ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಬದಿ ಪಾರ್ಕಿಂಗ್‌ಗೆ ವರ್ಷಕ್ಕೆ (Bengaluru Parking) 15 ಸಾವಿರದಿಂದ 25 ಸಾವಿರ ರೂ. ಶುಲ್ಕ ವಿಧಿಸುವ ಪ್ರಸ್ತಾವನೆಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು, ಪ್ರಸ್ತಾವಿತ ಶುಲ್ಕವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಅಕ್ರಮ ಹಾಗೂ ದೀರ್ಘಾವಧಿಯ ರಸ್ತೆಬದಿ ಪಾರ್ಕಿಂಗ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ, ಹಳೆಯ ಕಟ್ಟಡಗಳು ಹಾಗೂ ಹಲವು ಬಡಾವಣೆಗಳಲ್ಲಿ ಮನೆಗಳಲ್ಲೇ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇಂತಹ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಅನಿವಾರ್ಯವಾಗಿ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸಬೇಕಾಗುತ್ತದೆ. ಇಂತಹ ಕುಟುಂಬಗಳಿಗೂ ವರ್ಷಕ್ಕೆ 15ರಿಂದ 25 ಸಾವಿರ ರೂ. ಶುಲ್ಕ ವಿಧಿಸಿದರೆ ಸಾಮಾನ್ಯ ಜನರಿಗೆ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಅನೇಕ ಕುಟುಂಬಗಳು ಮನೆ ಸಾಲ, ವಾಹನ ಸಾಲ, ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ವೆಚ್ಚಗಳನ್ನು ನಿರ್ವಹಿಸುತ್ತಿವೆ. ಇದರ ನಡುವೆ ಹೊಸ ಪಾರ್ಕಿಂಗ್ ಶುಲ್ಕ ವಿಧಿಸಿದರೆ ಜನರ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಟ್ಟಡದೊಳಗೆ ಪಾರ್ಕಿಂಗ್ ಸೌಲಭ್ಯ ಇಲ್ಲದೆ ನಿಯಮಿತವಾಗಿ ವಾಹನ ಬಳಸುವ ಕುಟುಂಬಗಳಿಗೆ ವಿಶೇಷ ವಿನಾಯಿತಿ ನೀಡುವ ಬಗ್ಗೆಯೂ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಸಾಮಾನ್ಯ ಕುಟುಂಬಗಳಿಗೆ ಪಾರ್ಕಿಂಗ್ ಶುಲ್ಕದಿಂದ ವಿನಾಯಿತಿ ನೀಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಯಾದಗಿರಿ | ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆ
ಬೆಂಗಳೂರಿನ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಆದರೆ, ಅದಕ್ಕಾಗಿ ಸಾಮಾನ್ಯ ಜನರಿಗೆ ತೊಂದರೆಯಾಗದ ರೀತಿಯಲ್ಲಿ ನಿಯಮ ರೂಪಿಸಬೇಕು ಎಂಬುದು ರಾಮಲಿಂಗಾರೆಡ್ಡಿ ಅವರ ನಿಲುವಾಗಿದೆ.
ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಬೆಂಗಳೂರು ನಗರದ ಶಾಸಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಬೇಕು. ಬಳಿಕ ಪಾರ್ಕಿಂಗ್ ಶುಲ್ಕದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಅವರು ಸಿಎಂಗೆ ಸಲಹೆ ನೀಡಿದ್ದಾರೆ.ಇದನ್ನೂ ಓದಿ: ಐಫೋನ್ EMI ವಿಚಾರಕ್ಕೆ ಕುಟುಂಬ ದುರಂತ ಅಂತ್ಯ?: ಮೃತ ಮಹಿಳೆಯ ಸಹೋದರಿ ಹೇಳಿದ್ದೇನು?
