– ಕುಟುಂಬದಲ್ಲಿ ಮೊದಲೇ ಇತ್ತು ಮನಸ್ತಾಪ
– ಆನಾರೋಗ್ಯದಿಂದ ಹಿರಿಯ ಮಗನ ಕಳೆದುಕೊಂಡಿದ್ದ ಕುಟುಂಬ
ಮುಂಬೈ: ಮಹಾರಾಷ್ಟ್ರದ ಛತ್ರಪತಿ (Maharashtra) ಸಂಭಾಜಿನಗರ ಜಿಲ್ಲೆಯಲ್ಲಿ ಐಫೋನ್ ಇಎಂಐ ವಿಚಾರವಾಗಿ ಜಗಳವಾಗಿ ಒಂದೇ ಕುಟುಂಬದ ಮೂವರು ದುರಂತ ಅಂತ್ಯ (iPhone EMI) ಕಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಈ ವಿಚಾರದ ಬಗ್ಗೆ ಕುಟುಂಬಸ್ಥರೊಬ್ಬರು ಇದೀಗ ಸ್ಪಷ್ಟನೆ ನೀಡಿದ್ದಾರೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಆಗಸ್ಟ್ 21ರಂದು ಈ ಘಟನೆ ನಡೆದಿತ್ತು. 19 ವರ್ಷದ ಕುನಾಲ್ ತಾನು ಖರೀದಿಸಿದ್ದ ಐಫೋನ್‌ನ ಇಎಂಐ ಪಾವತಿಸಲು ಸಾಧ್ಯವಾಗದೆ, ಮನೆಯವರ ಬಳಿ ಹಣದ ಸಹಾಯ ಕೇಳಿದ್ದ. ಆದರೆ, ಮನೆಯವರು ಇದಕ್ಕೆ ಒಪ್ಪದಿದ್ದರಿಂದ ಕುನಾಲ್ ಬೆಟ್ಟದಿಂದ ಕೆಳಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ರಕ್ಷಿಸಲು ಹೋದ ತಂದೆ ಕೂಡ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಕಣ್ಣಾರೆ ಕಂಡ ತಾಯಿ ಸಂಗೀತಾ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು.
ಈ ಘಟನೆ ವೈರಲ್ ಆದ ಬಳಿಕ ಆತ್ಮಹತ್ಯೆಗೆ ಐಫೋನ್ ಇಎಂಐ ಕಾರಣ ಎಂಬ ಸುದ್ದಿಯನ್ನು ಸಂಗೀತಾ ಅವರ ಸಹೋದರಿ ಪಲ್ಲವಿ ಪಾಟೀಲ್ ತಳ್ಳಿಹಾಕಿದ್ದಾರೆ. ಐಫೋನ್ ಇಎಂಐ ವಿಚಾರಕ್ಕೆ ಕುಟುಂಬದಲ್ಲಿ ಇಂತಹ ಘಟನೆ ನಡೆದಿದೆ ಎಂಬುದು ಕೇವಲ ವದಂತಿ. ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಐಫೋನ್ EMI ವಿಚಾರಕ್ಕೆ ಮೂವರ ದುರಂತ ಅಂತ್ಯ – 2025ರಲ್ಲಿ ಅದೇ ಜಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ
ಸಹೋದರಿ, ಸೋದರಳಿಯ ಹಾಗೂ ಭಾವನನ್ನು ಕಳೆದುಕೊಂಡ ನೋವಿನಲ್ಲಿರುವ ಪಲ್ಲವಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಕುಟುಂಬಕ್ಕೆ ಮತ್ತಷ್ಟು ನೋವುಂಟು ಮಾಡುತ್ತಿವೆ ಎಂದು ಹೇಳಿದ್ದಾರೆ.
ನಿಮಗೆ ನಮ್ಮ ಕುಟುಂಬದ ಬಗ್ಗೆ ಏನೂ ಗೊತ್ತಿಲ್ಲ. ಘಟನೆ ಹಿಂದೆ ಏನಿದೆ ಎಂಬುದೂ ಗೊತ್ತಿಲ್ಲ. ಆದರೂ ನಿಮ್ಮ ಅಭಿಪ್ರಾಯಗಳನ್ನು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಿದ್ದೀರಿ. ದಯವಿಟ್ಟು ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕುಟುಂಬದಲ್ಲಿ ಮೊದಲೇ ಇತ್ತು ಮನಸ್ತಾಪ
ಪೊಲೀಸರ ತನಿಖೆಯಲ್ಲಿ ಕುಟುಂಬದೊಳಗಿನ ಹಳೆಯ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಹೊರಬರುತ್ತಿದೆ. ಮುರಳೀಧರ್ ಟ್ರಕ್ ಚಾಲಕರಾಗಿದ್ದು, ಸಂಗೀತಾ ಗೃಹಿಣಿಯಾಗಿದ್ದರು. ಸುಮಾರು ಆರು ವರ್ಷಗಳ ಹಿಂದೆ ದಂಪತಿ ತಮ್ಮ ಹಿರಿಯ ಮಗನನ್ನು ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಬಳಿಕ ಕುಟುಂಬದಲ್ಲಿ ಮನಸ್ತಾಪ ಹೆಚ್ಚಾಗಿತ್ತು ಎನ್ನಲಾಗಿದೆ.
ಮುರಳೀಧರ್ ಹಲವು ತಿಂಗಳು ಕೆಲಸದ ಕಾರಣದಿಂದ ಹೊರಗೇ ಇರುತ್ತಿದ್ದರು. ಘಟನೆ ನಡೆಯುವ ಎರಡು ದಿನಗಳ ಮೊದಲು ಅವರು ಮನೆಗೆ ವಾಪಸ್ ಬಂದಿದ್ದರು. ಈ ವೇಳೆ ದಂಪತಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.
ಸಂಗೀತಾ 29 ಸಾವಿರಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದ ಯೂಟ್ಯೂಬರ್ ಆಗಿದ್ದರು. ಅವರು ತಮ್ಮ ಮಗ ಕುನಾಲ್ ಜೊತೆಗಿನ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಇದನ್ನೂ ಓದಿ: ಐಫೋನ್ EMI ವಿಚಾರಕ್ಕೆ ದುರಂತ – ತಾಯಿ ಕಾಲಿಗೆ ಬಿದ್ದರೂ ಕೇಳಲಿಲ್ಲ, ತಾಳಿಯನ್ನೇ ಬಿಚ್ಚಿಕೊಟ್ಟರೂ ಕರಗಲಿಲ್ಲ ಮಗ
ಈ ಎಲ್ಲಾ ಅಂಶಗಳನ್ನು ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಐಫೋನ್ ಇಎಂಐ ಕಾರಣದಿಂದಲೇ ಈ ದುರಂತ ನಡೆದಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕುಟುಂಬದ ಹಳೆಯ ಮನಸ್ತಾಪ, ಸಂಬಂಧಗಳಲ್ಲಿನ ಸಮಸ್ಯೆಗಳು ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
