– ಅಗ್ನಿಪಥ್ ಯೋಜನೆ ಅಡಿಯಲ್ಲಿ ಗೂರ್ಖಾಗಳನ್ನು ನೇಮಿಸಿ
– ನೇಪಾಳ ಸರ್ಕಾರದ ವಿರುದ್ಧ ಆಕ್ರೋಶ
ಕಠ್ಮಂಡು/ನವದೆಹಲಿ: ಭಾರತೀಯ ಸೇನೆಯಲ್ಲಿ(Indian Army) ನೇಪಾಳಿ ಯುವಕರ ನೇಮಕಾತಿಯನ್ನು ಅಗ್ನಿಪಥ್ (Agnipath Scheme) ಯೋಜನೆಯಡಿಯಲ್ಲಿ ತಕ್ಷಣವೇ ಪುನರಾರಂಭಿಸಬೇಕು ಎಂದು ಆಗ್ರಹಿಸಿ ನೇಪಾಳದ(Nepal) ಪೋಖರಾ ನಗರದಲ್ಲಿ ಮಾಜಿ ಗೂರ್ಖಾ ಸೈನಿಕರು(Former Gorkha Soldiers) ಹಾಗೂ ಅವರ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ನೇಪಾಳಿ ಪೋರ್ಟಲ್ ‘ರಾಟೋಪಾಟಿ’ ವರದಿಯ ಪ್ರಕಾರ, ಪ್ರತಿಭಟನೆಯು ಬುಧವಾರ (ಆಗಸ್ಟ್ 12) ನಡೆದಿದ್ದು, ‘ಇಂಡಿಯನ್ ಎಕ್ಸ್-ಸರ್ವೀಸ್‌ಮೆನ್ ಗೂರ್ಖಾ ಬ್ರಿಗೇಡ್ ನೇಪಾಳ ಪೋಖರಾ’ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಭಾರತದ ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಥ್ ಅವರ ನೇಪಾಳ ಪ್ರವಾಸದ ಮುನ್ನಾದಿನಗಳಲ್ಲೇ ಈ ಪ್ರತಿಭಟನೆ ನಡೆದಿರುವುದು ವಿಶೇಷ.
ಭಾರತೀಯ ಸೇನೆಗೆ ನೇಪಾಳಿ ಯುವಕರ ನೇಮಕಾತಿಯನ್ನು ತಕ್ಷಣವೇ ಪುನರಾರಂಭಿಸುವುದು. ತಮ್ಮ ಹೆಸರಿನಲ್ಲಿ ಸೈನಿಕ (Soldier) ಎಂಬ ಪದವನ್ನು ಬಳಸುವ ಮಾಜಿ ಸೈನಿಕರ ಸಂಸ್ಥೆಗಳನ್ನು ನವೀಕರಿಸಬೇಕೆಂದು ನೇಪಾಳ ಸರ್ಕಾರಕ್ಕೆ ಬೇಡಿಕೆ ಇರಿಸಿದೆ. ತಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬ್ರಿಗೇಡ್ ಅಧ್ಯಕ್ಷ ಕರ್ನಲ್ ಕೃಷ್ಣ ಬಹದ್ದೂರ್ ಖತ್ರಿ ಪ್ರತಿಕ್ರಿಯಿಸಿ, ಸುಗೌಲಿ ಒಪ್ಪಂದದ (Sugauli Treaty) ನಂತರ ಕಳೆದ 207 ವರ್ಷಗಳಿಂದ ಭಾರತೀಯ ಸೇನೆಗೆ ನೇಪಾಳಿ ಯುವಕರ ನೇಮಕಾತಿ ನಿರಂತರವಾಗಿ ನಡೆಯುತ್ತಿತ್ತು. ಆದರೆ ಅಗ್ನಿಪಥ್ ಯೋಜನೆ ಜಾರಿಗೆ ಬಂದ ನಂತರ ಸರ್ಕಾರ ನಾನಾ ಕಾರಣಗಳನ್ನು ನೀಡಿ ನೇಪಾಳಿ ಯುವಕರು ಭಾರತೀಯ ಸೇನೆಗೆ ಸೇರುವುದನ್ನು ತಡೆದಿದೆ. ಇದರಿಂದಾಗಿ ಎರಡು ಶತಮಾನಗಳ ಚಾರಿತ್ರಿಕ ಬಾಂಧವ್ಯ ಅಪಾಯದಲ್ಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ SBI ಉದ್ಯೋಗಿಗಳಿಬ್ಬರು ನೇಣಿಗೆ ಶರಣು
ಗಲ್ಫ್‌ಗಿಂತ ಭಾರತೀಯ ಸೇನೆ ಉತ್ತಮ
ನೇಮಕಾತಿ ಸ್ಥಗಿತಗೊಂಡಿರುವುದರಿಂದ ನೇಪಾಳಿ ಯುವಕರು ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ ಕರ್ನಲ್ ಖತ್ರಿ ಅಗ್ನಿಪಥ್ ಯೋಜನೆಯ 4 ವರ್ಷಗಳ ಸೇವಾವಧಿಯಲ್ಲಿ ಯುವಕರು ವಿವಿಧ ಸೌಲಭ್ಯಗಳೊಂದಿಗೆ ಸುಮಾರು 45 ರಿಂದ 50 ಲಕ್ಷ ರೂಪಾಯಿಗಳನ್ನು ಸಂಪಾದಿಸಬಹುದು. 50 ಡಿಗ್ರಿ ಸೆಲ್ಸಿಯಸ್ ಸುಡುವ ಬಿಸಿಲಿನಲ್ಲಿ ಕನಿಷ್ಠ ವೇತನಕ್ಕಾಗಿ ಗಲ್ಫ್ ದೇಶಗಳಿಗೆ (Gulf Countries) ಕೆಲಸಕ್ಕೆ ಹೋಗುವುದಕ್ಕಿಂತ ಭಾರತೀಯ ಸೇನೆಗೆ ಸೇರುವುದು ನೂರಾರು ಪಟ್ಟು ಮೇಲು ಎಂದು ಜ್ಞಾಪನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಭಾರತ ಸರ್ಕಾರವು 2022ರಲ್ಲಿ ಸೇನೆಗೆ ಹೊಸ ‘ಅಗ್ನಿಪಥ್’ ನೇಮಕಾತಿ ಮಾದರಿಯನ್ನು ಪರಿಚಯಿಸಿತು. ಇದರಡಿಯಲ್ಲಿ ‘ಅಗ್ನಿವೀರರು’ 4 ವರ್ಷ ಸೇವೆ ಸಲ್ಲಿಸುತ್ತಾರೆ ಮತ್ತು ಶೇ. 25ರಷ್ಟು ಜನರನ್ನು ಮುಂದುವರಿದ ಸೇವೆಗೆ ಉಳಿಸಿಕೊಳ್ಳಲಾಗುತ್ತದೆ. ಕೋವಿಡ್-19 ಕಾರಣದಿಂದ 2020ರಲ್ಲೇ ನೇಮಕಾತಿ ಸ್ಥಗಿತಗೊಂಡಿತ್ತು. 2022ರಲ್ಲಿ ಅಗ್ನಿಪಥ್ ಜಾರಿಯಾದಾಗ 4 ವರ್ಷಗಳ ಸೇವೆಯ ನಂತರ ಯುವಕರ ಭವಿಷ್ಯವೇನು ಎಂಬ ಸ್ಪಷ್ಟತೆ ಇಲ್ಲ ಎಂದು ಹೇಳಿ ನೇಪಾಳ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಅಮಾನತಿನಲ್ಲಿಟ್ಟಿತ್ತು.
ಚಾರಿತ್ರಿಕ ಹಿನ್ನೆಲೆ ಏನು?
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ, ಭಾರತ, ಬ್ರಿಟನ್ ಮತ್ತು ನೇಪಾಳ ನಡುವೆ ನಡೆದ ತ್ರಿಪಕ್ಷೀಯ ಒಪ್ಪಂದದ ಪ್ರಕಾರ ಗೂರ್ಖಾ ಸೈನಿಕರನ್ನು ಭಾರತೀಯ ಹಾಗೂ ಬ್ರಿಟಿಷ್ ಸೇನೆಗೆ ನೇಮಕ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.1815ರ ಆಂಗ್ಲೋ-ನೇಪಾಳ ಯುದ್ಧದ ನಂತರ ಈಸ್ಟ್ ಇಂಡಿಯಾ ಕಂಪನಿಯು ಗೂರ್ಖಾಗಳನ್ನು ತನ್ನ ಸೇನೆಗೆ ಸೇರಿಸಿಕೊಳ್ಳಲು ಪ್ರಾರಂಭಿಸಿತ್ತು.1947ರಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿದ್ದ 6 ಗೂರ್ಖಾ ರೆಜಿಮೆಂಟ್‌ಗಳು ನೂತನ ಸ್ವತಂತ್ರ ಭಾರತೀಯ ಸೇನೆಯ ಭಾಗವಾದವು. ಇದನ್ನೂ ಓದಿ: ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದೇ ಮೋದಿ ವಿದೇಶಾಂಗ ನೀತಿ: ಕಾಂಗ್ರೆಸ್ ನಾಯಕನ ತಬ್ಬಿಕೊಂಡು ರಾಗಾ ವ್ಯಂಗ್ಯ
ಭಾರತ ಹೇಳಿದ್ದೇನು?
ನಿವೃತ್ತ ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಸೈನಿಕರನ್ನು ಕಳುಹಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಹೊಣೆಗಾರಿಕೆ ಈಗ ನೇಪಾಳ ಸರ್ಕಾರ ಮೇಲಿದೆ. ಭಾರತೀಯ ನಾಗರಿಕರಿಗೆ ಒಂದು ನಿಯಮ ಹಾಗೂ ನೇಪಾಳದ ನಾಗರಿಕರಿಗೆ ಮತ್ತೊಂದು ನಿಯಮ ಮಾಡಲು ಸಾಧ್ಯವಿಲ್ಲ ಎಂದಿದ್ದರು.
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಥ್ ಅವರು ಆಗಸ್ಟ್ 16 ರಿಂದ 5 ದಿನಗಳ ಕಾಲ ನೇಪಾಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸದ ವೇಳೆ ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೇಲ್ ಅವರು ಜನರಲ್ ಸೇಥ್ ಅವರಿಗೆ ‘ನೇಪಾಳಿ ಸೇನೆಯ ಗೌರವ ಜನರಲ್’ ಹುದ್ದೆಯನ್ನು ನೀಡಿ ಗೌರವಿಸಲಿದ್ದಾರೆ. ಪ್ರವಾಸದ ವೇಳೆ ಅವರು ನೇಪಾಳ ಪ್ರಧಾನಿ ಬಾಲೆಂದ್ರ ಶಾ ಅವರನ್ನು ಸಹ ಭೇಟಿಯಾಗಲಿದ್ದಾರೆ.
