‘ಸಲಗ’ ಹಾಗೂ ‘ಭೀಮ’ ಸಿನಿಮಾಗಳ ಬಳಿಕ ನಿರ್ದೇಶಕ ವಿಜಯ್ ಕುಮಾರ್ (Dunia Vijay) ಅವರ ಮೂರನೇ ಸಿನಿಮಾ ‘ಸಿಟಿ ಲೈಟ್ಸ್’ (City Lights) ತೆರೆಗೆ ಬರಲು ಸಜ್ಜಾಗಿದೆ. ಈ ನಡುವೆ ಚಿತ್ರದ ನಾಲ್ಕನೇ ಹಾಡು ಬಿಡುಗಡೆಯಾಗಿದ್ದು, ಪ್ರೀತಿಯ ಕಥೆ ಹೇಳುವ ಹಾಡು ಗಮನ ಸೆಳೆಯುತ್ತಿದೆ.
ದೂರದ ಊರುಗಳಿಂದ ಬೆಂಗಳೂರಿಗೆ ಬಂದು ತಮ್ಮದೇ ಬದುಕು ಕಟ್ಟಿಕೊಂಡಿರುವ ಜೋಡಿಗಳ ಪ್ರೀತಿಯ ಕ್ಷಣಗಳನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ‘ಅವರಿವರ ಮಾತು ಕೇಳಿ ಪ್ರೀತಿ ಕಳೆದುಕೊಳ್ಳಬೇಡಿ.. ಪ್ರೀತಿ ಅಪರೂಪ, ಅದನ್ನು ಕಳೆದುಕೊಳ್ಳಬೇಡಿ.. ಇವನ ಕಂಡ್ರೆ ಅವಳು ಫಿದಾ, ಇವಳ ಕಂಡ್ರೆ ಅವನು ಫಿದಾ’ ಎನ್ನುವ ಸಾಲುಗಳು ಹಾಡಿನ ಪ್ರಮುಖ ಆಕರ್ಷಣೆಯಾಗಿವೆ.
ಯುವ ಕಲಾವಿದರಾದ ಸಿದ್ದು ಮೂಲಿಮನಿ, ಪಾಯಲ್ ಚೆಂಗಪ್ಪ ಹಾಗೂ ಸುಧಾಕರ್ ಗೌಡ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ವಿಜಯ್ ಕುಮಾರ್ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಹಾಡಿಗೆ ಅಂಥೋಣಿ ದಾಸ್ ಧ್ವನಿ ನೀಡಿದ್ದಾರೆ.
ಯುವ ನಟ ಸಿದ್ದು ಮೂಲಿಮನಿ ಮಾತನಾಡಿ, ಹಾಡು ಮುದ್ದಾಗಿ ಮೂಡಿ ಬಂದಿದೆ. ಹಾಡು ನೋಡುವಾಗ ಪತ್ನಿ ನೆನಪಾದರು ಎಂದು ಹೇಳಿದ್ದಾರೆ. ‘ಕಂದಮ್ಮ’ ಹಾಡಿನ ಬಳಿಕ ಈ ಹಾಡು ಕೂಡ ಗಮನ ಸೆಳೆಯುತ್ತಿದೆ. ದೊಡ್ಡ ವೇದಿಕೆಯಲ್ಲಿ ಅವಕಾಶ ನೀಡಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ನಟಿ ಪಾಯಲ್ ಚೆಂಗಪ್ಪ ಮಾತನಾಡಿ, ‘ಕಂದಮ್ಮ’ ಹಾಡಿನ ರೀತಿಯಲ್ಲೇ ಈ ಹಾಡನ್ನೂ ಜನರು ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಟ ಸುಧಾಕರ್ ಗೌಡ ಮಾತನಾಡಿ, ಪ್ರತಿಭೆ ಇದ್ದರೆ ಬಣ್ಣ ಮುಖ್ಯವಾಗುವುದಿಲ್ಲ. ವಿಜಯ್ ಕುಮಾರ್ ಯುವಕರಿಗೆ ದೊಡ್ಡ ಸ್ಪೂರ್ತಿ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ ಎಂದರು.
ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ಯುವ ಕಲಾವಿದರೇ ಚಿತ್ರರಂಗವನ್ನು ಮುಂದಕ್ಕೆ ಕೊಂಡೊಯ್ಯಬೇಕು. ಸಿನಿಮಾದ ಹಾಡಿನಲ್ಲಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡ ಜೋಡಿಗಳ ಕಥೆಯನ್ನು ತೋರಿಸಲಾಗಿದೆ. ಅವರು ನಮಗೆ ಸ್ಪೂರ್ತಿ ಎಂದು ಹೇಳಿದರು.
ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಜೋಡಿಗಳು ನಿಜ ಜೀವನದಲ್ಲಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡವರು. ಅಂತಹ ಜೋಡಿಗಳನ್ನು ಹುಡುಕಿ ಅವರ ಫೋಟೋಗಳನ್ನು ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ಈ ಹಾಡು ಸಿನಿಮಾದಲ್ಲಿ ಇರುವುದಿಲ್ಲ. ಯೂಟ್ಯೂಬ್‌ನಲ್ಲಿ ಮಾತ್ರ ಲಭ್ಯವಿರಲಿದೆ ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.
ಸಿನಿಮಾ ಮತ್ತು ಸಂಗೀತ ಎಂದಿಗೂ ಮೋಸ ಮಾಡುವುದಿಲ್ಲ. ಹೀಗಾಗಿ ಕಷ್ಟಪಟ್ಟು ಸಿನಿಮಾ ಮಾಡುತ್ತಿದ್ದೇನೆ. ‘ಸಲಗ’ ಮತ್ತು ‘ಭೀಮ’ ಸಿನಿಮಾಗಳ ಮಾದರಿಯಲ್ಲೇ ಇಡೀ ತಂಡ ಶ್ರಮಿಸಿದೆ. ‘ಸಿಟಿ ಲೈಟ್ಸ್’ ಹೆಣ್ಣು ಮಕ್ಕಳಿಗೆ ಗೌರವ ತರುವ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದರು.
ತಮ್ಮ ಬಗ್ಗೆ ಮಾತನಾಡಿದ ವಿಜಯ್ ಕುಮಾರ್, ತಾವು ಸ್ಟಾರ್ ಎಂದುಕೊಂಡಿಲ್ಲ, ಕೆಲಸಗಾರ ಎಂದುಕೊಂಡಿದ್ದೇನೆ. ಒಂದು ದಿನ ಪ್ರಶಸ್ತಿ ಬಂದರೆ ಅದನ್ನು ಸ್ವೀಕರಿಸಿ ಮತ್ತೆ ಕೆಲಸ ಮಾಡಬೇಕು. ಸತ್ಯವನ್ನು ಸತ್ಯವಾಗಿ ತೋರಿಸುವುದು ಸವಾಲಿನ ಕೆಲಸ ಎಂದರು. ಚಿತ್ರಕ್ಕೆ ಇನ್ನೊಂದು ಹಾಡು ಬಾಕಿಯಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ನಟ ವಿನಯ್ ರಾಜ್‌ಕುಮಾರ್ ಮಾತನಾಡಿ, ಹಾಡನ್ನು ತಮ್ಮ ಅಮ್ಮನಿಗೆ ಕೇಳಿಸಿದ್ದು, ಅವರು ಖುಷಿಪಟ್ಟಿದ್ದಾರೆ ಎಂದು ಹೇಳಿದರು. ‘ಸಿಟಿ ಲೈಟ್ಸ್’ ಹಾಡು ಪ್ರೀತಿಯ ಬಗ್ಗೆ ಮೂಡಿ ಬಂದಿದೆ. ಪ್ರತಿಯೊಂದು ಜೋಡಿಯೂ ತಮ್ಮದೇ ಪ್ರಪಂಚವನ್ನು ಸೃಷ್ಟಿಸಿಕೊಂಡಿರುತ್ತದೆ. ಪ್ರೀತಿಗೆ ಒಂದೇ ರೀತಿಯ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ. ಪ್ರೀತಿ ಎಂದರೆ ಸಮಯ ನೀಡುವುದು ಎಂದು ಹೇಳಿದರು. ಇದನ್ನೂ ಓದಿ: ದರ್ಶನ್‌ಗೆ ಅತಿದೊಡ್ಡ ಸಂಕಷ್ಟ; ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ
ನಟಿ ಮೋನಿಷಾ ಮಾತನಾಡಿ, ಪ್ರೀತಿಯ ಬಗ್ಗೆ ಹೇಳುವಷ್ಟು ತಿಳುವಳಿಕೆ ನನಗಿಲ್ಲ. ಆದರೆ ಸಿನಿಮಾ ಅತ್ಯುತ್ತಮವಾಗಿ ಮೂಡಿ ಬಂದಿದೆ. ಎಲ್ಲರ ಸಹಕಾರ ಇರಲಿ ಎಂದು ಹೇಳಿದರು.
ಗೀತರಚನೆಕಾರ ನಾಗಾರ್ಜುನ್ ಶರ್ಮಾ ಮಾತನಾಡಿ, ‘ಸಿಟಿ ಲೈಟ್ಸ್’ ಚಿತ್ರದ ಸೋಲ್‌ವೇ ಪ್ರೀತಿ. ಪ್ರೀತಿ ಸಿಗುವುದು ಅಪರೂಪ, ಸಿಕ್ಕ ಪ್ರೀತಿಯನ್ನು ಕಾಪಾಡಿಕೊಳ್ಳೋಣ ಎಂದರು.
ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, ನಿರ್ದೇಶಕ ವಿಜಯ್ ಕುಮಾರ್ ಅವರ ಮಾರ್ಗದರ್ಶನದಿಂದ ಹಾಡು ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: 3-4 ದಿನದಲ್ಲಿ ಮೋಡ ಬಿತ್ತನೆ, 27 ಕೋಟಿ ರೂ. ವೆಚ್ಚ: ಚಲುವರಾಯಸ್ವಾಮಿ
