ಬೆಂಗಳೂರು: ಅಹಿಂಸೆ ಹಾಗೂ ಅಹಿಂಸಾ ಸತ್ಯಾಗ್ರಹಗಳಿಂದ ಮಾತ್ರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಎನ್ನುವ ಭಾವನೆ ಹಲವರಲ್ಲಿದೆ. ಆದರೆ ಕೇವಲ ಅಹಿಂಸೆಯಿಂದ ಮಾತ್ರವಲ್ಲ, ಅದೆಷ್ಟೋ ಕ್ರಾಂತಿಕಾರಿಗಳ ಕೆಚ್ಚೆದೆಯ ಹೋರಾಟವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಕ್ರಾಂತಿಯ ಕಿಡಿಗಳು ಪುಸ್ತಕದಲ್ಲಿ 33 ಅಜ್ಞಾತ, ಅನಾಮಿಕ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಇದೆ. ಇದು ನಮಗೆ ತಿಳಿದಿರದ, ನಾವು ಕೇಳಿರದ ಹಲವು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನು ನಮಗೆ ಪರಿಚಯಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಸಹ ಸರಕಾರ್ಯವಾಹರಾದ ಮುಕುಂದ(Mukunda) ಅವರು ಅಭಿಪ್ರಾಯ ಪಟ್ಟರು.

ಚಾಮರಾಜಪೇಟೆಯ ಕೇಶವಕೃಪಾದಲ್ಲಿ ಕ್ರಾಂತಿಯ ಕಿಡಿಗಳು(Krantiya Kidigalu) ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, ಬ್ರಿಟಿಷರ ಬಳಿ ನಮಗೆ ಸ್ವಾತಂತ್ರ್ಯ ಕೊಡಿ ಎಂದು ಪ್ರಾರ್ಥನೆ ಮಾಡುವ ಒಂದು ವರ್ಗವಿದ್ದರೆ, ಸ್ವಾತಂತ್ರ್ಯ ನಮ್ಮ ಹಕ್ಕು ಎಂದು ಬಲವಾಗಿ ಪ್ರತಿಪಾದಿಸಿದ್ದು ಇನ್ನೊಂದು ವರ್ಗ. ಮೂರನೇ ವರ್ಗ ಕ್ರಾಂತಿಕಾರಿಗಳದ್ದು. ಇವರು ಬ್ರಿಟಿಷರಿಗೆ ಬ್ರಿಟಿಷರದ್ದೇ ಮಾರ್ಗದಲ್ಲಿ ಸಾಗಿ ಬಂದೂಕು, ಮದ್ದು–ಗುಂಡುಗಳನ್ನು ಬಳಸಿ ಉತ್ತರ ನೀಡಿದ್ದರು. ಮತ್ತೊಂದು ವರ್ಗ ಸಮಾಜ ಸುಧಾರಣೆಯ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು. ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದಲೇ ಕ್ರಾಂತಿಕಾರಿ ಹೋರಾಟಗಳು ನಡೆದಿದ್ದವು. ಕ್ರಾಂತಿಕಾರಿಗಳಾಗಿ ಸಶಸ್ತ್ರ ಹೋರಾಟಗಳಲ್ಲಿ ಭಾಗವಹಿಸಿದ ಹಲವರ ಕುರಿತು ಈ ಪುಸ್ತಕದಲ್ಲಿ ಉಲ್ಲೇಖವಿದೆ. ಸ್ವಾತಂತ್ರ್ಯೋತ್ಸವದ ಸಂದರ್ಭ ಅಂತಹ ಅಜ್ಞಾತ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಲು ಇದು ಉತ್ತಮ ಪುಸ್ತಕ ಎಂದು ಮುಕುಂದ ಅವರು ಪುಸ್ತಕ ಪರಿಚಯಿಸಿ ಮಾತನಾಡಿದರು.

ಕ್ರಾಂತಿಯ ಕಿಡಿಗಳು ಪುಸ್ತಕದ ಲೇಖಕರಾದ ದು. ಗು. ಲಕ್ಷ್ಮಣ್ ಮಾತನಾಡಿ ‘ಈ ಪುಸ್ತಕದಲ್ಲಿ 1857ರಲ್ಲಿಯೇ ಬಂಧನವಾಗಿ 50 ವರ್ಷ ಶಿಕ್ಷೆ ಅನುಭವಿಸಿದ ಮುಸಾಯ್ ಸಿಂಗ್ ಕಥೆಯಿದೆ. ಬಹುಶಃ ಈತನ ಹೆಸರು ಯಾರೂ ಕೇಳಿರಲಿಕ್ಕಿಲ್ಲ. ಆತ 50 ವರ್ಷಗಳ ಕಾಲ ಅಂಡಮಾನ್ ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಾಗಿ ಬಂತು. ನಾವೆಲ್ಲರು ಅಂಡಮಾನ್‌ನಲ್ಲಿ ಶಿಕ್ಷೆ ಅನುಭವಿಸಿದ ಸಾವರ್ಕರ್ ಬಗ್ಗೆ ಕೇಳಿದ್ದೇವೆ. ಹದಿಮೂರು ವರ್ಷ ಶಿಕ್ಷೆ ಅನುಭವಿಸಿ ಸಾವರ್ಕರ್ ವಾಪಸ್ ಬಂದ್ರು. ಆದರೆ, ಮುಸಾಯ್ ಸಿಂಗ್ 50 ವರ್ಷ ಶಿಕ್ಷೆ ಅನುಭವಿಸಿದ. ಈತನ ಕಥೆ ಎಲ್ಲೂ ಬಂದಿಲ್ಲ. ಇತಿಹಾಸಕಾರರೊಬ್ಬರು ‘1857 ಫ್ರೀಡಂ ಆಫ್ ಸೌತ್ ಇಂಡಿಯಾ‘ ಪುಸ್ತಕದಲ್ಲಿ ಈತನ ಬಗ್ಗೆ ಬರೆದಿದ್ದರು. ಈ ಪುಸ್ತಕದಲ್ಲಿ ಅವನ ಬಗ್ಗೆ ವಿವರವಿದೆ, ಆದರೆ ಆತನ ಫೋಟೊ ಎಲ್ಲೂ ಸಿಗುತ್ತಿಲ್ಲ ಎಂದರು. ಇದನ್ನೂ ಓದಿ: 10, 20 ರೂ. ಮುಖಬೆಲೆಯ ಪಾಲಿಮರ್ ನೋಟು ಪ್ರಾಯೋಗಿಕ ಬಳಕೆಗೆ ಕೇಂದ್ರ ಒಪ್ಪಿಗೆ
ಈ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷರಾದ ಎಂ.ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆ, ಖಜಾಂಜಿ ಕೆ. ಎಸ್. ನಾರಾಯಣ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
