– ದೆಹಲಿಯಲ್ಲಿ ಹೈ ಅಲರ್ಟ್, ಮಾಹಿತಿ ಕೊಟ್ಟವರಿಗೆ ಬಹುಮಾನ ಘೋಷಣೆ

ನವದೆಹಲಿ: ಸ್ವಾತಂತ್ರ್ಯೋತ್ಸವಕ್ಕೆ (Independence Day) ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿದೆ. ಈ ಹೊತ್ತಲ್ಲೇ ದೆಹಲಿ ಪೊಲೀಸರು (Delhi Police) ಅಘಾತಕಾರಿ ವಿಷಯವೊಂದನ್ನು ಬಹಿರಂಗ ಪಡಿಸಿದ್ದಾರೆ. ಹೌದು, 19 ಮೋಸ್ಟ್ ವಾಂಟೆಡ್ ಉಗ್ರರ (Most Wanted Terrorists) ಪೋಸ್ಟರ್‌ನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಸ್ವಾತಂತ್ರ್ಯೋತ್ಸವದ ಸಂಭ್ರಮದ ಜೊತೆ ಆತಂಕ ಸಹ ಮನೆ ಮಾಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಪೊಲೀಸರು ಇಂಡಿಯನ್ ಮುಜಾಹಿದ್ದೀನ್, ಅಲ್-ಖೈದಾ ಮತ್ತು ಖಲಿಸ್ತಾನಿ ಭಯೋತ್ಪಾದಕರ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಅವರ ವಿವರಗಳಿವೆ. ಅವರ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಉಗ್ರರ ಬಂಧನಕ್ಕೆ ಅನುಕೂಲವಾಗುವ ಮಾಹಿತಿ ಕೊಟ್ಟವರಿಗೆ ಸೂಕ್ತ ಬಹುಮಾನ ಸಹ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಮಾಹಿತಿ ನೀಡಿದವರ ಗುರುತು ಬಹಿರಂಗ ಪಡಿಸುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಅನಂತನಾಗ್‌ನಲ್ಲಿ ಬಾಲ ಬಿಚ್ಚಿದ ಉಗ್ರರು – ಇಬ್ಬರ ಮನೆ ಧ್ವಂಸಗೊಳಿಸಿದ ಸೇನೆ
ದೆಹಲಿ ಪೊಲೀಸರು ಭದ್ರತಾ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅಲ್ಲದೇ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳು, ಪ್ರಮುಖ ಮಾರುಕಟ್ಟೆಗಳು, ರೈಲು ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ವೇಳೆ ಸಂಭಾವ್ಯ ಭಯೋತ್ಪಾದಕ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಪೊಲೀಸರು ರಾಜಧಾನಿಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳು ಮತ್ತು ಜನದಟ್ಟಣೆಯ ಮಾರುಕಟ್ಟೆಗಳಲ್ಲಿ 19 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.
ಪೋಸ್ಟರ್‌ನಲ್ಲಿರೋ ಮೋಸ್ಟ್ ವಾಂಟೆಡ್ ಉಗ್ರರು ಯಾರು?
ದೆಹಲಿ ಪೊಲೀಸರು ಬಿಡುಗಡೆ ಮಾಡಿದ ಪೋಸ್ಟರ್‌ನಲ್ಲಿ ಇಂಡಿಯನ್ ಮುಜಾಹಿದ್ದೀನ್, ಅಲ್-ಖೈದಾ ಮತ್ತು ವಿವಿಧ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ವಾಂಟೆಡ್ ಶಂಕಿತರ ಛಾಯಾಚಿತ್ರಗಳು ಮತ್ತು ಗುರುತಿನ ವಿವರಗಳಿವೆ.
ಇಂಡಿಯನ್ ಮುಜಾಹಿದ್ದೀನ್‌ನೊಂದಿಗೆ ಸಂಬಂಧ ಹೊಂದಿರುವ ರಿಯಾಜ್ ಭಟ್ಕಳ್ ಮತ್ತು ಶಬಂದ್ರಿ ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಭಟ್ಕಳ್ ಸೇರಿದ್ದಾರೆ. ಅಲ್-ಖೈದಾದೊಂದಿಗೆ ಸಂಬಂಧ ಹೊಂದಿರುವ ಮೊಹಮ್ಮದ್ ಶಾರ್ಜೀಲ್ ಅಖ್ತರ್, ಅಬು ಸುಫಿಯಾನ್ ಮತ್ತು ಸೈಯದ್ ಮೊಹಮ್ಮದ್ ಅರ್ಷಿಯಾನ್‌ನ ಮಾಹಿತಿ ಪೋಸ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಖಲಿಸ್ತಾನಿ ಭಯೋತ್ಪಾದಕರಲ್ಲಿ, ಖಲಿಸ್ತಾನ್ ಜಿಂದಾಬಾದ್ ಫೋರ್ಸ್‌ನ ರಂಜಿತ್ ಸಿಂಗ್ ಅಲಿಯಾಸ್ ನೀತಾ ಮತ್ತು ಪರಮಜಿತ್ ಸಿಂಗ್ ಪಮ್ಮಾ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್‌ನ ಅರ್ಶ್ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾನನ್ನು ಪ್ರಮುಖವಾಗಿ ಹೆಸರಿಸಲಾಗಿದೆ. ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ನೊಂದಿಗೆ ಸಂಬಂಧ ಹೊಂದಿರುವ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ, ವಾಧವಾ ಸಿಂಗ್ ಬಬ್ಬರ್ ಮತ್ತು ಗುರ್ಮೀತ್ ಸಿಂಗ್ ಬಗ್ಗಾ ಸೇರಿದಂತೆ ಇತರ ವಾಂಟೆಡ್ ಭಯೋತ್ಪಾದಕರ ಬಗ್ಗೆ ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರಿಂದ ಹೈ ಅಲರ್ಟ್
ಆಗಸ್ಟ್ 15 ಮತ್ತು ಜನವರಿ 26 ರಂತಹ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಭಯೋತ್ಪಾದಕ ದಾಳಿಯ ಸಾಧ್ಯತೆ ಇರುವುದರಿಂದ ಈ ಸಮಯದಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗುತ್ತದೆ. ವಿಶೇಷವಾಗಿ ಈ ಸಮಯದಲ್ಲಿ, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು, ಧಾರ್ಮಿಕ ಸ್ಥಳಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗುತ್ತದೆ. ಶಂಕಿತರ ಬಗ್ಗೆ ಮಾಹಿತಿ ಸಿಕ್ಕರೆ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 112ಕ್ಕೆ ಮಾಹಿತಿ ನೀಡುವಂತೆ ಕೋರಲಾಗಿದೆ. ಇದನ್ನೂ ಓದಿ: ಲಷ್ಕರ್, ಜೈಶ್ ನಂಟಿದ್ದ 23 ವ್ಯಕ್ತಿಗಳನ್ನ ಉಗ್ರರು ಎಂದು ಘೋಷಿಸಿದ ಕೇಂದ್ರ
