬೆಳಗಾವಿ: ದೇಶಾದ್ಯಂತ ಪರ್ಯಾಯ ಇಂಧನವಾಗಿ ಎಥೆನಾಲ್‌ಗೆ(Ethanol) ಭಾರಿ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ(Karnataka) ಹೊಸ ಸಕ್ಕರೆ ಕಾರ್ಖಾನೆಗಳ(Sugar Mills) ಸ್ಥಾಪನೆಗೆ ಉದ್ಯಮಿಗಳು ಹಾಗೂ ರಾಜಕೀಯ ನಾಯಕರು ಹೆಚ್ಚಿನ ಒಲವು ತೋರುತ್ತಿದ್ದಾರೆ.
ಹೌದು. ರಾಜ್ಯದಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆಗಳನ್ನು ತೆರೆಯಲು ಅನುಮತಿ ಕೋರಿ ಬರೋಬ್ಬರಿ 42 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಕ್ಕರೆ ಆಯುಕ್ತಾಲಯ ಅಧಿಕೃತ ಮಾಹಿತಿ ನೀಡಿದೆ.
ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆ ವ್ಯತ್ಯಯವಾಗುತ್ತಿರುವ ಕಾರಣ, ಕೇಂದ್ರ ಸರ್ಕಾರ ಪರ್ಯಾಯ ಇಂಧನವಾಗಿ ಎಥೆನಾಲ್ ಮಿಶ್ರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಎಥೆನಾಲ್‌ಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದ್ದು, ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಭಾರಿ ಪೈಪೋಟಿ ಶುರುವಾಗಿದೆ.
ಹೊಸದಾಗಿ ಬಂದಿರುವ 42 ಅರ್ಜಿಗಳ ಪೈಕಿ ಬಹುತೇಕವು ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿವೆ. ಬೆಳಗಾವಿ 13, ವಿಜಯಪುರ 8, ಕಲಬುರಗಿ 6, ಬಾಗಲಕೋಟೆ 4, ಧಾರವಾಡದಿಂದ 4 ಅರ್ಜಿಗಳು ಸಲ್ಲಿಕೆಯಾಗಿವೆ. ಇದನ್ನೂ ಓದಿ: ಪಿಎಂ ಸೇತು ಯೋಜನೆ| ಬೆಂಗಳೂರು, ಕಲಬುರಗಿಯ ತಲಾ 4 ಐಟಿಐ ಆಯ್ಕೆ: ಎಂ ಬಿ ಪಾಟೀಲ್
ಕಿತ್ತೂರು ಕರ್ನಾಟಕ ಭಾಗದ ಬಹುತೇಕ ಪ್ರಮುಖ ರಾಜಕೀಯ ನಾಯಕರೇ ಸಕ್ಕರೆ ಉದ್ಯಮಿಗಳಾಗಿದ್ದು, ಇದೀಗ ಹೊಸ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದವರಲ್ಲೂ ಬಹುತೇಕರು ಇದೇ ಭಾಗದ ಪ್ರಭಾವಿ ರಾಜಕೀಯ ಮುಖಂಡರೇ ಆಗಿದ್ದಾರೆ.
ರಾಜ್ಯದಲ್ಲಿ ಸುಮಾರು 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಪ್ರತಿವರ್ಷ ಅಂದಾಜು 576 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 49 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಸಹಕಾರಿ ಕ್ಷೇತ್ರವೂ ಸೇರಿದಂತೆ ಒಟ್ಟು 81 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲೇ 29 ಕಾರ್ಖಾನೆಗಳಿವೆ.
ಪ್ರಸ್ತುತ ಸಲ್ಲಿಕೆಯಾಗಿರುವ ಎಲ್ಲಾ 42 ಹೊಸ ಕಾರ್ಖಾನೆಗಳಿಗೆ ಅನುಮೋದನೆ ಸಿಕ್ಕಿ ಸ್ಥಾಪನೆಯಾದರೆ, ರಾಜ್ಯದಲ್ಲಿನ ಒಟ್ಟು ಸಕ್ಕರೆ ಕಾರ್ಖಾನೆಗಳ ಸಂಖ್ಯೆ 123ಕ್ಕೆ ಏರಿಕೆಯಾಗಲಿದೆ.
