ಗದಗ: ಕ್ರಿಮಿನಾಶಕ ಔಷಧ ಸಿಂಪಡಿಸಿದ ಮೆಕ್ಕೆಜೋಳ ಸೇವಿಸಿದ ಶಂಕೆಯಲ್ಲಿ ಹತ್ತಾರು ಜಾನುವಾರುಗಳು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಜಾನುವಾರುಗಳು ಅಸ್ವಸ್ಥಗೊಂಡಿರುವ ಘಟನೆ ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುನಿಯಾನ್ ತಾಂಡದಲ್ಲಿ ನಡೆದಿದೆ.
ಸಕ್ರಪ್ಪ ಲಮಾಣಿ, ರಾಮಣ್ಣ ಲಮಾಣಿ, ತುಳಜಾಬಾಯಿ ಲಮಾಣಿ, ಮಂಗಲೆಪ್ಪ, ಸೋಮಪ್ಪ, ದೇವರಾಜ್ ಸೇರಿದಂತೆ ಹಲವು ಜಾನುವಾರು ಮಾಲೀಕರ ಜಾನುವಾರುಗಳು ಮೃತಪಟ್ಟಿವೆ. ಈಗಾಗಲೇ 6 ಆಕಳು, 5 ಎಮ್ಮೆ ಹಾಗೂ 2 ಕರುಗಳು ಸಾವನ್ನಪ್ಪಿವೆ.
ಮುನಿಯಾನ್ ತಾಂಡದಲ್ಲಿ ನೂರಾರು ಜಾನುವಾರುಗಳಿದ್ದು, ಅವುಗಳನ್ನು ನಾಲ್ಕೈದು ಮಂದಿ ಕಾರ್ಮಿಕರು ನೋಡಿಕೊಳ್ಳುತ್ತಿದ್ದಾರೆ. ಮೆಕ್ಕೆಜೋಳ ಬೆಳೆಗೆ ಕ್ರಿಮಿನಾಶಕ ಔಷಧ ಸಿಂಪಡಿಸಲಾಗಿತ್ತು. ಬಳಿಕ ಅದೇ ಬೆಳೆಯನ್ನು ಜಾನುವಾರುಗಳು ಸೇವಿಸಿದ್ದು, ಇದರಿಂದಲೇ ಅವು ಅಸ್ವಸ್ಥಗೊಂಡು ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ತಿಳಿದು ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು ಪರಿಶೀಲಿಸಿದ್ದಾರೆ. ಅಸ್ವಸ್ಥಗೊಂಡಿರುವ 20ಕ್ಕೂ ಹೆಚ್ಚು ಜಾನುವಾರುಗಳಿಗೆ ಸದ್ಯ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಪಾಟ್ನಾದಲ್ಲಿ ತಾರಕಕ್ಕೇರಿದ ವಿದ್ಯಾರ್ಥಿಗಳ ಪ್ರತಿಭಟನೆ; ಜಲಫಿರಂಗಿ ಪ್ರಯೋಗ, ಬ್ಯಾರಿಕೇಡ್ ಮುರಿದು ಮೆರವಣಿಗೆ
ಹಲವು ಕುಟುಂಬಗಳು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಕಣ್ಣೆದುರೇ ತಮ್ಮ ಜಾನುವಾರುಗಳು ಸಾವನ್ನಪ್ಪಿರುವುದನ್ನು ಕಂಡು ಮಾಲೀಕರು ಕಣ್ಣೀರಿಟ್ಟಿದ್ದಾರೆ. ಜಾನುವಾರುಗಳನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಜಾನುವಾರುಗಳ ಮಾಲೀಕರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಸಿಎಂ ಡಿಕೆಶಿ ನನ್ನನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುವ ನಂಬಿಕೆ ಇದೆ: ಕೆ.ವೈ.ನಂಜೇಗೌಡ

